ಸಿಡಿಲು ಮಿಂಚುಗಳೂ ಬಡವರು, ಆದಿವಾಸಿಗಳನ್ನೇ ಕೊಲ್ಲುತ್ತವೆಯೇ? ಇಲ್ಲಿವೆ ಕರುಣಾಜನಕ ಕತೆಗಳು!

ಸಿಡಿಲಿನ ಆರ್ಭಟಗಳು ಜಗತ್ತಿನಾದ್ಯಂತ ಹೆಚ್ಚುತ್ತಿವೆ. ಉತ್ತರ ಧ್ರುವದಲ್ಲಿ 2021ರಲ್ಲಿ 7,278 ಬಾರಿ ಸಿಡಿಲು, ಮಿಂಚುಗಳು ಆರ್ಭಟಿಸಿವೆ. ಆಫ್ರಿಕ ಮತ್ತು ದಕ್ಷಿಣ ಅಮೆರಿಕದಲ್ಲಿ ಕಳೆದ ಒಂದು ದಶಕಕ್ಕೆ ಹೋಲಿಸಿದಲ್ಲಿ ಇವುಗಳ ಆರ್ಭಟ ಬಹುತೇಕ ದ್ವಿಗುಣಗೊಂಡಿವೆ. ಭಾರತ ಸಹ ಇದಕ್ಕೆ ಹೊರತಾಗಿಲ್ಲ. ಆದರೆ, ಇವು ನೈಸರ್ಗಿಕ ಪ್ರಕ್ರಿಯೆ ಎಂಬ ಕಾರಣಕ್ಕೆ ಯಾವುದೋ ಮೂಲೆಯಲ್ಲಿ ಒಂದು ಸಣ್ಣ ಸುದ್ದಿಯಾಗಿ ಕಣ್ಮರೆಯಾಗುತ್ತಿವೆ.
tribal areas remain at mercy of lightning- Deaths

ಸಾಮಾನ್ಯವಾಗಿ ಗ್ರಾಮಾಂತರ ಭಾರತದಲ್ಲಿ ಸಿಡಿಲು ಬಡಿದು, ಮಿಂಚು ತಾಕಿ ಮನುಷ್ಯ ಜೀವಿಯೊಂದು ಮೃತಪಟ್ಟಲ್ಲಿ ಆ ಸಾವನ್ನು “ದುರ್ದೈವ” ಎನ್ನುವುದಿಲ್ಲ! ಬದಲಾಗಿ ಅದು “ಅಪೂರ್ವ ಮರಣ” ಎಂಬಂತೆ ನೋಡಲಾಗುತ್ತದೆ! ಈ ವಿಚಿತ್ರ ನಿಲುವಿಗೆ ಮೊದಲ ಕಾರಣ: ಈ ಸಿಡಿಲು, ಮಿಂಚುಗಳು ಬಲು ಅಪರೂಪ. ಅಂಥ ಅಪರೂಪದ ಸಿಡಿಲೊಂದು ಒಬ್ಬ ಮನುಷ್ಯನಿಗೆ ತಾಕಿತೆಂದರೆ ಅದು “ಅತಿ ಅಪೂರ್ವ”ದ ಪರಮಾವಧಿ ಎಂದು ಮಾತ್ರ. ಇದು “ನರಿ ಕಂಡರೆ ಅದೃಷ್ಟ” ಎನ್ನುವಂಥದ್ದೇ ಭಾವ. ಏಕೆಂದರೆ ಅತಿಭೀತಿಯ, ಸಂಕೋಚದ ಮುದ್ದೆಯಾದ ನರಿಗಳು ಜನರಿಗೆ ಕಾಣುವುದೇ ಅಪರೂಪ. ಅಂಥ ಅಪರೂಪದ ಪ್ರಾಣಿ ಕಣ್ಣಿಗೆ ಕಾಣುವುದು ಅಂದರೆ, ಅದು ಅದೃಷ್ಟ ಎಂಬ ಬಿಡುಬೀಸು ಧೋರಣೆ. 

