ಬಿಬಿಎಂಪಿ | ಒತ್ತುವರಿ ತೆರವುಗೊಳಿಸದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ; ತುಷಾರ್ ಗಿರಿನಾಥ್ ಎಚ್ಚರಿಕೆ

  • ಯಲಹಂಕ ವಲಯ ವ್ಯಾಪ್ತಿಯಲ್ಲಿ ‘ಮುಖ್ಯ ಆಯುಕ್ತರ ನಡೆ ವಲಯದ ಕಡೆ’
  • ಬೆಂಗಳೂರಿನ ಎಲ್ಲ ವಲಯದ ಸಫಾಯಿ ಕರ್ಮಚಾರಿಗಳಿಗೆ ಗುರುತಿನ ಚೀಟಿ 

"ಬೆಂಗಳೂರಿನ ಹೆಬ್ಬಾಳದ ಕಾಫಿ ಬೋರ್ಡ್ ಬಡಾವಣೆಯಲ್ಲಿನ ಪಾದಚಾರಿ ಮಾರ್ಗ ಒತ್ತುವರಿಯನ್ನು ಶೀಘ್ರವೇ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು" ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದರು.

ಬೆಂಗಳೂರು ನಗರದ ಯಲಹಂಕ ವಲಯ ವ್ಯಾಪ್ತಿಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಮುಖ್ಯ ಆಯುಕ್ತರ ನಡೆ ವಲಯದ ಕಡೆ’ ಕಾರ್ಯಕ್ರಮದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಈ ವೇಳೆ ಕೆಲವರು “ಕಾಫಿ ಬೋರ್ಡ್ ಲೇಔಟ್ ನಲ್ಲಿ ಬೀದಿ ವ್ಯಾಪಾರಿಗಳು ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಪಾದಚಾರಿಗಳ ಓಡಾಟಕ್ಕೆ ಸಮಸ್ಯೆ ಆಗುತ್ತಿದ್ದು, ಸಮಸ್ಯೆ ಬಗೆಹರಿಸಿ” ಎಂದು ಮನವಿ ಮಾಡಿದರು. ಸಮಸ್ಯೆ ಕಡೆ ಗಮನ ಹರಿಸುವಂತೆ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.

“ಮಳೆ ನೀರು ಕಾಲುವೆಗಳಲ್ಲಿ ಹೂಳನ್ನು ನಿರಂತರವಾಗಿ ತೆರವುಗೊಳಿಸಬೇಕು. ಮಳೆ ನೀರು ನಿಲ್ಲದೆ ನೀರು ಸರಾಗವಾಗಿ ಹರಿದು ಹೋಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚಿಸಿದರು.
“ಕಾಫಿ ಬೋರ್ಡ್ ಲೇಔಟ್‌ನಲ್ಲಿರುವ ಉದ್ಯಾನವನದಲ್ಲಿ ಹಾಳಾಗಿರುವ ಆಸನಗಳನ್ನು ದುರಸ್ತಿ ಮಾಡುವ ಜತೆಗೆ ಉದ್ಯಾನವನ ನಿರ್ವಹಣೆ ಮಾಡುವ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು” ಎಂದರು.

60 ಅಡಿ ರಸ್ತೆಯಲ್ಲಿ ವಾಹನಗಳು ಹೆಚ್ಚು ವೇಗವಾಗಿ ಸಂಚರಿಸುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ಪೊಲೀಸ್ ಅಧಿಕಾರಿಗಳ ಜತೆಗೆ ಸ್ಥಳ ಪರಿಶೀಲಿಸಿ ಟ್ರಾಫಿಕ್ ಎಂಜಿನಿಯರಿಂಗ್ ಸೆಲ್ ಮೂಲಕ ಒಂದು ವಾರದಲ್ಲಿ ಎರಡು ಹಂಪ್‌ಗಳನ್ನು ನಿರ್ಮಿಸುವಂತೆ ಮೂಲ ಸೌಕರ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ಗೆ ಸೂಚಿಸಿದರು.

ಕಾಫಿ ಬೋರ್ಡ್ ಲೇಔಟ್‌ನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಿಯಂತ್ರಿಸಬೇಕು ಎಂದು ನಿವಾಸಿಗಳು ಮನವಿ ಮಾಡಿದರು, ಮುಖ್ಯ ಆಯುಕ್ತರು ಪ್ರತಿಕ್ರಿಯಿಸಿ, ಪಶುಪಾಲನಾ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಚ್ಚುವ ನಾಯಿಗಳನ್ನು ಹಿಡಿದು ರೇಬಿಸ್ ಚುಚ್ಚುಮದ್ದು ನೀಡಲು ಸೂಚನೆ ನೀಡಿದರು.

