ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಒಂದು ಕೋಟಿ ಮೊತ್ತದ ಅಪಘಾತ ವಿಮಾ ಯೋಜನಾ ಸೌಲಭ್ಯ ಜಾರಿ

  • ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಜೊತೆಗೆ ಒಡಂಬಡಿಕೆ
  • ಅಂಗವೈಕಲ್ಯಕ್ಕೆ ತುತ್ತಾದಲ್ಲಿ ₹50 ಲಕ್ಷ ವಿಮಾ ಪರಿಹಾರ : ಕೆಎಸ್‌ಆರ್‌ಟಿಸಿ

ದೇಶದ ರಸ್ತೆ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಸಿಬ್ಬಂದಿಗೆ ಒಂದು ಕೋಟಿ ಮೊತ್ತದ ಅಪಘಾತ ವಿಮಾ ಯೋಜನಾ ಸೌಲಭ್ಯ ಜಾರಿ ಮಾಡಿದೆ.

ಈಗಾಗಲೇ, ₹50 ಲಕ್ಷ ವಿಮೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಸೋಮವಾರ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್‌ ಅವರಿಂದ ಮಾಡಿಕೊಂಡ ಒಡಂಬಡಿಕೆಯ ₹50 ಲಕ್ಷ ಸೇರಿ ಒಟ್ಟು ₹1 ಕೋಟಿ ಅಪಘಾತ ವಿಮೆ ನೀಡುವ ಯೋಜನೆಯನ್ನು ಕೆಎಸ್‌ಆರ್‌ಟಿಸಿ ರೂಪಿಸಿದೆ. ಸೋಮವಾರ ನಿಗಮದ ಕೇಂದ್ರ ಕಚೇರಿಯಲ್ಲಿ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್‌ರವರು ಒಡಂಬಡಿಕೆಗೆ ಸಹಿ ಹಾಕಿದರು.

  • ಈ ವಿಮಾ ಯೋಜನೆಗೆ ಸಿಬ್ಬಂದಿ ಪ್ರತಿ ತಿಂಗಳು ₹62.50, ಜಿ.ಎಸ್.ಟಿ ಸೇರಿದಂತೆ ವಾರ್ಷಿಕ ₹885 ಪ್ರೀಮಿಯಂ ಪಾವತಿಸಬೇಕಾಗುತ್ತದೆ.
  • ಈ ವೈಯಕ್ತಿಕ ವಿಮಾ ಯೋಜನೆಯಿಂದ ಪಾಲಿಸಿದಾರರು ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ ₹50 ಲಕ್ಷಗಳ ಪರಿಹಾರದ ಹಣ ಕೂಡಲೇ ದೊರೆಯಲಿದೆ.
  • ಅಪಘಾತದಲ್ಲಿ ಸಿಬ್ಬಂದಿಗಳು ಶಾಶ್ವತವಾಗಿ ಪೂರ್ಣ ಅಂಗ ವೈಕಲ್ಯಕ್ಕೆ ತುತ್ತಾದಲ್ಲಿ ₹50 ಲಕ್ಷಗಳ ವಿಮಾ ಪರಿಹಾರ ದೊರೆಯಲಿದೆ.
  • ಈ ವಿಮಾ ಯೋಜನೆಯಲ್ಲಿ ಮತ್ತೊಂದು ಉಪಯುಕ್ತ ಕ್ರಮವೆಂದರೆ ಕರ್ತವ್ಯ ನಿರತ ಹಾಗೂ ಕರ್ತವ್ಯದಲ್ಲಿ ಇಲ್ಲದ ಸಮಯದಲ್ಲೂ ಆಗುವ ವೈಯಕ್ತಿಕ ಅಪಘಾತಗಳಿಗೂ ವಿಮೆ ಅನ್ವಯಿಸುತ್ತದೆ.
  •  ಒಂದು ವೇಳೆ ಸಿಬ್ಬಂದಿಯು ಅಪಘಾತಕ್ಕೆ ಒಳಗಾಗಿ ತಾತ್ಕಾಲಿಕ ಅಂಗವೈಕಲ್ಯ ಉಂಟಾಗಿ, ತನ್ನ ಮೂಲ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಅಸಮರ್ಥನಾದಲ್ಲಿ, ಆತನು ಚೇತರಿಸಿಕೊಳ್ಳುವವರೆಗೆ, ಆತನಿಗೆ ವಿಮೆ ಮಾಡಲಾದ ₹50 ಲಕ್ಷ ಮೊತ್ತದ ಶೇಕಡಾ ಒಂದರಷ್ಟು ಮೊತ್ತವನ್ನು ಪ್ರತಿವಾರ ₹5000ಕ್ಕೆ ಹೆಚ್ಚದಂತೆ ಅಥವಾ ಅವರ ಮಾಸಿಕ ಸಂಬಳದ ಶೇಕಡಾ 25ರಷ್ಟನ್ನು ಯಾವುದು ಕಡಿಮೆಯೋ ಅದನ್ನು ಸಿಬ್ಬಂದಿಗೆ ವಿಮಾ ಸಂಸ್ಥೆಯು ನೀಡುವುದು.
  • ಈ ಎರಡು ವಿಮಾ ಯೋಜನೆಗಳಿಂದ ನಿಗಮವು ತನ್ನ ಸಿಬ್ಬಂದಿಗಳಿಗೆ ₹1 ಕೋಟಿ ಮೊತ್ತದ ಅಪಘಾತ ಪರಿಹಾರ ವಿಮಾ ಯೋಜನೆ ಜಾರಿಗೆ ತಂದಿದೆ.
  • ಇಲ್ಲಿಯವರೆಗೂ ನಿಗಮದ ಸಿಬ್ಬಂದಿಗೆ ಯಾವುದೇ ಅಪಘಾತ ವಿಮಾ ಯೋಜನೆಯ ಸೌಲಭ್ಯವಿರಲಿಲ್ಲ.

