ಟೊಮೆಟೊ : ನಿನ್ನೆ ನೂರು ಇಂದು ಮೂರು! ಎರಡೂ ಕಡೆ ತಪ್ಪುಗಳದೇ ಕಾರುಬಾರು! ಕೇಳುವವರಾರು?

ಸದ್ಯಕ್ಕೆ ರಾಜ್ಯದಾದ್ಯಂತ ಟೊಮೊಟೊ ಸರಾಸರಿ ದರ 15 ಕೇಜಿ ಬುಟ್ಟಿಗೆ 20 ರೂಪಾಯಿ ಇದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಟೊಮೆಟೊ 15 ಕೇಜಿ ಬಾಕ್ಸಿಗೆ 100 ರಿಂದ 200 ರುಪಾಯಿ ಇದೆ. ಇದರ “ಸ್ಥಳೀಯ ದರ” ಮತ್ತು “ಉತ್ತಮ ಗುಣಮಟ್ಟ” ಎಂಬ ಹಣೆಪಟ್ಟಿಗಳನ್ನು ಗಮನಿಸಿದರೆ ಇದು ಬಡ, ಮಧ್ಯಮ ವರ್ಗದ ಜನರ ಬಳಕೆಯ ಸರಕಲ್ಲ ಎಂಬುದು ಖಚಿತವಾಗುತ್ತದೆ
Tomato Prices Today

ಮೇ ತಿಂಗಳ ಮಧ್ಯಬಾಗದಿಂದ ಗಗನಮುಖಿಯಾಗಿ ಹೊರಟಿದ್ದ ಟೊಮೆಟೊ ಬೆಲೆಗಳು ಜುಲೈ ಅಂತ್ಯದ ಹೊತ್ತಿಗೆ ನೂರು ಪ್ಲಸ್ ಮುಟ್ಟಿ, ಅದೇ ವೇಗದಲ್ಲಿ ಮುಂದುವರೆದು ಬಡ, ಮಧ್ಯಮ ವರ್ಗಗಳ ಮೈ-ಕೈ ಸುಟ್ಟು ಅಡುಗೆ ಮನೆಯಿಂದ ಹೊರಗಾಗಿದ್ದವು. ಕೇಜಿ ಕೊಳ್ಳುವ ಮಂದಿ ಗ್ರಾಮುಗಳ ಲೆಕ್ಕಕ್ಕೆ ಇಳಿದಿದ್ದರು. ಅನೇಕ ಕುಟುಂಬಗಳು ಟೊಮೆಟೊ ಕನಸನ್ನೇ ತ್ಯಜಿಸಿ ಹುಣಸೆ ಹಣ್ಣಿನ ಮೊರೆ ಹೋಗಿದ್ದವು. ಬೆಂಗಳೂರು ಸೇರಿದಂತೆ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲೂ ನೂರಕ್ಕೆ ಕಡಿಮೆ ಇಲ್ಲದ ಧಾರಣೆ ಬಹುತೇಕ ಜನರನ್ನು ಟೊಮೆಟೊನಿಂದ ದೂರ ಉಳಿಯುವಂತೆ ಮಾಡಿತ್ತು.

