3.33 ಕೋಟಿ ರೂ. ಹಣ ಸಂಗ್ರಹಿಸಿದ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ

  • ಸೋಮವಾರ ಒಂದೇ ದಿನಕ್ಕೆ 2,99,176 ಪ್ರವಾಸಿಗರ ಭೇಟಿ 
  • ರಾಜ್‌ ಕುಟುಂಬದ ಅಭಿಮಾನಿಗಳಿಂದ ಪ್ರದರ್ಶನ ಯಶಸ್ವಿ

ಆಗಸ್ಟ್ 5ರಂದು ಆರಂಭವಾದ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ನಿನ್ನೆ (ಆಗಸ್ಟ್ 15) ತೆರೆಬಿದ್ದಿದೆ. ಸ್ವಾತಂತ್ರ್ಯ ಸಂಭ್ರಮದ ನಿಮಿತ್ತ 11 ದಿನಗಳ ಕಾಲ ನಡೆದ ಪ್ರದರ್ಶನಕ್ಕೆ ಒಟ್ಟು 8.34 ಲಕ್ಷ ಜನ ಭೇಟಿ ನೀಡಿದ್ದು, 3.33 ಕೋಟಿ ರೂ. ಸಂಗ್ರಹವಾಗಿದೆ ಎಂದು ಲಾಲ್‌ಬಾಗ್ ಉಪ ನಿರ್ದೇಶಕಿ ಕುಸುಮಾ ಜಿ ತಿಳಿಸಿದ್ದಾರೆ.

"ಸೋಮವಾರ ಫಲಪುಷ್ಪ ಪ್ರದರ್ಶನದ ಕೊನೆಯ ದಿನವಾಗಿತ್ತು. ಶಾಲಾ-ಕಾಲೇಜು, ಖಾಸಗಿ ಕಂಪನಿಗಳು, ಕಚೇರಿಗಳಿಗೆ ರಜೆ ಇತ್ತು. ಹೀಗಾಗಿ 2,99,176 ಜನ ಲಾಲ್‌ಬಾಗ್‌ಗೆ ಭೇಟಿ ನೀಡಿದ್ದಾರೆ. 90.50 ಲಕ್ಷ ರೂ. ಸಂಗ್ರಹವಾಗಿದೆ" ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಜಗದೀಶ ಮಾಹಿತಿ ನೀಡಿದರು. 

"ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ ಸಾರ್ವಜನಿಕರಿಂದ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ. ಅದರ ಹಿಂದೆ ಹಲವರ ಪರಿಶ್ರಮವಿದೆ. ಲಾಲ್‌ಬಾಗ್‌ಗೆ ಇರುವ ಐತಿಹಾಸಿಕ ಮಹತ್ವ, ಕನ್ನಡದ ನಟ ಪುನೀತ್ ರಾಜ್‌ಕುಮಾರ್ ಮೇಲಿನ ಅಭಿಮಾನ, ವಾರಾಂತ್ಯದ ಸರಣಿ ಸಾಲಿನ ರಜೆ ಹಾಗೂ ಪ್ರಸ್ತಕ ವರ್ಷದ ವಿಭಿನ್ನ ಫಲಪುಷ್ಪ ಪ್ರದರ್ಶನದಿಂದಾಗಿ, ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿದ್ದಾರೆ" ಎಂದು ತೋಟಗಾರಿಕಾ ಸಚಿವ ಮುನಿರತ್ನ ನಾಯ್ಡು ಸಂತಸ ವ್ಯಕ್ತಪಡಿಸಿದ್ದಾರೆ.

"ಡಾ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರ ಗಾಜನೂರಿನಲ್ಲಿರುವ ಮನೆಯ ಪರಿಕಲ್ಪನೆ ತಂದಿದ್ದು, ಮನೆಯ ಹೆಂಚಿನ ಛಾವಣಿ ಮತ್ತು ಸುಣ್ಣದ ಗೋಡೆ ನಿರ್ಮಿಸಲು, 3.5 ಲಕ್ಷ ಉತ್ತಮ ಗುಣಮಟ್ಟದ ಡಚ್ ಗುಲಾಬಿಗಳು ಮತ್ತು  ಕ್ರೈಸಾಂಥೆಮಮ್‌ಗಳ ಕಾಂಡಗಳನ್ನು ಬಳಸಲಾಯಿತು" ಎಂದರು.

ಈ ಸುದ್ದಿ ಓದಿದ್ದೀರಾ?: ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ | ಎರಡು ಲಕ್ಷಕ್ಕೂ ಅಧಿಕ ಮಂದಿಯಿಂದ ವೀಕ್ಷಣೆ

"ಶಕ್ತಿಧಾಮ ಆಶ್ರಮದ ಪರಿಕಲ್ಪನೆ ತರಲು ಒಟ್ಟಾರೆಯಾಗಿ 2 ಲಕ್ಷ ಡಚ್ ಗುಲಾಬಿ ಮತ್ತು ಕ್ರೈಸಾಂಥೆಮಮ್‌ಗಳನ್ನು ಬಳಸಲಾಗಿದೆ. ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಪ್ರತಿಕೃತಿಗಳ ಜೊತೆಗೆ, ಮಂತ್ರಾಲಯದ ಮೂಲ ಬೃಂದಾವನದ ಚಿಕಣಿ ಆವೃತ್ತಿಯನ್ನು ಡಚ್ ಗುಲಾಬಿಗಳು ಮತ್ತು ಕ್ರೈಸಾಂಥೆಮಮ್‌ಗಳಿಂದ ವಿನ್ಯಾಸಗೊಳಿಸಲಾಗಿದೆ" ಎಂದು ಮುನಿರತ್ನ ನಾಯ್ಡು ಹೇಳಿದರು.

ಈ ವರ್ಷದ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ ರಾಜ್ ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಪ್ರತಿಕೃತಿಗಳನ್ನು ತರಬೇಕೆಂಬ ಯೋಜನೆ ರೂಪಿಸಿದ್ದ ಕಾಳಿದಾಸ್ ರಾಜ್ ಅವರು,  "ಈ ಯೋಜನೆಗೆ 32 ಲಕ್ಷ ರುಪಾಯಿ ಖರ್ಚಾಗಿದೆ" ಎಂದು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್