ಒಳಚರಂಡಿ ಶುಚಿಗೊಳಿಸುವ ವೇಳೆ ದುರಂತ: ರಾಜ್ಯದ 26 ಮಂದಿ ಸೇರಿ 330 ಮಂದಿ ಪೌರ ಕಾರ್ಮಿಕರ ದುರ್ಮರಣ

manual worker
  • 2017ರಿಂದ 2021ರವರೆಗೆ ಒಳಚರಂಡಿ ಸ್ವಚ್ಛಗೊಳಿಸುವ ವೇಳೆ 330 ಮಂದಿ ಸಾವು
  • ಗ್ರಾಮೀಣ ಪ್ರದೇಶದಲ್ಲಿ 10.99 ಕೋಟಿಗೂ ಹೆಚ್ಚು ಶೌಚಾಲಯ ನಿರ್ಮಾಣ

ಪೌರ ಕಾರ್ಮಿಕರು ಒಳಚರಂಡಿಗಳಿಗೆ ಇಳಿಯುವಂತಿಲ್ಲ. ಪಿಟ್ ಗುಂಡಿಗಳನ್ನು ಕೈಯಿಂದ ಸ್ವಚ್ಛಗೊಳಿಸುವಂತಿಲ್ಲವೆಂದು ಮಲಹೊರುವ ಉದ್ಯೋಗ ನಿಷೇಧ ಮತ್ತು ಪುನರ್ವಸತಿ ಕಾಯ್ದೆ (ಪಿಇಎಂಎಸ್‌ಆರ್) -2013ರಲ್ಲಿ ಹೇಳಿದೆ.

ಆದರೂ, ಕಳೆದ ಐದು ವರ್ಷಗಳಲ್ಲಿ 330 ಕಾರ್ಮಿಕರು ಒಳಚರಂಡಿಗಳಿಗೆ ಇಳಿದು ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ 26 ಮಂದಿ ಅಸುನೀಗಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಪೌರ ಕಾರ್ಮಿಕರ ಸೌಲಭ್ಯ ಮತ್ತು ಸಮಸ್ಯೆಗಳ ಕುರಿತು ಕೇಳಲಾಗಿದ್ದ ಪ್ರಶ್ನೆಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ರಾಮದಾಸ್‌ ಅಠಾವಳೆ ಲೋಕಸಭೆಯಲ್ಲಿ ಉತ್ತರ ನೀಡಿದ್ದಾರೆ.

“2017 ರಿಂದ 2021ರವರೆಗೆ 330 ಜನರು ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವ ಮೂಲಕ ಸಾವನ್ನಪ್ಪಿದ್ದಾರೆ. ಈ ಪೈಕಿ ಉತ್ತರ ಪ್ರದೇಶವು ಅತಿ ಹೆಚ್ಚು ಸಾವುಗಳನ್ನು ದಾಖಲಿಸಿದ್ದು, 47 ಪ್ರಕರಣಗಳು ವರದಿಯಾಗಿವೆ” ಎಂದು ಅವರು ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ 43 ಸಾವುಗಳು, ದೆಹಲಿಯಲ್ಲಿ 42, ಹರಿಯಾಣದಲ್ಲಿ 36 ಮತ್ತು ಮಹಾರಾಷ್ಟ್ರದಲ್ಲಿ 30 ಸಾವುಗಳಾಗಿದ್ದರೆ, ಕರ್ನಾಟಕದಲ್ಲಿ 26 ಮಂದಿ ಸಾವಿಗೀಡಾಗಿದ್ದಾರೆ.

ಪಿಇಎಂಎಸ್‌ಆರ್-2013 ಮಲ ಎತ್ತುವ ಮತ್ತು ಸ್ವಚ್ಛಗೊಳಿಸುವ ಪದ್ದತಿಯನ್ನು ನಿಷೇಧಿಸಿದೆ. ಆದರೂ, ಆ ಪದ್ದತಿಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ ಎಂದು ಸಚಿವರು ಒಪ್ಪಿಕೊಂಡಿದ್ದಾರೆ.

ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಉದ್ದೇಶದಿಂದ ಸಚಿವಾಲಯವು "ಸ್ವಚ್ಛತಾ ಅಭಿಯಾನ್" ಎಂಬ ಅಪ್ಲಿಕೇಶನ್ ಪ್ರಾರಂಭಿಸಿದೆ. ಅಪ್ಲಿಕೇಶನ್‌ ಮೂಲಕ ಇನ್ನೂ ಚಾಲ್ತಿಯಲ್ಲಿರುವ ಮಲಹೊರುವ (ಕೈಯಲ್ಲಿ ಸ್ವಚ್ಛಗೊಳಿಸುವ) ಘಟನೆಗಳ ಕುರಿತು ಮಾಹಿತಿ ಪಡೆಯಲು ಮತ್ತು ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ” ಎಂದು ಅವರು ಹೇಳಿದ್ದಾರೆ.

ಸ್ವಚ್ಛ ಭಾರತ್ ಅಭಿಯಾನದ ಅಡಿಯಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ 10.99 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದೆ ಮತ್ತು ನಗರ ಪ್ರದೇಶಗಳಲ್ಲಿ 62.65 ಲಕ್ಷಕ್ಕೂ ಹೆಚ್ಚು ಶೌಚಾಲಯಗಳನ್ನು ನೈರ್ಮಲ್ಯ ಶೌಚಾಲಯಗಳಾಗಿ ಪರಿವರ್ತಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಚಾಮರಾಜಪೇಟೆ ಮೈದಾನದಲ್ಲಿ ಪ್ರತಿವರ್ಷ ಧ್ವಜಾರೋಹಣ: ಸಚಿವ ಆರ್ ಅಶೋಕ್

"ಕೈಯಿಂದ ಕಸವನ್ನು ಸ್ವಚ್ಛಗೊಳಿಸುವ ಪದ್ದತಿಯನ್ನು ತಡೆಯುವಲ್ಲಿ ಸ್ವಚ್ಛ ಭಾರತ್ ಅಭಿಯಾನವು ಬೃಹತ್ ಪ್ರಮಾಣದಲ್ಲಿ ನೆರವು ನೀಡಿದೆ” ಎಂದು ಅಠಾವಳೆ ಹೇಳಿದ್ದಾರೆ.

ಪೌರ ಕಾರ್ಮಿಕರ ಸಾವುಗಳ ಬಗ್ಗೆ ಈ ದಿನ. ಕಾಮ್‌ ಜೊತೆಗೆ ಮಾತನಾಡಿದ ಮಂಡ್ಯ ಶ್ರಮಿಕ ನಗರ ನಿವಾಸಿಗಳ ಒಕ್ಕೂಟದ ಮುಖಂಡ ಸಿದ್ದರಾಜು, “ಈಗಲೂ ಕೈಯಲ್ಲಿ ಒಳಚರಂಡಿಗಳನ್ನು, ಮಲದ ಗುಂಡಿಗಳನ್ನು ಕೈಯಲ್ಲಿ ಸ್ವಚ್ಛಗೊಳಿಸುವ ಪದ್ದತಿ ಚಾಲ್ತಿಯಲ್ಲಿದೆ. ಹಲವೆಡೆ, ಅಧಿಕಾರಿಗಳೇ ಪೌರಕಾರ್ಮಿಕರನ್ನು ಒಳಚರಂಡಿಗೆ ಇಳಿಸುವ ಮತ್ತು ಸ್ವಚ್ಛಗೊಳಿಸುವಂತೆ ಒತ್ತಾಯಿಸಿರುವ ಹಲವು ಪ್ರಕರಣಗಳು ವರದಿಯಾಗಿವೆ" ಎಂದಿದ್ದಾರೆ.

"ಮೊದಲು ಸರ್ಕಾರ ಮತ್ತು ಅಧಿಕಾರಿ ವರ್ಗ ಪೌರ ಕಾರ್ಮಿಕರನ್ನು ಮನುಷ್ಯರನ್ನಾಗಿ ನೋಡಬೇಕು. ಪೌರ ಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಮಲ ಹೊರುವ ಪದ್ದತಿ ಇಂದಿಗೂ ಚಾಲ್ತಿಯಲ್ಲಿರುವುದಕ್ಕೆ ಹಾಗೂ ಪೌರ ಕಾರ್ಮಿಕರ ಸಾವುಗಳಿಗೆ ಸರ್ಕಾರವೇ ನೇರ ಹೊಣೆ” ಎಂದು ಆರೋಪಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್