ಸ್ನೇಹಿತೆಯ ಖಾತೆಗೆ 14 ಲಕ್ಷ ರೂ. ಸಾರ್ವಜನಿಕ ಹಣ ವರ್ಗಾಯಿಸಿದ ಬಿಬಿಎಂಪಿ ನೌಕರನ ಬಂಧನ

  • ಪೊಲೀಸ್‌ಗೆ ದೂರು ನೀಡಿದ್ದ ಬಿಬಿಎಂಪಿ ಕಾರ್ಯಪಾಲಕ ಎಂಜಿನಿಯರ್ ರಾಜೇಂದ್ರ ನಾಯ್ಕ್ 
  • ಹಣದಿಂದ ಚಿನ್ನ ಖರೀದಿ, ಐಷಾರಾಮಿ ಜೀವನ ; ಇಬ್ಬರು ಆರೋಪಿಗಳ ಬಂಧನ

14 ಲಕ್ಷ ರೂಪಾಯಿ ಸಾರ್ವಜನಿಕ ಹಣವನ್ನು ತನ್ನ ಸ್ನೇಹಿತೆಯ ಬ್ಯಾಂಕ್ ಖಾತೆಗೆ ವರ್ಗಾಯಿಸಿದ ಆರೋಪದ ಮೇಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೌಕರ ಹಾಗೂ ಆತನ ಸ್ನೇಹಿತೆಯನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ಯಲಹಂಕ ನ್ಯೂ ಟೌನ್ ನಿವಾಸಿಗಳಾದ ಎಂ ಕೆ ಪ್ರಕಾಶ್ (39) ಮತ್ತು ಕಾಂಚನಾ (30) ಬಂಧಿತರು. ಈ ಕುರಿತು ಬ್ಯಾಟರಾಯನಪುರದ ಬಿಬಿಎಂಪಿ ಕಾರ್ಯಪಾಲಕ ಎಂಜಿನಿಯರ್ (ವಿದ್ಯುತ್) ರಾಜೇಂದ್ರ ನಾಯ್ಕ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. 

ಆರೋಪಿ ಎಂ ಕೆ ಪ್ರಕಾಶ್ ಬಿಬಿಎಂಪಿಯಲ್ಲಿ ದ್ವಿತೀಯ ದರ್ಜೆಯ ಸಹಾಯಕ (ಎಸ್‌ಡಿಎ) ಆಗಿ ಕೆಲಸ ಮಾಡುತ್ತಿದ್ದ. ಆತ ವಾರ್ಷಿಕ ಆಡಿಟ್ ದಾಖಲೆಗಳನ್ನು ಸಲ್ಲಿಸಿರಲಿಲ್ಲ. ಈ ಬಗ್ಗೆ ಹಲವಾರು ನೋಟಿಸ್ ಹಾಗೂ ಮೌಖಿಕ ಸೂಚನೆಗಳನ್ನು ನೀಡಿದರೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಜತೆಗೆ ಯಾವುದೇ ಪೂರ್ವನುಮತಿ ಇಲ್ಲದೆ ಬಿಬಿಎಂಪಿ ಕಚೇರಿಗೆ ಬರುವುದನ್ನು ಆತ ನಿಲ್ಲಿಸಿದ್ದ ಎಂದು ರಾಜೇಂದ್ರ ನಾಯ್ಕ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಂಚಾರಕ್ಕೆ ತೆರೆದುಕೊಳ್ಳಲಿದೆ ಶಿವಾನಂದ ವೃತ್ತದ ಮೇಲುರಸ್ತೆ

ಆರೋಪಿಯ ಬ್ಯಾಂಕ್ ಸ್ಟೇಟ್ಮೆಂಟ್ ಪರಿಶೀಲಿಸಿದ ವೇಳೆ 2021-22ರ ಆರ್ಥಿಕ ವರ್ಷದಲ್ಲಿ ಚೆಕ್ ಮತ್ತು ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡಿರುವುದು ಮತ್ತು 2021ರ ನವೆಂಬರ್ ಮತ್ತು 2022ರ ಆಗಸ್ಟ್ ನಡುವೆ ಕಾಂಚನಾಗೆ 14,07,822 ರೂಪಾಯಿಯನ್ನು ವರ್ಗಾಯಿಸಿರುವುದು ಪತ್ತೆಯಾಗಿದೆ. ಕಾಂಚನಾ ಆ ಹಣದಿಂದ ಚಿನ್ನ ಖರೀದಿಸಿದ್ದಾರೆ. ಜತೆಗೆ ಐಷಾರಾಮಿ ಜೀವನ ನಡೆಸಲು ಬಳಕೆ ಮಾಡಿಕೊಂಡಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ರಾಜೇಂದ್ರ ನಾಯ್ಕ್ ಅವರು ಬಿಬಿಎಂಪಿ ಕೇಂದ್ರ ಕಚೇರಿಗೆ ಘಟನೆಯ ಬಗ್ಗೆ ವಿವರವಾದ ವರದಿ ಸಲ್ಲಿಸಿದ್ದಾರೆ. ಹಣ ವರ್ಗಾವಣೆಯ ಹಿಂದಿನ ಕಾರಣವನ್ನು ಅವರು ತನಿಖೆ ನಡೆಸಲಾಗುತ್ತಿದೆ. ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್