ಜಕ್ಕೂರು ಮೇಲುಸೇತುವೆ ಕಾಮಗಾರಿ ಹಾಗೂ ರೈಲ್ವೆ ಹಳಿ ಕೆಳಗೆ ನಿರ್ಮಿಸಿರುವ ಸಬ್ ವೇ ಅನ್ನು ಬಳಕೆಗೆ ವ್ಯವಸ್ಥೆ ಕಲ್ಪಿಸಲು ಕೆಲವರು ಮನವಿ ಸಲ್ಲಿಸಿದರು. ಅದಕ್ಕೆ ಮುಖ್ಯ ಆಯುಕ್ತರು ಮೇಲುಸೇತುವೆ ನಿರ್ಮಾಣದ ಸ್ಥಳದಲ್ಲಿ ಭೂಸ್ವಾಧಿನ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರ ಸಮಸ್ಯೆ ಬಗೆಹರಿಸಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ರೈಲ್ವೆ ಹಳಿ ಕೆಳಗೆ ನಿರ್ಮಿಸಿರುವ ಸಬ್ ವೇ ಅನ್ನು ಬಳಕೆ ಮಾಡಲು ವ್ಯವಸ್ಥೆ ಮಾಡಿದ ನಂತರ ಸ್ಥಳದಲ್ಲಿ ಮಳೆ ನೀರು ನಿಲ್ಲದಂತೆ ತಾತ್ಕಾಲಿಕವಾಗಿ ಪಂಪ್ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಕ್ಕೂರು ಭಾಗದಲ್ಲಿನ ರಸ್ತೆ ಗುಂಡಿಗಳನ್ನು ಒಂದು ವಾರದಲ್ಲಿ ಮುಚ್ಚಬೇಕು. ದೊಡ್ಡ ಬೆಟ್ಟಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೂಡಲೇ ‘ನಮ್ಮ ಕ್ಲಿನಿಕ್’  ಪ್ರಾರಂಭಿಸಬೇಕು ಎಂದು ಆರೋಗ್ಯಾಧಿಕಾರಿಗೆ ಸೂಚನೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | ಅನಧಿಕೃತ ಬ್ಯಾನರ್, ಬಂಟಿಂಗ್ಸ್‌ ತಡೆಯಲು ವಿಶೇಷ ಆಯುಕ್ತರ ಸೂಚನೆ

ಸಫಾಯಿ ಕರ್ಮಚಾರಿಗಳಿಗೆ ಸಾಲ ಸೌಲಭ್ಯ

ಬೆಂಗಳೂರು ನಗರದಲ್ಲಿನ ಎಲ್ಲ ವಲಯಗಳಲ್ಲಿ ಬರುವ ಸಫಾಯಿ ಕರ್ಮಚಾರಿಗಳನ್ನು ಗುರುತಿಸಿ ಎಲ್ಲರಿಗೂ ಗುರುತಿನ ಚೀಟಿ ನೀಡಲಾಗುತ್ತಿದೆ. ಅಲ್ಲದೆ ಅವರ ಜೀವನೋಪಾಯಕ್ಕಾಗಿ ₹40 ಸಾವಿರ ಸಾಲ ನೀಡಲಾಗುತ್ತದೆ. ಅದನ್ನು ಸರಿಯಾಗಿ ಜಾರಿಗೊಳಿಸಲು ಕಲ್ಯಾಣ ವಿಭಾಗದ ವಿಶೇಷ ಆಯುಕ್ತರಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಎಲ್ಲರಿಗೂ ಸರಿಯಾದ ಸೌಲಭ್ಯಗಳನ್ನು ಕಲ್ಪಿಸಲು ಕಲ್ಯಾಣ ವಿಭಾಗದ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಬಿಬಿಎಂಪಿ ವಲಯ ಆಯುಕ್ತ ರಂಗಪ್ಪ, ವಲಯ ಜಂಟಿ ಆಯುಕ್ತರಾದ ಪೂರ್ಣಿಮಾ, ವಲಯ ಮುಖ್ಯ ಎಂಜಿನಿಯರ್ ರಂಗನಾಥ್, ಕಾರ್ಯಪಾಲಕ ಎಂಜಿನಿಯರ್, ಆರೋಗ್ಯಾಧಿಕಾರಿ ಹಾಗೂ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್