ಆದರೆ, ಇದೇ ನರಿಗಳು ನಿತ್ಯ ನಿಮ್ಮ ಮನೆಗೆ ಹಾಜರಿ ಹಾಕುತ್ತಾ, ನಿಮ್ಮ ಕೋಳಿ, ಕರು, ಮರಿಗಳನ್ನು ಕಬಳಿಸುತ್ತಾ ಹೋದರೆ? ಆಗಲೂ ಅದನ್ನೂ ಅದೃಷ್ಟವೆಂದು ಭಾವಿಸುವ ಒಬ್ಬನೇ ಒಬ್ಬನನ್ನು ಜಗತ್ತಿನಲ್ಲಿ ಕಾಣುವುದು ಕಷ್ಟ. ಈ ಸಿಡಿಲು, ಮಿಂಚಿನಂತಹ ನೈಸರ್ಗಿಕ ಪ್ರಕ್ರಿಯೆಗಳು ಸಾಲು ಸಾಲಾಗಿ ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶದ  ಜನರ ಮೇಲೆ ಏಕತ್ರವಾಗಿ ದಾಳಿ ಮಾಡಿ, ಸಾಲು ಸಾಲು ಹೆಣಗಳನ್ನು ಉರುಳಿಸುತ್ತಾ ಹೋದರೆ? ಅದೂ ಹೀಗೆ ಉರುಳುವ ಹೆಣಗಳೆಲ್ಲ ಬಡವರು, ರೈತರು, ಆದಿವಾಸಿಗಳವೇ ಆಗಿದ್ದರೆ? ಇದನ್ನು ಏನೆಂದು ಕರೆಯುತ್ತೀರಿ? ಲೋಕಸಭೆಯಲ್ಲಿ ನೀಡಿದ ಹೇಳಿಕೆಯ ಪ್ರಕಾರ ಇಂಥ ಸಾವಿಗೆ ಈಡಾದ ದುರ್ದೈವಿಗಳ ಸಂಖ್ಯೆ 2021ರಲ್ಲಿ 2862 ಮಂದಿ ಎಂದಾಗ ನಿಮಗೇನನ್ನಿಸಬಹುದು?

ಇದು ಜಾಗತಿಕವೇ?

ಇಂಥ ಸಿಡಿಲಿನ ಆರ್ಭಟಗಳು ಜಗತ್ತಿನಾದ್ಯಂತ ಹೆಚ್ಚುತ್ತಿವೆ. ಉತ್ತರ ಧ್ರುವದಲ್ಲಿ 2021ರಲ್ಲಿ 7,278 ಬಾರಿ ಸಿಡಿಲು, ಮಿಂಚುಗಳು ಆರ್ಭಟಿಸಿವೆ. “ಕಳೆದ ಒಂಭತ್ತು ವರ್ಷಗಳ ಎಲ್ಲ ಸಿಡಿಲು, ಮಿಂಚುಗಳನ್ನು ಒಟ್ಟಾಗಿ ಕೂಡಿದರೂ ಸಹ ಇದರ ಅರ್ಧದಷ್ಟು ಸಹ ಆಗುವುದಿಲ್ಲ” ಎಂದು ಫಿನ್ಲೆಂಡಿನ ಪರಿಸರ ಅಧ್ಯಯನ ಸಂಸ್ಥೆ “ಹೋಯ್ಸಲ” ವರದಿ ಮಾಡಿದೆ. ಆಫ್ರಿಕ ಮತ್ತು ದಕ್ಷಿಣ ಅಮೆರಿಕದಲ್ಲಿ ಕಳೆದ ಒಂದು ದಶಕಕ್ಕೆ ಹೋಲಿಸಿದಲ್ಲಿ ಇವುಗಳ ಆರ್ಭಟ ಬಹುತೇಕ ದ್ವಿಗುಣಗೊಂಡಿವೆ. ಭಾರತ ಸಹ ಇದಕ್ಕೆ ಹೊರತಾಗಿಲ್ಲ. ಆದರೆ, ನೈಸರ್ಗಿಕ ಪ್ರಕ್ರಿಯೆ ಎಂಬ ಕಾರಣಕ್ಕೆ ಯಾವುದೋ ಮೂಲೆಯಲ್ಲಿ ಒಂದು ಸಣ್ಣ ಸುದ್ದಿಯಾಗಿ ಇವು ಕಣ್ಮರೆಯಾಗುತ್ತಿವೆ.

