ಲಖಿಂಪುರ್‌ ಹಿಂಸಾಚಾರ | ಪ್ರಕರಣದ ಪ್ರಮುಖ ಆರೋಪಿ ಆಶಿಶ್‌ ಮಿಶ್ರಾ ಜಾಮೀನು ರದ್ದು

  • ಲಖಿಂಪುರ್‌ ಹಿಂಸಾಚಾರದ ಪ್ರಮುಖ ಆರೋಪಿ ಆಶಿಶ್‌ ಮಿಶ್ರಾ ಮತ್ತೆ ಜೈಲಿಗೆ
  • ಜಾಮೀನು ವಜಾಗೊಳಿಸಿ ಮರು ವಿಚಾರಣೆಗೆ ಆದೇಶಿಸಿದ ಸುಪ್ರೀಂ ಕೋರ್ಟ್‌

ಲಖಿಂಪುರ್‌ ಖೇರಿ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಆಶಿಶ್‌ ಮಿಶ್ರಾಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್‌ ರದ್ದು ಪಡಿಸಿದೆ. 

ಆಶಿಶ್‌ ಮಿಶ್ರಾಗೆ ನೀಡಲಾಗಿದ್ದ ಜಾಮೀನನ್ನು ವಜಾಗೊಳಿಸಿ ತೀರ್ಪು ನೀಡಿರುವ ಭಾರತೀಯ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ನೇತೃತ್ವದ ಪೀಠ, ಒಂದು ವಾರದ ಒಳಗಾಗಿ ಪೊಲೀಸರಿಗೆ ಶರಣಾಗುವಂತೆ ಆರೋಪಿಗೆ ಗಡುವು ನೀಡಿದೆ.  

ಕೇಂದ್ರದ ಪ್ರಭಾವಿ ಸಚಿವ ಅಜಯ್‌ ಮಿಶ್ರಾ ತೇನಿಯ ಮಗನಾಗಿರುವ ಆಶಿಶ್‌ಗೆ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಮೃತ ರೈತರ ಕುಟುಂಬಸ್ಥರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಏಪ್ರಿಲ್‌ 4ರಂದು ರೈತರ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ತೀರ್ಪನ್ನು ಕಾಯ್ದಿರಿಸಿತ್ತು.

ಇಂದು (ಏಪ್ರಿಲ್‌ 18) ತೀರ್ಪು ಪ್ರಕಟಿಸಿರುವ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ನೇತೃತ್ವದ ಪೀಠ ಆರೋಪಿಗೆ ನೀಡಲಾಗಿದ್ದ ಜಾಮೀನು ವಜಾಗೊಳಿಸಿದೆ. ಜಾಮೀನು ನೀಡಿದ್ದ ಅಲಹಾಬಾದ್‌ ಹೈಕೋರ್ಟ್‌ಗೆ ಪ್ರಕರಣದ ಮರುವಿಚಾರಣೆ ನಡೆಸುವಂತೆ ಸೂಚಿಸಿದೆ. 

ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಕಾಯ್ದೆಗಳನ್ನು ವಿರೋಧಿಸಿ 2022ರ ಅಕ್ಟೋಬರ್‌ 3ರಂದು ಉತ್ತರ ಪ್ರದೇಶದ ಲಖಿಂಪುರ್‌ ಖೇರಿಯಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್‌ ಮಿಶ್ರಾ ತೇನಿ ಅವರ ಕಾರ್ಯಕ್ರಮಕ್ಕೆ ರೈತರು ಘೇರಾವ್‌ ಹಾಕಿದ್ದರು. ಸಚಿವರ ವಿರುದ್ಧ ಪ್ರತಿಭಟನೆ ನಡೆಸಿ ಶಾಂತಿಯುತವಾಗಿ ಹಿಂತಿರುಗುತ್ತಿದ್ದ ರೈತರ ಮೇಲೆ ಸಚಿವ ಅಜಯ್‌ ಮಿಶ್ರಾಗೆ ಸೇರಿದ ಜೀಪ್‌ ಮತ್ತು ಕಾರುಗಳನ್ನು ಹರಿಸಲಾಗಿತ್ತು.

ಈ ಹಿಂಸಾಚಾರದಲ್ಲಿ 4 ಜನ ರೈತರು, ಓರ್ವ ಪತ್ರಕರ್ತ ಸೇರಿ 8 ಜನ ಮೃತ ಪಟ್ಟಿದ್ದರು. ರೈತರ ಮೇಲೆ ಜೀಪ್‌ ಹರಿಸಿದ್ದು ಕೇಂದ್ರ ಸಚಿವರ ಮಗ ಆಶಿಶ್‌ ಮಿಶ್ರಾ ಎಂದು ರೈತರು ಆರೋಪಿಸಿದ್ದರು. ಆಶಿಶ್‌ ಮಿಶ್ರಾ ಸೇರಿ ಹಲವರ ಮೇಲೆ ʼಎಫ್‌ಐಆರ್‌ʼ ದಾಖಲಿಸಿಕೊಂಡಿದ್ದ ಲಖಿಂಪುರ್‌ ಪೊಲೀಸರು ಘಟನೆ ನಡೆದು ಒಂದು ವಾರ ಕಳೆದರೂ ಆರೋಪಿಯನ್ನು ಬಂಧಿಸಿರಲಿಲ್ಲ. 

ದೇಶವನ್ನೇ ಬೆಚ್ಚಿ ಬೀಳಿಸಿದ್ದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಕೋರ್ಟ್‌ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕೂಡಲೇ ಆರೋಪಿಯನ್ನು ಬಂಧಿಸುವಂತೆ ಉತ್ತರ ಪ್ರದೇಶ ಸರ್ಕಾರ ಮತ್ತು ಪೊಲೀಸ್‌ ಇಲಾಖೆಗೆ ಆದೇಶಿಸಿತ್ತು. 

ನಿಮಗೆ ಏನು ಅನ್ನಿಸ್ತು?
1 ವೋಟ್