ಜೂನ್ ಕಳೆದು, ಜುಲೈ ಆರಂಭದೊಂದಿಗೆ ಭೂ ಮುಖಿಯಾದ ಬೆಲೆಗಳು 80-60-40-30-20 ಹೀಗೇ ಇಳಿಯುತ್ತ ಇಳಿಯುತ್ತ ಹತ್ತು ರೂಪಾಯಿಗೆ ಇಳಿದಿತ್ತು. ಒಬ್ಬ ರೀಟೇಲ್ ತರಕಾರಿ ಮಾರಾಟಗಾರ 50 ರೂಪಾಯಿಗೆ 6-7 ಕೇಜಿ ಟೊಮೆಟೊ ಕೊಡುತ್ತಾನೆಂದರೆ, ಅವನು ಹೋಲ್‌ಸೇಲ್‌ನಲ್ಲಿ ಎಷ್ಟಕ್ಕೆ ಖರೀದಿಸಿರಬಹುದು?! ಆ ಹೋಲ್‌ಸೇಲ್‌ದಾರನಿಗೆ ಸಗಟು ಸರಬರಾಜುದಾರ ಎಷ್ಟಕ್ಕೆ ಮಾರಿರಬಹುದು?! ಸರಬರಾಜುದಾರನಿಗೆ ಮಂಡಿಯಲ್ಲಿ ಎಷ್ಟು ದರಕ್ಕೆ ಸಿಕ್ಕಿರಬಹುದು?! ಅಂತಿಮವಾಗಿ ತಿಂಗಳು ಆರೈಕೆ ಮಾಡಿ, ಗೊಬ್ಬರ ಹಾಕಿ, ನೀರು ಹಾಯಿಸಿ, ಔಷಧ ಹೊಡೆದು ಕಾಯುತ್ತ ಕುಳಿತಿದ್ದ ಬೆಳೆಗಾರನಿಗೆ ಕೇಜಿಗೆ/ಬುಟ್ಟಿಗೆ ಎಷ್ಟು ಸಿಕ್ಕಿರಬಹುದು?!

ಸದ್ಯಕ್ಕೆ ರಾಜ್ಯದಾದ್ಯಂತ ಟೊಮೆಟೊ ಸರಾಸರಿ ದರ 15 ಕೇಜಿ ಬುಟ್ಟಿಗೆ 20 ರೂಪಾಯಿ ಇದೆ. ಒಂದು ಪತ್ರಿಕೆ ಒಂದು ದಿನದ ದರದ ಮಾಹಿತಿಯನ್ನು ಪ್ರಕಟಿಸಿ, ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಟೊಮೆಟೊ 15 ಕೇಜಿ ಬಾಕ್ಸಿಗೆ 100 ರಿಂದ 200 ರುಪಾಯಿ ಇದೆ ಎಂದು ಹೇಳಿದೆ. ಇದರ “ಸ್ಥಳೀಯ ದರ”  ಮತ್ತು “ಉತ್ತಮ ಗುಣಮಟ್ಟ” ಎಂಬ ಹಣೆಪಟ್ಟಿಗಳನ್ನು ಗಮನಿಸಿದರೆ ಇದು ಬಡ, ಮಧ್ಯಮ ವರ್ಗದ ಜನರ ಬಳಕೆಯ ಸರಕಲ್ಲ ಎಂಬುದು ಖಚಿತವಾಗುತ್ತದೆ. ಅಲ್ಲದೆ ಇಂಥ ಉಳ್ಳವರ ಮೆಚ್ಚುಗೆಗೆ ಪಾತ್ರವಾಗಬಹುದಾದ “ಉತ್ತಮ ಗುಣಮಟ್ಟ”ದ ಟೊಮೆಟೊ ಎಷ್ಟು ಜನ, ಎಷ್ಟು ಕೇಜಿ ಬೆಳೆಯಬಹುದು? ಅಥವಾ ಒಬ್ಬ ರೈತನ ಒಟ್ಟಾರೆ ಬೆಳೆಯಲ್ಲಿ ಇಂಥದ್ದು ಎಷ್ಟು ಕೇಜಿ ಸಿಗಬಹುದು?!