ಜಾರ್ಖಂಡ್‌ ರಾಜ್ಯದ ಸಾವುಗಳ ಸರಣಿ ಇಂಥದ್ದೊಂದು ನೈಸರ್ಗಿಕ ವಿಪತ್ತು. ಜಾರ್ಖಂಡ್‌ ರಾಜ್ಯದ ರೈತರು, ಬಡಜನರು ಮತ್ತು ಆದಿವಾಸಿಗಳ ಮೇಲೆ ನಿತ್ಯ ಹೆಡೆ ತೂಗುತ್ತಿದೆ. ಆಗಾಗ ವಿಷವನ್ನೂ ಕಕ್ಕುತ್ತಿದೆ. ಇಂತಹ ಕಕ್ಕುವಿಕೆ 2021-22ರಲ್ಲಿ 4,40,000 ಬಾರಿ ಸಂಭವಿಸಿದೆ. ಈ ಪೂತ್ಕಾರಕ್ಕೆ ಸಿಕ್ಕಿ 322 ಜನರ ಜೀವ ಹಾರಿಹೋಗಿದೆ. ಇದರಲ್ಲಿ ಶೇ. 96 ಭಾಗ ಜನರು ಗ್ರಾಮೀಣರು ಮತ್ತು ಇದರಲ್ಲಿ ಶೇ. 77 ಭಾಗ ಜನರು ರೈತರು. ಹೀಗೆಂದು 'ಹವಾಮಾನ ಬದಲಾವಣೆ ಚೇತರಿಕೆ ನಿಗಾವಣೆ ಮತ್ತು ಉತ್ತೇಜನ ಸಮಿತಿ' (CROPC) ತನ್ನ ವರದಿಯಲ್ಲಿ ಹೇಳಿದೆ.

“ನನ್ನದು ರಾಂಚಿ ಜಿಲ್ಲೆಯ ಚಿಲ್ದಾಂಗ್‌ ಹಳ್ಳಿ. 51 ವಯಸ್ಸಿನ ನನ್ನ ತಂದೆ ದೇವ್‌ ಕುಮಾರ್‌ ಬೈತ ಹಲವು ಜನರೊಂದಿಗೆ ಉಳುಮೆಯಲ್ಲಿ ತೊಡಗಿದ್ದ. ಆಗ ಹಠಾತ್ತಾಗಿ ಸಿಡಿಲು ಬಡಿಯಿತು. ಅಲ್ಲಿದ್ದ ಬಹುತೇಕರು ಮೂರ್ಛೆ ಹೋದರು. ನನ್ನ ತಂದೆಯೂ ಹಾಗೆಯೇ ಬಿದ್ದು ಹೋದ. ಅನಂತರ ಅವನು ಮರಣ ಹೊಂದಿದ್ದಾನೆ ಎಂದು ಸ್ಥಳೀಯ ಆಸ್ಪತ್ರೆಯ ವೈದ್ಯರು ಹೇಳಿದರು. ಮನೆಯಲ್ಲಿ ನನ್ನ ತಾಯಿಯೊಂದಿಗೆ ನಾವು ನಾಲ್ಕು ಮಕ್ಕಳಿದ್ದೇವೆ. ನಮ್ಮ ಮನೆಯಲ್ಲಿ ದುಡಿಯುತ್ತಿದ್ದ ವ್ಯಕ್ತಿ ನನ್ನ ತಂದೆ ಮಾತ್ರ. ನಾವೀಗ ಅನಾಥರಾಗಿದ್ದೇವೆ” ಎನ್ನುತ್ತಾಳೆ ಬೈತನ ಹಿರಿಯ ಮಗಳು ಸುನೈನ ಕುಮಾರಿ. ಕಳೆದ ಹತ್ತು ವರ್ಷಗಳಲ್ಲಿ ಇಂಥ ನೂರಾರು ಉದಾಹರಣೆಗಳು ನಮ್ಮ ಸುತ್ತಮುತ್ತ ಇವೆ ಎಂದು ಕಣ್ಣೀರಾಗುತ್ತಾಳೆ ಸುನೈನ.

