ಬೆಂಗಳೂರು | ಅಶ್ವತ್ಥ್‌ ನಾರಾಯಣ್‌ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರ ಹಿಂದೇಟು: ಖಂಡನೆ

  • ಐವತ್ತು ಸ್ಥಳೀಯರ ಸಹಿಯುಳ್ಳ ದೂರನ್ನು ಪೊಲೀಸರಿಗೆ ನೀಡಲಾಗಿದೆ
  • ರಸ್ತೆಗುಂಡಿಯಲ್ಲಿನ ಸಾವುಗಳಿಗೆ ಶಾಸಕರು ಹಾಗೂ ಅಧಿಕಾರಿಗಳೇ ಕಾರಣ

ಬೆಂಗಳೂರಿನ ಮರಿಯಪ್ಪನಪಾಳ್ಯ ನಿವಾಸಿ ಕುಮಾರ್‌ ಎಂಬುವವರು ರಸ್ತೆಗುಂಡಿಗೆ ಬಲಿಯಾಗಿದ್ದರು. ಅವರ ಸಾವಿಗೆ ಸ್ಥಳೀಯ ಶಾಸಕ (ಮಲ್ಲೇಶ್ವರಂ ಕ್ಷೇತ್ರ), ಸಚಿವ ಅಶ್ವತ್ಥ್‌ ನಾರಾಯಣ್‌ ಕಾರಣವೆಂದು ಆರೋಪಿಸಿರುವ ಸ್ಥಳೀಯರು, ಸಚಿವರ ವಿರುದ್ಧ ದೂರು ನೀಡಿದರೂ ಪೊಲೀಸರು ಪ್ರಕರಣ ದಾಖಲಿಸಿಲ್ಲ. ಬದಲಾಗಿ, ರಸ್ತೆಗುಂಡಿ ವಿರುದ್ಧ ಪ್ರತಿಭಟಿಸಿದವರನ್ನೇ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ಬೆಂಗಳೂರು ಅಧ್ಯಕ್ಷ ಮೋಹನ್‌ ದಾಸರಿ ಆರೋಪಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಮೋಹನ್‌ ದಾಸರಿ, “ಸಿ.ಎನ್ ಅಶ್ವತ್ಥ್‌ ನಾರಾಯಣ್‌ ವಿರುದ್ಧ ಸುಮಾರು ಐವತ್ತು ಸ್ಥಳೀಯರ ಸಹಿಯುಳ್ಳ ದೂರನ್ನು ಪೊಲೀಸರಿಗೆ ನೀಡಲಾಗಿದೆ. ಆದರೆ, ಪೊಲೀಸರು ದೂರನ್ನು ಸ್ವೀಕರಿಸಲು ಹಾಗೂ ಪ್ರಕರಣ ದಾಖಲಿಸಿಕೊಳ್ಳಲು ಹಿಂಜರಿದಿದ್ದಾರೆ" ಎಂದು ಆರೋಪಿಸಿದ್ದಾರೆ.

"ಪ್ರತಿಭಟನೆ ನಡೆಸಿದ ಕಾರಣಕ್ಕೆ ಎಎಪಿ ನಾಯಕರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ನ್ಯಾಯದ ಪರವಾಗಿ ನಿರ್ಧಾರ ತೆಗೆದುಕೊಳ್ಳುವ ಬದಲು, ಸಚಿವರ ಆದೇಶದಂತೆ ಕೆಲಸ ಮಾಡುತ್ತಿದ್ದಾರೆ. ಪೊಲೀಸರನ್ನು ಕೈಗೊಂಬೆ ಮಾಡಿಕೊಂಡು ಜನರ ದನಿಯನ್ನು ಹತ್ತಿಕ್ಕುತ್ತಿರುವ ಅಶ್ವತ್ಥ್‌ ನಾರಾಯಣ್‌ರವರಿಗೆ ನಾಚಿಕೆಯಾಗಬೇಕು” ಎಂದು ಕಿಡಿಕಾರಿದರು.

“ಬೆಂಗಳೂರಿನಲ್ಲಿ ರಸ್ತೆಗುಂಡಿಗೆ ಜನಸಾಮಾನ್ಯರು ಸಾಯುತ್ತಿರುವುದನ್ನು ಸರ್ಕಾರಿ ಪ್ರಾಯೋಜಿತ ಕಗ್ಗೊಲೆ ಎಂದು ಪರಿಗಣಿಸಬೇಕು. ರಸ್ತೆಗುಂಡಿ ಮುಚ್ಚುವಲ್ಲಿ ವಿಫಲರಾದ ಮತ್ತು ಕಳಪೆಗಾರಿಯ ಕರ್ತೃಗಳಾದ ಶಾಸಕರು ಹಾಗೂ ಅಧಿಕಾರಿಗಳನ್ನು ಕೊಲೆಗಾರರೆಂದು ಕರೆಯಬೇಕು" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | ಇನ್ಮುಂದೆ ದಿನಪೂರ್ತಿ ತೆರೆದಿರುತ್ತವೆ ಪಾರ್ಕ್‌ಗಳು; ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ ನಿರ್ವಹಣಾ ಕೆಲಸ

"ಈ 40% ಸರ್ಕಾರಕ್ಕೆ ರಸ್ತೆಗುಂಡಿಗಳನ್ನು ಕಾಲಕಾಲಕ್ಕೆ ಮುಚ್ಚಿಸಬೇಕು ಹಾಗೂ ಪಾರದರ್ಶಕವಾಗಿ ರಸ್ತೆ ಕಾಮಗಾರಿಗಳನ್ನು ನಡೆಸಬೇಕು ಎಂಬ ಕಾಳಜಿ ಇಲ್ಲ. ಕೇವಲ ದುಡ್ಡು ಹೊಡೆಯುವುದೊಂದೇ ಸಚಿವರು ಹಾಗೂ ಶಾಸಕರ ಗುರಿಯಾಗಿದೆ. ಬಿಬಿಎಂಪಿ ಚುನಾವಣೆಯ ನೀತಿ ಸಂಹಿತೆ ಜಾರಿಯಾಗುವುದಕ್ಕೆ ಬೆರಳೆಣಿಕೆಯ ದಿನಗಳಿದ್ದಾಗ ಮಾತ್ರ ರಸ್ತೆಗುಂಡಿಗಳನ್ನು ಕಳಪೆ ಕಾಮಗಾರಿಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚಿ ಮತದಾರರನ್ನು ವಂಚಿಸಲು ಸರ್ಕಾರ ನಿರ್ಧರಿಸಿದೆ. ಇಂತಹ ಭ್ರಷ್ಟ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸಬೇಕು” ಎಂದು ಮೋಹನ್‌ ದಾಸರಿ ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app