ಅಮೃತ ಮಹೋತ್ಸವ| ಬೆಂಗಳೂರಿನ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಬೇಕು: ತುಷಾರ್ ಗಿರಿನಾಥ್

  • ಆಗಸ್ಟ್‌ 13ರಿಂದ 15ರವರೆಗೆ ಹರ್ ಘರ್ ತಿರಂಗಾ ಅಭಿಯಾನ
  • ಇದುವರೆಗೆ 10 ಲಕ್ಷ ಧ್ವಜಗಳ ವಿತರಣೆ: ವಿಶೇಷ ಆಯುಕ್ತ ರಂಗಪ್ಪ

ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳ ಪ್ರತಿ ಫ್ಲ್ಯಾಟ್‌ಲ್ಲಿಯೂ ರಾಷ್ಟ್ರಧ್ವಜ ಹಾರಿಸಬೇಕು ಎಂದು ಅಪಾರ್ಟ್‌ಮೆಂಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮನವಿ ಮಾಡಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಆಗಸ್ಟ್‌ 13ರಿಂದ 15ರವರೆಗೆ ಹಮ್ಮಿಕೊಂಡಿರುವ 'ಪ್ರತಿ ಮನೆಯಲ್ಲಿಯೂ ರಾಷ್ಟ್ರಧ್ವಜ' (ಹರ್ ಘರ್ ತಿರಂಗಾ) ಅಭಿಯಾನದ ಅಂಗವಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಪಾರ್ಟ್‌ಮೆಂಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಜತೆಗೆ ಗುರುವಾರ ವರ್ಚುವಲ್ ಸಭೆ ನಡೆಸಿ ಬಳಿಕ ಮಾತನಾಡಿದರು.

“ಬೆಂಗಳೂರಿನಲ್ಲಿ ಹರ್ ಘರ್ ತಿರಂಗಾ ಅಭಿಯಾನವನ್ನು ಎಲ್ಲರೂ ಸೇರಿ ವಿಜೃಂಭಣೆಯಿಂದ ಆಚರಿಸಬೇಕು. ಅಭಿಯಾನ ಮುಗಿದ ಬಳಿಕ ರಾಷ್ಟ್ರಧ್ವಜವನ್ನು ನಿಯಮಾನುಸಾರ ತೆಗೆದು ತಮ್ಮ-ತಮ್ಮ ಮನೆಗಳಲ್ಲಿ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಅಲ್ಲದೆ, ತಮ್ಮ ಅಪಾರ್ಟ್‌ಮೆಂಟ್‌ಗಳಲ್ಲಿ ನಡೆದ ಅಭಿಯಾನದ ಛಾಯಾಚಿತ್ರ ಹಾಗೂ ದೃಶ್ಯಾವಳಿಗಳನ್ನು ಸಂಗ್ರಹಿಸಿ ಅಂತರ್ಜಾಲ ತಾಣ https://harghartiranga.com ನಲ್ಲಿ ಅಪ್ಲೋಡ್ ಮಾಡಿ" ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಲಾಲ್‌ಬಾಗ್‌ ಪುಷ್ಪ ಪ್ರದರ್ಶನ| ಪ್ರಯಾಣಿಕರಿಗೆ ಮೂರು ದಿನಗಳ ರಿಯಾಯಿತಿ ಟಿಕೆಟ್‌ ಘೋಷಿಸಿದ ʼನಮ್ಮ ಮೆಟ್ರೋʼ

ಬಿಬಿಎಂಪಿ ವಿಶೇಷ ಆಯುಕ್ತ (ಆಡಳಿತ) ರಂಗಪ್ಪ ಮಾತನಾಡಿ, "ಬಿಬಿಎಂಪಿ ವ್ಯಾಪ್ತಿಯ ಪ್ರತಿಯೊಂದು ಮನೆಯಲ್ಲೂ ರಾಷ್ಟ್ರಧ್ವಜವನ್ನು ಹಾರಿಸಬೇಕು. ಅದರಂತೆ ಇದುವರೆಗೆ 10 ಲಕ್ಷ ಧ್ವಜಗಳನ್ನು ವಿತರಿಸಿದ್ದು, ಇನ್ನೂ 5 ಲಕ್ಷ ಧ್ವಜಗಳನ್ನು ವಿತರಣೆ ಮಾಡಲಾಗುತ್ತಿದೆ. ಆಯಾ ವಲಯ ಜಂಟಿ ಆಯುಕ್ತರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳನ್ನು ಸಂಪರ್ಕಿಸಿ ಧ್ವಜಗಳನ್ನು ಮಾರಾಟ ಮಾಡಬೇಕು" ಎಂದು ಹೇಳಿದರು.

ಸಭೆಯಲ್ಲಿ ಎಲ್ಲ ವಲಯ ಜಂಟಿ ಆಯುಕ್ತರು, ನೋಡಲ್ ಅಧಿಕಾರಿಗಳು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್