ರಾಜ್ಯ, ಜಿಲ್ಲಾಡಳಿತಗಳು ಏನು ಹೇಳುತ್ತವೆ?

2021ರಲ್ಲಿ ಸಿಡಿಲ ಬಡಿತದಿಂದ ಒಟ್ಟಾರೆ 568 ಜನರು ಮರಣ ಹೊಂದಿದ್ದಾರೆ ಎಂದು ರಾಜ್ಯ ಸರ್ಕಾರವೇ ಹೇಳಿದೆ. ಹೀಗೆ ಮರಣಿಸಿದ ಕುಟುಂಬಕ್ಕೆ ನಾಲ್ಕು ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಗಾಯಗೊಂಡವರಿಗೆ ಎರಡು ಲಕ್ಷ ರೂ. ಮತ್ತು ಹಾನಿಯಾದ ಮನೆಗಳಿಗೆ ₹2,100 ರಿಂದ ₹95,100, ಪಶುಗಳು ಮರಣಹೊಂದಿದಲ್ಲಿ ₹3,000 ದಿಂದ ₹30,000ವರೆಗೆ ಪರಿಹಾರ ನೀಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.

ಇಲ್ಲಿ ಮರಣಿಸಿರುವ ಎಲ್ಲರೂ ರೈತರು, ಅದರಲ್ಲೂ ಬಡ ರೈತರು, ಆದಿವಾಸಿಗಳು. ಅಂದಂದಿನ ದುಡಿಮೆಯ ಮೇಲೆ ಬದುಕು ಸಾಗಿಸುವವರು. ಇಂಥದ್ದೊಂದು ಕುಟುಂಬದಲ್ಲಿ ಆಧಾರ ಸ್ಥಂಭವೇ ಕುಸಿದು ಹೋದಾಗ ಈ ಸರ್ಕಾರ ಕೊಡುವ ದುಗ್ಗಾಣಿ ಕಾಸಿನಿಂದ ಅವರ ಕುಟುಂಬ ಮತ್ತೆ ಬದುಕು ಕಟ್ಟಿಕೊಳ್ಳುವುದಾರೂ ಹೇಗೆ? ಇದು ಇಡೀ ಸಿಡಿಲು ಪೀಡಿತ ರಾಜ್ಯಗಳ ಜನರ ಆಕ್ರೋಶದ ಮಾತು.

“ಜಿಲ್ಲಾಡಳಿತ ಶಾಲೆಗಳ ಮುಂದೆ ʼಸಿಡಿಲಿನಿಂದ ಬಚಾವಾಗುವುದು ಹೇಗೆʼ ಎಂಬ ಪೋಸ್ಟರ್‌ ಅಂಟಿಸುವುದನ್ನು ಹೊರತು ಪಡಿಸಿ ಇನ್ನೊಂದನ್ನು ಮಾಡಿಲ್ಲ. ಹಳ್ಳಿಗರಿಗೆ ಎಚ್ಚರಿಕೆಯ ಸೂಚನೆಗಳನ್ನೂ ನೀಡಲಾಗಿಲ್ಲ. ಸಿಡಿಲು ನಿರೋಧಕ ತಂತ್ರಜ್ಞಾನವನ್ನು ಇಲ್ಲಿ ಅಳವಡಿಸುವ ಬಗ್ಗೆ ರಾಜ್ಯಾಡಳಿತವಾಗಲೀ, ಕೇಂದ್ರಾಡಳಿತವಾಗಲೀ ಚಿಂತಿಸಿಯೇ ಇಲ್ಲ” ಎಂದು ಸ್ಥಳೀಯರು ಸಿಟ್ಟಿನಿಂದಲೇ ಹೇಳುತ್ತಾರೆ.