“ಬಯಲು ಸೀಮೆಯ ಜಿಲ್ಲೆಯಾದ ಕೋಲಾರದಲ್ಲಿ ಮತ್ತೊಮ್ಮೆ ಟೊಮೆಟೊ ಬೆಲೆ ಪಾತಾಳಕ್ಕೆ ಕುಸಿದಿದೆ. ಜನರು ಟೊಮೆಟೊ ಬೆಳೆಯನ್ನ ರೈತರ ಆಪತ್ಬಾಂಧವ ಎಂದು ಭಾವಿಸಿದ್ದಾರೆ. ಯಾವುದೇ ನೀರಾವರಿ ಆಸರೆಯಿಲ್ಲದಿದ್ದರೂ ವಾತಾವರಣಕ್ಕೆ ಅನುಕೂಲಕರವಾಗಿ, ಜಿಲ್ಲೆಯಲ್ಲಿ ಟೊಮೆಟೊ ಹೆಚ್ಚಿಗೆ ಬೆಳೆಯುತ್ತದೆ. ಪ್ರಸಕ್ತ ಟೊಮೆಟೊ ಸೀಸನ್‌ನಲ್ಲಿ ಭರ್ಜರಿಯಾದ ಫಸಲು ಮಾರುಕಟ್ಟೆಯತ್ತ ಧಾವಿಸುತ್ತಿದೆ. ಕೊರೊನಾ ಲಾಕ್ ಡೌನ್ ವೇಳೆಯಲ್ಲಿ ಕನಿಷ್ಠ ಬೆಲೆಯಿಲ್ಲದೆ, ತೋಟಗಳಲ್ಲೆ ಟೊಮೆಟೊ ಹಣ್ಣು ಕೊಳೆಯುತ್ತಿತ್ತು. ಆದರೀಗ ಟೊಮೆಟೊ ಬೆಳೆಯಿದ್ದರೂ ಬೆಲೆಯಿಲ್ಲದೇ ರೈತರು ಕಂಗಾಲಾಗಿದ್ದಾರೆ. ಮಾರುಕಟ್ಟೆಗೆ ಟೊಮೆಟೊ ತಂದು ಸೂಕ್ತ ಬೆಲೆ ಸಿಗದೆ ರೈತರು ಟೊಮೆಟೊ ರಸ್ತೆ ಬದಿ ಸುರಿದು ಮನೆಗೆ ವಾಪಸ್ ಹೋಗುತ್ತಿದ್ದಾರೆ” ಎಂದು ಕೃಷಿ ಪ್ರೇಮಿಯೊಬ್ಬರು ಬರೆದಿದ್ದಾರೆ.

ಸರ್ಕಾರದ ಅಂಕಿ ಅಂಶಗಳ ಪ್ರಕಾರ ಜೂನ್‌ನಲ್ಲಿ ಆಲೂಗೆಡ್ಡೆಯ ದರ ಶೇ. 23.86% ಏರುಮುಖಿಯಾಗಿದ್ದರೆ, ಟೊಮೆಟೊ ಶೇ.158.78% ಮೇಲೇರಿತ್ತು. ಆದರೆ ಜುಲೈನಲ್ಲಿ ಆಲೂಗೆಡ್ಡೆ ದರ ಅದೇ ಸ್ಥಿರತೆಯನ್ನ ಕಾಯ್ದುಕೊಂಡಿದೆ, ಟೊಮೆಟೊ ಬೆಲೆ ಇನ್ನಿಲ್ಲದಂತೆ ನೆಲ ಕಚ್ಚಿದೆ.

"ದಿಢೀರ್ ಬೆಲೆ ಕುಸಿತದಿಂದ ಅಯೋಮಯ ಪರಿಸ್ಥಿತಿ ಉಂಟಾಗಿದೆ. ಬೆಲೆ ಇಳಿಕೆ ಬಗ್ಗೆ ಮಾತನಾಡಿದ ರೈತರು ಸಾಲ ಸೋಲ ಮಾಡಿ ಲಕ್ಷ ಲಕ್ಷ ಬಂಡವಾಳ ಹಾಕಿದ್ದೇವೆ. ಬೆಲೆ ಇಳಿಕೆಯಿಂದ ಮತ್ತೊಮ್ಮೆ ಸಾಲದ ಸುಳಿಯಲ್ಲಿ ಸಿಲುಕಬೇಕಿದೆ. ಸರ್ಕಾರ ಕೂಡಲೇ ಟೊಮೆಟೊ ಬೆಳೆಗೆ ಬೆಂಬಲ ಬೆಲೆ ಘೋಷಿಸಬೇಕಿದೆ. ಇಲ್ಲವಾದಲ್ಲಿ ಕೋಲಾರ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಆರಂಭವಾಗಲಿವೆ" ಎಂದು ಕೋಲಾರದ ರೈತರು ಅಳಲು ತೋಡಿಕೊಂಡಿದ್ದಾರೆ.

