ಮಹಾರಾಷ್ಟ್ರ | ಏಕನಾಥ್ ಶಿಂಧೆ, ಫಡ್ನವಿಸ್‌ಗೆ ಸಂಭ್ರಮ, ರೈತರಿಗೆ ಆತಂಕ

Maharshtra agri
  • ಮಹಾರಾಷ್ಟ್ರದಲ್ಲಿ ಒಂದೆಡೆ ಸಂಭ್ರಮ, ಮತ್ತೊಂದೆಡೆ ಆತಂಕ
  • ಮುಂಗಾರು ಬಿತ್ತನೆಯಲ್ಲಿ  ಶೇಕಡಾ 87 ರಷ್ಟು ಕುಸಿತ

ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಏಕನಾಥ ಶಿಂಧೆ ಮುಖ್ಯಮಂತ್ರಿಯಾದ ಖುಷಿಯಲ್ಲಿದ್ದರೆ, ಬಿಜೆಪಿಯು ಉದ್ಧವ್ ಠಾಕ್ರೆ ಸರ್ಕಾರವನ್ನು ಉರುಳಿಸಿ ತಮ್ಮ ಸರ್ಕಾರ ರಚನೆ ಮಾಡಿದ ಸಂಭ್ರಮದಲ್ಲಿದೆ. ಆದರೆ, ಮಹಾರಾಷ್ಟ್ರದ ರೈತರು ಮಾತ್ರ ಆತಂಕದಲ್ಲಿದ್ದಾರೆ. ಕಾರಣ, ಮಳೆಯ ಕೊರತೆ.

"ಕಳೆದ ವರ್ಷ ಸುರಿದಿದ್ದ 270 ಮಿ.ಮೀ. ಮಳೆಗೆ ಬದಲಾಗಿ ಈ ಬಾರಿ ಇಡೀ ರಾಜ್ಯ ಸರಾಸರಿ 134 ಮಿ.ಮೀ. ಮಳೆಯನ್ನು ಮಾತ್ರ ಪಡೆದಿದೆ. ಪರಿಣಾಮವಾಗಿ ಮುಂಗಾರು ಬಿತ್ತನೆಯ ಪ್ರಮಾಣ ಸಂಪೂರ್ಣ ಕುಸಿದಿದೆ. ಈ ವರ್ಷ ಈವರೆಗೂ ಕೇವಲ 20 ಲಕ್ಷ 30 ಸಾವಿರ ಹೆಕ್ಟೇರ್‌ಗಳಲ್ಲಿ ಮಾತ್ರ ಬಿತ್ತನೆಯಾಗಿದೆ. ಇದು ಆಗಬೇಕಿದ್ದ ಒಟ್ಟು ಬಿತ್ತನೆಯಲ್ಲಿ  ಕೇವಲ ಶೇ. 13 ಮಾತ್ರ” ಎಂದು ಈಗ ಮಾಜಿ ಆಗಿರುವ ಉದ್ಧವ್ ಠಾಕ್ರೆ ಅವರ ನೇತೃತ್ವದ ಸಚಿವ ಸಂಪುಟ ಕಳೆದ ವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿತ್ತು. 

ಬಿತ್ತನೆ ಕುರಿತ ಸಮಸ್ಯೆಗಳ ಪರಿಶೀಲನೆಗೆಂದು ಠಾಕ್ರೆ ಸಂಪುಟ ಸಭೆಯನ್ನು ಕರೆದು, ಹಲವು ಗಂಭೀರ ವಿಚಾರಗಳನ್ನು ಚರ್ಚಿಸಿದ್ದರು. ಮುಂಗಾರು ಬಿತ್ತನೆಯ ಪ್ರಮಾಣದಲ್ಲಿ ಆಗಿರುವ ವ್ಯತ್ಯಾಸಗಳ ಬಗ್ಗೆ ಸಂಪುಟ ಸಭೆಯಲ್ಲಿ ಕಳವಳ ವ್ಯಕ್ತವಾಗಿತ್ತು. ಆದರೆ ಆ ಬಗ್ಗೆ ನಿರ್ದಿಷ್ಟ ಪರಿಹಾರೋಪಾಯಗಳ ಬಗ್ಗೆ ಸಭೆಯು ಒಂದು ನಿರ್ಧಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ.

ಈ ಸುದ್ದಿ ಓದಿದ್ದೀರಾ?:ಮಹಾ ಬಿಕ್ಕಟ್ಟು | ಉದ್ಧವ್‌ ಠಾಕ್ರೆ ವಿರುದ್ಧ ದೇಶದ್ರೋಹದ ತನಿಖೆ ಕೋರಿ ಪಿಐಎಲ್‌ ಸಲ್ಲಿಕೆ

ಮಹಾರಾಷ್ಟ್ರ ಹತ್ತಿ ಮತ್ತು ಸೋಯಾಬೀನ್‌ ಉತ್ಪಾದನೆಯಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಆದರೆ ಈ ಎರಡೂ ಬೆಳೆಗಳು ಮಳೆಯಾಧಾರಿತ ಭೂಮಿಗಳನ್ನು ಮಾತ್ರ ಅವಲಂಬಿಸಿವೆ. ವಾರ್ಷಿಕ ಸರಾಸರಿ ಮಳೆಯ ಪ್ರಮಾಣದಲ್ಲಿ ಈ ಬಾರಿ ಅರ್ಧ ಭಾಗದಷ್ಟು ಮಳೆಯನ್ನು ಮಾತ್ರ ಪಡೆದಿರುವ ಈ ರಾಜ್ಯದ ರೈತರು ಈ ಎರಡೂ ಬೆಳೆಗಳ ಉತ್ಪಾದನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಮಳೆಯ ಕೊರತೆಯಿಂದಾಗಿ ಬಿತ್ತನೆ ಪ್ರಮಾಣ ಬಹುದೊಡ್ಡ ಪ್ರಮಾಣದಲ್ಲಿ ಕುಸಿತ ಕಂಡಿರುವುದು ಇಡೀ ರಾಜ್ಯವನ್ನು ಕಳವಳಕ್ಕೆ ದೂಡಿದೆ.     

ಈ ಬಗ್ಗೆ ಏನಾದರೂ ಕ್ರಮ ಕೈಗೊಳ್ಳುವ ಮುನ್ನವೇ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿದ್ದಾರೆ. ಈಗ ಮಹಾರಾಷ್ಟ್ರದ ರೈತರಿಗೆ ಮಳೆಯ ಚಿಂತೆಯ ಜೊತೆಗೆ ಹೊಸ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ತಮ್ಮ ಸಮಸ್ಯೆಗಳ ಬಗ್ಗೆ, ಕೃಷಿಯ ಬಿಕ್ಕಟ್ಟುಗಳ ಬಗ್ಗೆ ಗಮನ ಹರಿಸುತ್ತಾರಾ ಎನ್ನುವ ಚಿಂತೆಯೂ ಕಾಡಲಾರಂಭಿಸಿದೆ.                       

ನಿಮಗೆ ಏನು ಅನ್ನಿಸ್ತು?
0 ವೋಟ್