ಸಿಬ್ಬಂದಿಗಳು ಸಂಸ್ಥೆಗಾಗಿ ಹಗಲಿರುಳು ದುಡಿಯುತ್ತಾರೆ ಅವರ ಆಕಸ್ಮಿಕ ಅಗಲಿಕೆಯು ಅಥವಾ ಅಂಗವೈಕಲ್ಯತೆಯು ಅವರ ಪರಿವಾರದವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಬಾರದೆಂಬ ಕಾರಣದಿಂದ ಅವರ ಅವಲಂಬಿತರ ಹಿತ ಕಾಪಾಡುವ ಈ ಅಪಘಾತ ವಿಮಾ ಪ್ಯಾಕೇಜ್ ಯೋಜನೆಯ ಒಡಂಬಡಿಕೆಯನ್ನು ಸೋಮವಾರ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ರವರೊಂದಿಗೆ ಮಾಡಿಕೊಳ್ಳಲಾಗಿದೆ. ಕೆಲ ದಿನಗಳ ಹಿಂದೆಯಷ್ಟೇ, ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಅವರೊಡನೆ ಸಹಿ ಹಾಕಿರುವ ಒಡಂಬಂಡಿಕೆಯು ಕಾರ್ಮಿಕರ ಹಿತ ಕಾಪಾಡಲು ಅನುಕೂಲಕರ ವ್ಯವಸ್ಥೆಯಾಗಿದೆ.

ಈ ಸಂದರ್ಭದಲ್ಲಿ ನಿಗಮದ ಅಧ್ಯಕ್ಷರಾದ ಎಂ. ಚಂದ್ರಪ್ಪ ಮಾತನಾಡಿ, "ನಿಗಮವು ಜಾರಿಗೊಳಿಸುತ್ತಿರುವ ಈ ವಿಮಾ ಯೋಜನೆಯು ಕಾರ್ಮಿಕ ಮತ್ತು ಅವರ ಕುಟುಂಬದವರ ಹಿತದೃಷ್ಟಿಯಿಂದ ಜಾರಿಗೊಳಿಸುತ್ತಿರುವ ಅತ್ಯುತ್ತಮವಾದ ಯೋಜನೆಯಾಗಿದೆ. ಕರ್ತವ್ಯದ ನಿರತ ಮತ್ತು ಕರ್ತವ್ಯದ ಹೊರತಾಗಿ ಒಳಗೊಂಡಂತೆ ನೀಡಲಾಗುವ ಈ ಅಪಘಾತ ವಿಮಾ ಯೋಜನೆಯಿಂದ ಸಿಬ್ಬಂದಿಗೆ ಮತ್ತಷ್ಟು ಅನುಕೂಲವಾಗಲಿದೆ" ಎಂದು ಸಂತಸ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ನಮ್ಮ ಮೆಟ್ರೋ | ವಾಟ್ಸ್ಆ್ಯಪ್ ಕ್ಯೂಆರ್ ಕೋಡ್ ಆಧಾರಿತ ಟಿಕೆಟ್ ಬಳಕೆ; ಉತ್ತಮ ಸ್ಪಂದನೆ

ಈ ಕಾರ್ಯಕ್ರಮದಲ್ಲಿ  ಡಾ. ನವೀನ್ ಭಟ್ ವೈ, ಭಾಆಸೇ, ನಿರ್ದೇಶಕರು ಜಂಟಿ ಕ್ರಿಯಾ ಸಮಿತಿಯ ಕಾರ್ಮಿಕ ಮುಖಂಡರುಗಳಾದ ಅನಂತ ಸುಬ್ಬರಾವ್ ಮತ್ತು ಇತರೆ ಕಾರ್ಮಿಕ ಸಂಘಗಳ ಮುಖಂಡರುಗಳು, ಉಷಾ ಚಂದ್ರಮೌಳಿ, ಪ್ರಾದೇಶಿಕ ವ್ಯವಸ್ಥಾಪಕರು, ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿ. ಬೆಂಗಳೂರು ಹಾಗೂ ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app