ತೀರ್ಥಹಳ್ಳಿ | ಎಲೆಚುಕ್ಕೆ ರೋಗಪೀಡಿತ ತೋಟಗಳಿಗೆ ಕೇಂದ್ರದ ತಜ್ಞರ ತಂಡ ಭೇಟಿ

Araga Jnanendra
  • ಕೊರೊನಾ ಲಸಿಕೆ ಮಾದರಿಯಲ್ಲೇ ಎಲೆಚುಕ್ಕೆ ರೋಗಕ್ಕೂ ಔಷಧಿ ಕಂಡುಹಿಡಿಯಿರಿʼ
  • ಎಲೆಚುಕ್ಕೆ ರೋಗ ಅಧ್ಯಯನಕ್ಕೆ ಅಡಿಕೆ ಟಾಸ್ಕ್ ಫೋರ್ಸ್ ₹3 ಕೋಟಿ ಅನುದಾನ

ಕೊರೊನಾ ರೋಗಕ್ಕೆ ಲಸಿಕೆ ಕಂಡುಹಿಡಿದ ರೀತಿಯಲ್ಲೇ ಮಲೆನಾಡು ಮತ್ತು ಕರಾವಳಿಯ ಅಡಿಕೆ ಬೆಳೆಯನ್ನು ಕಾಡುತ್ತಿರುವ ಎಲೆಚುಕ್ಕಿ ರೋಗದ ನಿಯಂತ್ರಣಕ್ಕೂ ಶೀಘ್ರವಾಗಿ ಔಷಧಿ ಕಂಡು ಹಿಡಿಯಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ, ಅಡಿಕೆ ರೋಗ ಅಧ್ಯಯನಕ್ಕಾಗಿ ರಾಜ್ಯಕ್ಕೆ ಆಗಮಿಸಿರುವ ಕೇಂದ್ರದ ತಜ್ಞರ ತಂಡಕ್ಕೆ ಮನವಿ ಮಾಡಿದ್ದಾರೆ.

ಅಡಿಕೆಯನ್ನು ಬಾಧಿಸುತ್ತಿರುವ ಎಲೆಚುಕ್ಕೆ ರೋಗ ಕುರಿತು ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ರಚಿಸಿರುವ ತಜ್ಞರ ಸಮಿತಿ ಮಂಗಳವಾರ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಸೇರಿದಂತೆ ಮಲೆನಾಡು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ವೇಳೆ ಸಚಿವರು ಹಾಗೂ ರಾಜ್ಯ ಅಡಿಕೆ ಕಾರ್ಯಪಡೆಯ ಅಧ್ಯಕ್ಷರು ಚರ್ಚೆ ನಡೆಸಿದ್ದಾರೆ.

ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳ ಬಹುತೇಕ ಅಡಿಕೆ ತೋಟಗಳಿಗೆ ಎಲೆಚುಕ್ಕೆ ರೋಗ ತೀವ್ರವಾಗಿ ಕಾಡುತ್ತಿದ್ದು, ಅದರ ನಿಯಂತ್ರಣಕ್ಕಾಗಿ ಸರ್ಕಾರ ಏಳು ತಜ್ಞರ ಸಮಿತಿಯನ್ನು ರಚಿಸಿದ್ದು, ರೋಗದ ಕುರಿತು ಅಧ್ಯಯನಕ್ಕಾಗಿ ತಜ್ಞರ ತಂಡ ರೋಗಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದೆ. ಈ ಬಗ್ಗೆ ತಂಡಕ್ಕೆ ರಾಜ್ಯ ಅಡಿಕೆ ಕಾರ್ಯಪಡೆಯ ಅಧ್ಯಕ್ಷ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.

ರಾಜ್ಯದ 45,000 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಎಲೆಚುಕ್ಕಿ ರೋಗ ಹರಡಿದ್ದು, ರೋಗದ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರ ₹50 ಲಕ್ಷ ಬಿಡುಗಡೆ ಮಾಡಿದೆ. ಅಲ್ಲದೆ, ಅಡಿಕೆ ಟಾಸ್ಕ್ ಫೋರ್ಸ್ ವತಿಯಿಂದಲೂ ₹3 ಕೋಟಿ ಅನುದಾನವನ್ನು ಸಂಶೋಧನೆಗಾಗಿ ನೀಡಲಾಗುವುದು. ಈ ರೋಗ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಮತ್ತು ಸಂತ್ರಸ್ತ ರೈತರಿಗೆ ದೀರ್ಘಕಾಲಿಕ ಪರಿಹಾರವನ್ನು ಶೀಘ್ರವಾಗಿ ತಜ್ಞರ ತಂಡ ಸೂಚಿಸಲಿದೆ ಎಂದು ಅವರು ಹೇಳಿದ್ದಾರೆ.

AV Eye Hospital ad

ಈ ಸುದ್ದಿ ಓದಿದ್ದೀರಾ? ದೆಹಲಿ ರೈತ ಹೋರಾಟಕ್ಕೆ 2 ವರ್ಷ | ಕೃಷಿ ಕಾಯ್ದೆ ಹಿಂಪಡೆಯದ ರಾಜ್ಯ ಸರ್ಕಾರ; ನ.26ಕ್ಕೆ ಬೃಹತ್‌ ಪ್ರತಿಭಟನೆ

ಅಡಿಕೆ ಎಲೆ ಚುಕ್ಕೆ ರೋಗದ ಅಧ್ಯಯನ ಕುರಿತು ಕೇಂದ್ರ ಸರ್ಕಾರ ನಿಯೋಜಿಸಿರುವ ತಂಡದ ಜೊತೆ ಗೃಹ ಸಚಿವರು, ರೈತರೊಂದಿಗೆ ಸಂವಾದ ನಡೆಸಿದ್ದು, ಈ ಕುರಿತು ಟ್ವೀಟ್‌ ಮಾಡಿದ್ದಾರೆ.

ಈ ವೇಳೆ ಕಾಸರಗೋಡಿನ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ(ಸಿಪಿಸಿಆರ್‌ಐ) ಮುಖ್ಯಸ್ಥ ಡಾ. ಮುರುಳೀಧರ್, ಕೇಂದ್ರ ಸಸ್ಯರೋಗ ವಿಜ್ಞಾನಿ ವಿನಾಯಕ ಹೆಗಡೆ, ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ಎಂ.ವಾಲಿ, ಕಲ್ಲಿಕೋಟೆಯ ಅಡಿಕೆ ಮತ್ತು ಸಾಂಬಾರು ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ. ಹೋಮಿ ಚೆರಿಯನ್, ಮಂಗಳೂರು ತೋಟಗಾರಿಕೆ ಉಪ ನಿರ್ದೇಶಕ ಡಾ. ಎಚ್ ಆರ್ ನಾಯಕ್, ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ತೋಟಗಾರಿಕೆ ವಿವಿ ಆಡಳಿತ ಮಂಡಳಿ ಸದಸ್ಯ ಅರುಣ್ ಕುಮಾರ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ ಎನ್ ಜೀವರಾಜ್ ಹಾಜರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app