ಇದಕ್ಕೆ ಜಿಲ್ಲಾಡಳಿತದ ಧೋರಣೆಯ ಪ್ರತೀಕದಂತೆ ಪ್ರತಿಕ್ರಿಯಿಸುವ ಸಿಂಘಭೂಮಿ ಜಿಲ್ಲಾ ಪಂಚಾಯ್ತಿಯ ಸದಸ್ಯೆ ದೇವಯಾನಿ ಮುರ್ಮು ಹೇಳುವುದೆಂದರೆ, “ಈ ಸಿಡಿಲು ಸೂಕ್ಷ್ಮ ಹಳ್ಳಿಗಳಲ್ಲಿ ಸಿಡಿಲು ನಿರೋಧಕಗಳನ್ನು ಅಳವಡಿಸಲು ನಮ್ಮಲ್ಲಿ ಹಣ ಇಲ್ಲ. ರಾಜ್ಯ ಸರ್ಕಾರವೂ ಇದಕ್ಕೆ ಹಣ ಕೊಡುತ್ತಿಲ್ಲ. ನಾವೇನು ಮಾಡುವುದು ಹೇಳಿ” ಎಂದು.

ಈ ಸುದ್ದಿ ಓದಿದ್ದೀರಾ?: ಚಾಮರಾಜನಗರ | ಬುಡಕಟ್ಟು ಜನರಿಗೆ ಉದ್ಯೋಗ ನೀಡಿದ ಕಾಡಿನ ಕಳೆ ‘ಲಂಟಾನ'

“ಇಂತಹ ಬಹುತೇಕ ಸಾವುಗಳು ಪರ್ವತ ಪ್ರದೇಶಗಳ ಆದಿವಾಸಿ ವಲಯಗಳಲ್ಲಿ ಸಂಭವಿಸುತ್ತಿವೆ. ತೆರೆದ ಬಯಲುಗಳು ಮತ್ತು ಎತ್ತರದ ಮರಗಳ ನಡುವೆ ಕೆಲಸ ಮಾಡುವ ಎಲ್ಲರೂ ಇದಕ್ಕೆ ಸುಲಭ ತುತ್ತಾಗುತ್ತಿದ್ದಾರೆ. ಹಾಗೆಂದು ಅವರು ತಮ್ಮ ಕೃಷಿ ಕೆಲಸಗಳನ್ನು ಮಾಡದಿರಲಾಗದು” ಎಂದು ಕುಂತಿ ಜಿಲ್ಲೆಯ ಅಧ್ಯಕ್ಷೆ ರಜನಿ ಕುಮಾರಿ ಅನುಕಂಪ ತೋರಿದ್ದಾರೆ. ಆದರೆ ಅದನ್ನು ತಡೆಯುವ ಯಾವ ಪ್ರಯತ್ನಗಳೂ ಆಗಿಲ್ಲ.

ಸಾವಿನ ಕೇಂದ್ರಗಳಾಗಿರುವ ಶಾಲೆಗಳು

ಜುಲೈ 23, 2022 ರಂದು ಬೊಕಾರೋ ಜಿಲ್ಲೆಯ ರಾಜಕ್ರಿಯಾಕ್ರಿತ್‌ ಮಾಧ್ಯಮಿಕ ಶಾಲೆಯ ಮೇಲೆ ಸಿಡಿಲು ಅಪ್ಪಳಿಸಿ ಆರು ಮಕ್ಕಳು ಪ್ರಜ್ಞಾಹೀನರಾದರು. ಆನಂತರದಲ್ಲಿ ಅವರ ಆರೋಗ್ಯದಲ್ಲಿ ಏರುಪೇರುಗಳಾದವು. 

