ಬಿಬಿಎಂಪಿಯಲ್ಲಿ 40% ನಿಂದ 50%ಗೆ ಏರಿದ ಕಮಿಷನ್: ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘದ ಆರೋಪ

  • ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಮನವಿ ಸಲ್ಲಿಕೆ
  • ಹೊಸ ಹೊಸ ಆದೇಶಗಳಿಂದ ಗುತ್ತಿಗೆದಾರರಿಗೆ ಕಿರುಕುಳ: ಆರೋಪ

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಗುತ್ತಿಗೆದಾರರ ಸಂಘ 40% ಕಮಿಷನ್ ಆರೋಪ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿತ್ತು. ಇದು ರಾಜ್ಯದ ಆಡಳಿತದಲ್ಲಿ ತಲ್ಲಣ ಸೃಷ್ಟಿಸಿ ಸರ್ಕಾರವನ್ನೆ ಅಲ್ಲಾಡಿಸಿತ್ತು. ಈಗ ಅಂತಹದ್ದೆ ಮತ್ತೊಂದು ಗಂಭೀರ ಆರೋಪವನ್ನು ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿರುದ್ಧ ಮಾಡಿದೆ. ಬಿಬಿಎಂಪಿಯಲ್ಲಿ ಲಂಚದ ಪ್ರಮಾಣವು 40% ನಿಂದ 50%ಗೆ ಹೆಚ್ಚಾಗಿದೆ ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ.    

ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘದ ಅಧ್ಯಕ್ಷ ಟಿ ಕೆ ಮಂಜುನಾಥ್ ಹಾಗೂ ಪದಾಧಿಕಾರಿಗಳು ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಮಂಗಳವಾರ ಈ ಕುರಿತು ಮನವಿ ಪತ್ರ ಸಲ್ಲಿಸಿದ್ದಾರೆ. 

“ಬಿಬಿಎಂಪಿಯಲ್ಲಿ ಹೊಸ ಹೊಸ ಅಧಿಕಾರಿಗಳು ಜಾರಿಗೆ ತಂದಿರುವ ಆದೇಶಗಳಿಂದಾಗಿ ಗುತ್ತಿಗೆದಾರರು ಕಾಮಗಾರಿ ಪಡೆಯುವ ಪ್ರಕ್ರಿಯೆಯಿಂದ ಹಿಡಿದು, ಕಾಮಗಾರಿ ಮುಗಿದು ಬಿಲ್ ಪಡೆಯುವ ವರೆಗೆ ಶೇ. 40 ರಿಂದ ಶೇ. 50ರಷ್ಟು ಕಮಿಷನ್ ನೀಡಬೇಕಿದೆ” ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಟಿ ಕೆ ಮಂಜುನಾಥ್ ಈ ದಿನ.ಕಾಮ್ ಗೆ ತಿಳಿಸಿದರು. 

“ಮೊದಲಿನಂತೆ ಪಾಲಿಕೆಯ ಮುಖ್ಯ ಆಯುಕ್ತರ ತಾಂತ್ರಿಕ ಜಾಗೃತ ಕೋಶ ವಿಭಾಗದವರು ಕಡತವನ್ನು ಪರಿಶೀಲಿಸಿ, ಬಿ ಆರ್ ನಮೂದಿಸಲು ಎಲ್ಲ ಗುತ್ತಿಗೆದಾರರಿಗೆ ಅನುವು ಮಾಡಿಕೊಡಬೇಕು. ನಮ್ಮ ಮನವಿ ಪರಿಗಣಿಸಿ ಹೆಚ್ಚುತ್ತಿರುವ ಕಚೇರಿಯ ಟೇಬಲ್‌ಗಳನ್ನು ಕಡಿತಗೊಳಿಸಬೇಕು. ಇಲ್ಲದಿದ್ದರೆ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಹೋರಾಟ ನಡೆಸಲು ಸಿದ್ಧ” ಎಂದು ಟಿ ಕೆ ಮಂಜುನಾಥ್ ಎಚ್ಚರಿಕೆ ನೀಡಿದರು.

ಗುತ್ತಿಗೆದಾರರ ಸಂಘ ನೀಡಿರುವ ಮನವಿ ಪತ್ರದಲ್ಲೇನಿದೆ?

“ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಗುತ್ತಿಗೆದಾರರು ಈಗಾಗಲೇ ಬಾಕಿ ಇರುವ 22 ತಿಂಗಳುಗಳ ಬಿಲ್ ಪಾವತಿಯಾಗದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಆದರೂ ತಾವು ಹೊಸ, ಹೊಸ ಆದೇಶಗಳನ್ನು ಹೊರಡಿಸಿರುವುದರಿಂದ ಲಂಚದ ಪ್ರಮಾಣವು 40 ಪರ್ಸಂಟೇಜ್‌ನಿಂದ ಶೇ. 50 ಪರ್ಸೆಂಟ್ ಕಮಿಷನ್ ಹಂತಕ್ಕೆ ತಲುಪಿರುತ್ತದೆ” ಎಂದು ಆರೋಪಿಸಿದ್ದಾರೆ.

“ಪ್ರತಿ ಕಚೇರಿಯಲ್ಲೂ ಕಡತಗಳನ್ನು ಸಿದ್ಧಪಡಿಸಿ ಮಂಡಿಸುವುದಕ್ಕೆ ಕಮಿಷನ್ ಹೆಚ್ಚುತ್ತಾ ಹೋಗುತ್ತಿದೆ. ಆದಾಗ್ಯೂ, ತಾವು ಹೊಸ ಹೊಸ ಕಚೇರಿಗಳಿಗೆ ಕಡತಗಳನ್ನು ಪರಿಶೀಲಿಸಲು ಮಂಡಿಸಲು ಆದೇಶಿಸಿರುತ್ತೀರಿ. ಪ್ರತಿ ಹಂತದಲ್ಲೂ ಸಹಾಯಕ ಎಂಜಿನಿಯರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಕಾರ್ಯಪಾಲಕ ಎಂಜಿನಿಯರ್, ಮುಖ್ಯ ಎಂಜಿನಿಯರ್ ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳು ಕಾಮಗಾರಿಗಳನ್ನು ವೀಕ್ಷಿಸಿ ದೃಢೀಕರಿಸುತ್ತಾರೆ” ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.   

Image

“ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಾಮಗಾರಿಗಳನ್ನು ಪರಿವೀಕ್ಷಿಸಿ ಮತ್ತು ಕಡತಗಳನ್ನು ಪರಿಶೀಲಿಸಿ ಅನುಮೋದಿಸಿದ್ದರೂ ಹೆಚ್ಚುವರಿಯಾಗಿ ಬೇರೆ ಬೇರೆ ಕಚೇರಿಯ ಅಧಿಕಾರಿಗಳಿಂದ ಕಾಮಗಾರಿಗಳನ್ನು ಪರಿವೀಕ್ಷಿಸಲು ಮತ್ತು ಕಡತವನ್ನು ಪರಿಶೀಲಿಸಲು ಆದೇಶಿಸುತ್ತಿರುವುದರಿಂದ ಗುತ್ತಿಗೆದಾರರಿಗೆ ಕಿರುಕುಳ ಹೆಚ್ಚಾಗುತ್ತಿದೆ” ಎಂದು ಅವರು ದೂರಿದ್ದಾರೆ.

ಈ ಸುದ್ದಿ ಓದಿದ್ದೀರಾ? ಸರ್ಕಾರದ ವಿರುದ್ಧ ಮತ್ತೆ 40% ಕಮಿಷನ್ ಆರೋಪ | ಸಿಎಂ ಆದಿಯಾಗಿ ಸಂಪೂರ್ಣ ಸರ್ಕಾರವೇ ಭ್ರಷ್ಟ: ಕೆಂಪಣ್ಣ ಗಂಭೀರ ಆರೋಪ

“ಪಾಲಿಕೆಯ ಮುಖ್ಯ ಆಯುಕ್ತರ ತಾಂತ್ರಿಕ ಜಾಗೃತ ಕೋಶ (ಟಿವಿಸಿಸಿ) ವಿಭಾಗದಲ್ಲಿ ಮತ್ತು ಗುಣನಿಯಂತ್ರಣ ವಿಭಾಗದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಕೊರತೆಯಿಂದ ಇಡೀ ಬಿಬಿಎಂಪಿಯ ಇಲಾಖೆಗಳ ಕಾಮಗಾರಿಗಳನ್ನು ಪರಿಶೀಲಿಸುವುದು ತಿಂಗಳಾನುಗಟ್ಟಲೆ ಸಮಯ ಬೇಕಾಗುವುದರಿಂದ ಗುತ್ತಿಗೆದಾರರಿಗೆ ಸಕಾಲದಲ್ಲಿ ಬಿ.ಆರ್ (ಬಿಲ್ ರಿಜಿಸ್ಟರ್) ನಮೂದಿಸಲು ತೊಂದರೆಯಾಗುತ್ತದೆ. ಆದ್ದರಿಂದ ತಾವು ಕೂಡಲೇ ಕಡತಗಳನ್ನು ಮಂಡಿಸುವ ಕಚೇರಿಗಳ ಸಂಖ್ಯೆ (ಟೇಬಲ್) ಕಡಿಮೆ ಮಾಡಬೇಕು” ಎಂದು ಮನವಿ ಮಾಡಿದ್ದಾರೆ.