ಈ ಹಿಂದೆ ಅತಿಯಾದ ಬಿಸಿಗಾಳಿಯ ಕಾರಣದಿಂದ ದೇಶದಾದ್ಯಂತ ಟೊಮೆಟೊ ಇಳುವರಿ ಕುಸಿದುಹೋಗಿತ್ತು. ಆದರೆ ಉತ್ತಮ ಮಳೆಯ ಕಾರಣ ಈಗ ಆ ಸ್ಥಿತಿ ಇಲ್ಲ. ಆದರೆ ಈಗಲೂ ರೈತರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಬಿಸಿಗಾಳಿ (ಹಾಟ್‌ ವೇವ್‌) ಕಾರಣಗಳಲ್ಲ. ಇವುಗಳಲ್ಲಿ ಕೆಲವು ಮೂಲ ಸಮಸ್ಯೆಗಳು ರೈತರಿಂದಲೇ ಸೃಷ್ಟಿಯಾಗಿವೆ. ಒಮ್ಮೆ, ಟೊಮೆಟೊ ಬೆಳೆಗೆ ಉತ್ತಮ ಬೆಲೆ ಸಿಕ್ಕಿತ್ತು. ಇದರಿಂದ ಉತ್ತೇಜಿತವಾದ ರೈತ ಸಮೂಹ ಟೊಮೆಟೊ ಬೆಳೆಯ ಹಿಂದೆ ಬಿದ್ದಿತು. ಎಲ್ಲಿ ನೋಡಿದರೂ ಟೊಮೆಟೊ ಬೆಳೆ ಕಾಣುತ್ತಿತ್ತು. ಈ ನಡುವೆ ಹೊರ ರಾಜ್ಯ/ದೇಶಗಳಿಗೆ ಹೋಗುತ್ತಿದ್ದ ಉತ್ತಮ ಗುಣಮಟ್ಟದ ಟೊಮೆಟೊ ವಿಪರೀತ ಮಳೆಯ ಕಾರಣ ನಿರೀಕ್ಷಿತ ಪ್ರಮಾಣದಲ್ಲಿ ಹೋಗಲಿಲ್ಲ. 

ಇಲ್ಲಿ ರೈತರು  ಮತ್ತು ಸರ್ಕಾರ ಇಬ್ಬರೂ ಯೋಚಿಸಬೇಕಾದ ಎರಡು ಅಂಶಗಳಿವೆ. ಹವಾಮಾನ ಬದಲಾವಣೆಯೇ ಮೊದಲಾಗಿ ಯಾವುದೋ ಒಂದು ಬೆಳೆಯ ಇಳುವರಿ ಒಂದೆರಡು ತಿಂಗಳುಗಳ ಕಾಲ ಕಡಿಮೆಯಾಗಿ, ಬೆಲೆ ಹೆಚ್ಚಾದಾಗ, ಅದನ್ನೇ ಶಾಶ್ವತವೆಂದು ಭಾವಿಸುವ ರೈತ ಸಮುದಾಯ ಸಹಜ ಬಿತ್ತನೆಯ ಪ್ರಮಾಣಕ್ಕಿಂತ ನಾಲ್ಕು ಪಟ್ಟು ಹೆಚ್ಚು ಭೂಮಿಯಲ್ಲಿ ಅದೇ ಬೆಳೆಯನ್ನು ಬೆಳೆಯಲು ನಿಶ್ಚಯಿಸುವ ಆಲೋಚನಾರಹಿತ ಕ್ರಮ. ಹಾಗೆಯೇ, ಇಂಥದ್ದೊಂದು ಸಂಭವಿಸಬಹುದು ಎಂದು ಯೋಚಿಸದೇ ಹೋಗುವ ಮತ್ತು ಹಾಗೆ ಸಂಭವಿಸುವಾಗ ಉಪಗ್ರಹ ಮಾಹಿತಿ ಇದ್ದೂ ಅದನ್ನು ರೈತರೊಂದಿಗೆ ಹಂಚಿಕೊಂಡು, ಅವರನ್ನು ಎಚ್ಚರಿಸದೇ ಹೋಗುವ ಸರ್ಕಾರದ ಬೇಜವಾಬ್ದಾರಿತನ.

 ಇವುಗಳಿಗೆ ಪರಿಹಾರ ಸೂಚಿಸುವವರು ಯಾರು?

ನಿಮಗೆ ಏನು ಅನ್ನಿಸ್ತು?
1 ವೋಟ್