ಇದಾದ ನಂತರ ಅಲ್ಲಿನ ಶಿಕ್ಷಣ ಮಂತ್ರಿ ಜಗನ್ನಾಥ್‌ ಮಹತೋ ಶಾಲೆಗೆ ಭೇಟಿ ನೀಡಿ, ಕೂಡಲೇ ಸಡಿಲು ನಿರೋಧಕಗಳನ್ನು ಅಳವಡಿಸುವಂತೆ ಆದೇಶಿಸಿದ್ದಾರೆ. ಅದು ಕಾಗದದಲ್ಲಿ ಮಾತ್ರ ಇದೆ. ಈ ಪರ್ವತ ಪ್ರದೇಶದ 5,000ಕ್ಕೂ ಹೆಚ್ಚು ಖಾಸಗಿ ಶಾಲೆಗಳು ಸಿಡಿಲು ನಿರೋಧಕವನ್ನು ಅಳವಡಿಸಿಕೊಂಡಿವೆ. ಆದರೆ, ಒಂದೋ ಅವು ಕೆಲಸ ಮಾಡುತ್ತಿಲ್ಲ, ಇಲ್ಲವೇ ಕಳ್ಳತನವಾಗಿವೆ.

ಇದಕ್ಕೆ ಪ್ರತಿಕ್ರಿಯಿಸುತ್ತಾ ಬಂದಿಹ್‌ ಹಿರಿಯ ಮಾಧ್ಯಮಿಕ ಶಾಲೆಯ ಮುಖ್ಯ ಅಧ್ಯಾಪಕ ಶಶಿಭೂಷಣ್‌ ಮೆಹತೋ “ ನಮ್ಮ ಶಾಲೆಯಲ್ಲಿ ಸಿಡಿಲು ನಿರೋಧಕವನ್ನು ಅಳವಡಿಸಲಾಗಿತ್ತು, ಆದರೆ ನಾನು ಇಲ್ಲಿಗೆ ಬರುವ ಮುಂಚೆಯೇ ಅದು ಕಳ್ಳತನವಾಗಿದೆ” ಎಂದು ಹೇಳಿದ್ದಾರೆ. ಜಮ್‌ಶೆಡ್‌ಪುರ ಶಾಲೆಯ ಅಧ್ಯಾಪಕ ಪಶುಪತಿ ಮಿಶ್ರ ಪ್ರಕಾರ “ರಾಜ್ಯದಲ್ಲಿ ಒಟ್ಟು 45,000 ಸರ್ಕಾರಿ ಶಾಲೆಗಳಿವೆ. ಆದರೆ ಯಾವ ಶಾಲೆಯಲ್ಲೂ ಸಿಡಿಲನ್ನು ತಡೆಯುವಂತಹ ಯಾವುದೇ ವ್ಯವಸ್ಥೆ ಮಾಡಲಾಗಿಲ್ಲ”.

ನಗರಗಳಲ್ಲಿ ಮತ್ತು ಸುಭದ್ರ ಕಟ್ಟಡಗಳಿರುವಲ್ಲಿ ಇದರ ಹಾವಳಿ ಕಡಿಮೆ ಎನ್ನಲಾಗಿದೆ. ಗ್ರಾಮಾಂತರ ಜಗತ್ತು ಇದಕ್ಕೆ ಸುಲಭ ತುತ್ತಾಗುವ ಪ್ರದೇಶಗಳಾಗಿವೆ.

ಹವಾಮಾನ ಬದಲಾವಣೆಯ ಪರಿಣಾಮಗಳು ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಸರ್ಕಾರಗಳು ತುರ್ತಾಗಿ ಎಚ್ಚೆತ್ತುಕೊಂಡು ಇದಕ್ಕೆ ರಾಷ್ಟ್ರ ಮಟ್ಟದಲ್ಲಿ ಪರಿಹಾರ ಹುಡುಕದೇ ಹೋದಲ್ಲಿ ಬಡವರ ಬದುಕು ದಾರುಣವಾಗುವುದರಲ್ಲಿ ಸಂದೇಹವಿಲ್ಲ.

ನಿಮಗೆ ಏನು ಅನ್ನಿಸ್ತು?
2 ವೋಟ್
Image
av 930X180