"ಆದರಿಂದ ಮೊದಲಿನಂತೆ ಪಾಲಿಕೆಯ ಮುಖ್ಯ ಆಯುಕ್ತರ ತಾಂತ್ರಿಕ ಜಾಗೃತ ಕೋಶ ವಿಭಾಗದವರು ಕಡತವನ್ನು ಪರಿಶೀಲಿಸಿ, ಬಿ ಆರ್ ನಮೂದಿಸಲು ಎಲ್ಲ ಗುತ್ತಿಗೆದಾರರಿಗೆ ಅನುವು ಮಾಡಿಕೊಡಬೇಕು. ನಮ್ಮ ಮನವಿ ಪರಿಗಣಿಸಿ ಹೆಚ್ಚುತ್ತಿರುವ ಕಚೇರಿಯ ಟೇಬಲ್‌ಗಳನ್ನು ಕಡಿತಗೊಳಿಸುತ್ತೀರೆಂದು ನಂಬಿರುತ್ತೇವೆ. ಇಲ್ಲದಿದ್ದ ಪಕ್ಷದಲ್ಲಿ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಬೀದಿಗಿಳಿದು ಪ್ರತಿಭಟಿಸುವುದಾಗಿ ಎಲ್ಲ ಗುತ್ತಿಗೆದಾರರು ನಿರ್ಧರಿಸಿದ್ದಾರೆ” ಎಂದು ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘ ಎಚ್ಚರಿಕೆ ನೀಡಿದೆ.

ಗುತ್ತಿಗೆದಾರರು, ಅಧಿಕಾರಿಗಳ ಜತೆ ಚರ್ಚಿಸಲಾಗುವುದು: ತುಷಾರ್ ಗಿರಿನಾಥ್ 

ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಈ ದಿನ.ಕಾಮ್ ಜತೆಗೆ ಮಾತನಾಡಿ, “ಗುತ್ತಿಗೆದಾರರ ಅಹವಾಲು ಸ್ವೀಕರಿಸಿದ್ದೇವೆ. ಅದರ ಆಧಾರದ ಮೇಲೆ ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ವ್ಯವಸ್ಥೆಯನ್ನು ಬಲಗೊಳಿಸುವ ಉದ್ದೇಶದಿಂದ ಕಾಮಾಗಾರಿ ವಿಚಾರದಲ್ಲಿ ಕೆಲವು ಬದಲಾವಣೆ ತರಲಾಗಿದೆ. ಪಾಲಿಕೆಯ ಮುಖ್ಯ ಆಯುಕ್ತರ ತಾಂತ್ರಿಕ ಜಾಗೃತ ಕೋಶ ಮತ್ತು ಗುಣಮಟ್ಟ ನಿಯಂತ್ರಣ ಶಾಖೆಯನ್ನು ಮತ್ತಷ್ಟು ಬಲಗೊಳಿಸಲಾಗುತ್ತಿದೆ. ನಾವು ಯಾವುದೇ ಹೊಸ ಆದೇಶಗಳನ್ನು ತಂದಿಲ್ಲ. ಇರುವ ಕಾನೂನುಗಳನ್ನೇ ಬಲಗೊಳಿಸಿದ್ದೇವೆ. ಕಮಿಷನ್ ಆರೋಪದ ಕುರಿತು ಗುತ್ತಿಗೆದಾರರು ಮತ್ತು ನಮ್ಮ ಅಧಿಕಾರಿಗಳ ಜತೆಗೆ ಚರ್ಚಿಸಲಾಗುವುದು. ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳುವ ವಿಚಾರದಲ್ಲಿ ರಾಜಿಯೆ ಇಲ್ಲ” ಎಂದು ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್