
- 2015ರಲ್ಲಿ ನಡೆದಿದ್ದ ಅಕ್ರಮ
- ವೈಯಕ್ತಿಕ ಲಾಭಕ್ಕಾಗಿ ವಂಚನೆ
ರಿಯಲ್ ಎಸ್ಟೇಟ್ ಡೆವಲಪರ್ಗಳಿಗೆ ನಿವೇಶನ ಹಾಗೂ ಕಟ್ಟಡಗಳ ಅಕ್ರಮವಾಗಿ ಟಿಡಿಆರ್ (ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಪತ್ರ) ನೀಡಿ, ಪಾಲಿಕೆಗೆ ವಂಚಿಸಿದ್ದಾರೆಂದು ಆರು ನಿವೃತ್ತ ಸರ್ಕಾರಿ ಅಧಿಕಾರಿಗಳ ವಿರುದ್ಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ದೂರು ದಾಖಲಿಸಿದೆ.
ಆರೋಪಿಗಳಲ್ಲಿ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ರಾಮೇಗೌಡ ಡಿ, ನಿವೃತ್ತ ಜಂಟಿ ಆಯುಕ್ತ ದೇವರಾಜ್ ಕೆ.ಎಸ್, ನಿವೃತ್ತ ಸಹಾಯಕ ಜಂಟಿ ಆಯುಕ್ತ ಉಮಾನಂದ ರೈ, ನಿವೃತ್ತ ಸಹಾಯಕ ತಹಶೀಲ್ದಾರ್ ಗಂಗೇಗೌಡ ಎಂ.ಎ, ನಿವೃತ್ತ ಸರ್ವೇಯರ್ ಗುಳ್ಳಪ್ಪ, ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ಅಗಸೆಮನಿ ವಿರುದ್ಧ ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ ಮತ್ತು ವಂಚನೆಯ ಆರೋಪದ ಮೇಲೆ ದೂರು ದಾಖಲಾಗಿದೆ.
ಆರೋಪಿ ಅಧಿಕಾರಿಗಳು 2015ರಲ್ಲಿ ಅಕ್ರಮ ಟಿಡಿಆರ್ ಮಾಡಿದ್ದಾರೆ. ಮಹದೇವಪುರ ವಲಯದ ವ್ಯಾಪ್ತಿಗೆ ಬರುವ ಕೆ ಆರ್ ಪುರಂ ಹೋಬಳಿಯಲ್ಲಿ ಬಿಬಿಎಂಪಿಯು 57ಚದರ ಮೀಟರ್ ಆಸ್ತಿ ಮತ್ತು ಅದರ ಮೇಲೆ ನಿರ್ಮಿಸಿದ ಕಟ್ಟಡದ ಅಭಿವೃದ್ಧಿ ಕಾಮಗಾರಿಗಳಿಗೆ ಬದಲಾಗಿ 1,116 ಚದರ ಮೀಟರ್ ಭೂಮಿಗೆ ಟಿಆರ್ಸಿ ನೀಡಿದ್ದಾರೆ.
ಆಸ್ತಿಯ ಮಾಲೀಕ ಡಿ.ಕೆ ವೇಣುಗೋಪಾಲ್ ಡಿಆರ್ಸಿ (ಅಭಿವೃದ್ಧಿ ಹಕ್ಕು ಪತ್ರ)ಗಳನ್ನು ಖಾಸಗಿ ಡೆವಲಪರ್ಗೆ ಮಾರಾಟ ಮಾಡಿದ್ದಾರೆ. ಡೆವಲಪರ್ ಮರುಮೌಲ್ಯಮಾಪನಕ್ಕಾಗಿ ಡಿಆರ್ಸಿಯನ್ನು ಮಹದೇವಪುರ ವಲಯ ಕಚೇರಿಗೆ ಸಲ್ಲಿಸಿದಾಗ, ಡಿಆರ್ಸಿ ನೀಡಿದ ಮೂಲ ದಾಖಲೆಗಳು ಕಚೇರಿಯಲ್ಲಿ ನಾಪತ್ತೆಯಾಗಿರುವುದು ಕಂಡುಬಂದಿದೆ. 2020ರಲ್ಲಿ ಅಕ್ರಮ ಬೆಳಕಿಗೆ ಬಂದಿದ್ದು, ನಾಪತ್ತೆ ಪ್ರಕರಣ ಸಹ ದಾಖಲಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ ಚುನಾವಣೆ| ಅಂತಿಮ ಮತದಾರರ ಪಟ್ಟಿ ಸೆ. 29ರಂದು ಪ್ರಕಟ
ಈ ವಾರದ ಆರಂಭದಲ್ಲಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ಹೊಸ ದೂರು ಸಲ್ಲಿಸಿದೆ. ದೂರಿನಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಪಾಲಿಕೆಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಮತ್ತು "ವೈಯಕ್ತಿಕ ಲಾಭಕ್ಕಾಗಿ" ಡಿಆರ್ಸಿ ನೀಡಿದ್ದಾರೆ ಎಂದು ಆರೋಪಿಸಿದೆ.
ಇದೆಲ್ಲದರ ನಡುವೆ, ಬಿಬಿಎಂಪಿಯ ಟಿಡಿಆರ್ ಯೋಜನೆಯು ವಿವಾದದಲ್ಲಿ ಮುಳುಗಿದೆ. ಈ ಹಿಂದೆ ಹಲವಾರು ಅಕ್ರಮಗಳು ವರದಿಯಾಗಿವೆ. ಇದೀಗ ರದ್ದಾಗಿರುವ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಟಿಡಿಆರ್ ಯೋಜನೆಯಲ್ಲಿ ಭಾರಿ ಹಗರಣವನ್ನು ಬಯಲಿಗೆಳೆದಿತ್ತು. ಆ ಎಲ್ಲ ಪ್ರಕರಣಗಳನ್ನು ಈಗ ಕರ್ನಾಟಕ ಲೋಕಾಯುಕ್ತ ತನಿಖೆ ನಡೆಸಲಿದೆ.