ನಮ್ಮ ಮೆಟ್ರೋ | ನಿಲ್ದಾಣದಿಂದ ನೇರವಾಗಿ ಕಚೇರಿಗಳಿಗೆ ಸ್ಕೈವಾಕ್‌ ನಿರ್ಮಿಸಿಕೊಳ್ಳಲು ಐಟಿ ಕಂಪನಿಗಳಿಗೆ ಅನುಮತಿ

  • ಸಿಲ್ಕ್ ಬೋರ್ಡ್‌ನಿಂದ ಹೆಬ್ಬಾಳದವರೆಗೆ 23 ಮೆಟ್ರೋ ನಿರ್ಮಾಣ
  • 'ಸ್ಕೈವಾಕ್‌' ನಿರ್ಮಾಣದ ಸಂಪೂರ್ಣ ವೆಚ್ಚ ಕಂಪನಿಗಳೇ ವಹಿಸಬೇಕು'

ಬೆಂಗಳೂರಿನ ಹೊರವಲಯದ ರಸ್ತೆಗಳಲ್ಲಿ ಹೊಸದಾಗಿ‌ ಮೆಟ್ರೋ ನಿರ್ಮಾಣ ಆಗುತ್ತಿದ್ದು, ಮೆಟ್ರೋ ನಿಲ್ದಾಣಗಳಿಂದ ನೇರವಾಗಿ ತಮ್ಮ ಕಚೇರಿಯವರೆಗೂ 'ಸ್ಕೈವಾಕ್‌' ನಿರ್ಮಾಣ ಮಾಡಿಕೊಳ್ಳಲು ಐಟಿ ಕಂಪನಿಗಳಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‍‌ಸಿಎಲ್) ಅನುಮೋದನೆ ನೀಡಿದೆ.

ಹೊರವರ್ತುಲ ರಸ್ತೆಯಲ್ಲಿನ ಕಂಪನಿಗಳ ಸಂಘಗಳೊಂದಿಗೆ ಮೆಟ್ರೋ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಇತ್ತೀಚೆಗೆ ಸಭೆ ನಡೆಸಿ, ಸ್ಕೈವಾಕ್‌ ನಿರ್ಮಿಸುವುದರ ಕುರಿತು ಒಪ್ಪಿಗೆ ನೀಡಿದ್ದಾರೆ. 

ಈ ಕುರಿತು ಈ ದಿನ.ಕಾಮ್‌ನೊಂದಿಗೆ ಮಾತನಾಡಿದ, ಮೆಟ್ರೋ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್, ‘‘ಐಟಿ ಬಿಟಿ ಕಂಪನಿಗಳು, ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಿರುವ ಈ ಮಾರ್ಗದಲ್ಲಿ ಮೆಟ್ರೋ ಬಹಳ ಉಪಯುಕ್ತವಾಗಲಿದೆ. ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ಹೆಚ್ಚಾಗಿ ಐಟಿ ಕಂಪನಿಗಳಿವೆ. ಅಲ್ಲಿನ ಉದ್ಯೋಗಿಗಳಿಗೆ ಇನ್ನಷ್ಟು ಉಪಯೋಗವಾಗಲೆಂದು, 'ಸ್ಕೈವಾಕ್‌' ನಿರ್ಮಿಸಿಕೊಳ್ಳಲು ಅವಕಾಶ ನೀಡಿದ್ದೇವೆ. ಸದ್ಯಕ್ಕೆ ಮೆಟ್ರೋ ನಿರ್ಮಾಣ ಬೊಮ್ಮಸಂದ್ರದವರೆಗೂ ಪ್ರಗತಿ ಹಂತದಲ್ಲಿದೆ" ಎಂದು ಹೇಳಿದರು. 

"ಪಾದಾಚಾರಿ ಮಾರ್ಗ ನಿರ್ಮಾಣ ಮಾಡಿಕೊಳ್ಳಲೂ ಅನುಮತಿ ನೀಡಲಾಗಿದೆ. ಅದರ ಖರ್ಚು ವೆಚ್ಚವನ್ನೆಲ್ಲ ಖಾಸಗಿ ಕಂಪನಿಗಳೇ ವಹಿಸಬೇಕು" ಎಂದರು.

AV Eye Hospital ad

ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ಈಗಾಗಲೇ ಮೆಟ್ರೋ ರೈಲು ಮಾರ್ಗ ನಿರ್ಮಾಣವಾಗುತ್ತಿದೆ. ಈ ಪೈಕಿ ಸಿಲ್ಕ್ ಬೋರ್ಡ್‌ನಿಂದ ಹೆಬ್ಬಾಳದ ತನಕ ಮೆಟ್ರೋ ನಿರ್ಮಾಣ ಆಗುವ ನಿಲ್ದಾಣಗಳಿಂದ ಪ್ರತ್ಯೇಕ 'ಸ್ಕೈವಾಕ್‌' ನಿರ್ಮಿಸಿಕೊಳ್ಳಲು ಕಂಪನಿಗಳು ಆಸಕ್ತಿ ವಹಿಸಿದರೆ ಅನುಮತಿ ನೀಡಲು ಬಿಎಂಆರ್‍‌ಸಿಎಲ್ ಒಪ್ಪಿಗೆ ಸೂಚಿಸಿದೆ.

ಸಿಲ್ಕ್ ಬೋರ್ಡ್‌ನಿಂದ ಹೆಬ್ಬಾಳದವರೆಗೆ ಒಟ್ಟು 23 ನಿಲ್ದಾಣಗಳು ನಿರ್ಮಾಣ ಆಗುತ್ತಿದ್ದು, ಈ ನಿಲ್ದಾಣಗಳಿಂದ 'ಸ್ಕೈವಾಕ್‌' ನಿರ್ಮಿಸಿಕೊಳ್ಳಬಹದು. ಇದರ ಸಂಪೂರ್ಣ ವೆಚ್ಚ ಆಯಾ ಕಂಪನಿಗಳೇ ವಹಿಸಲಿದ್ದು, ಯೋಜನೆಯನ್ನು ಪರಿಶೀಲಿಸಿ ಬಿಎಂಆರ್‍‌ಸಿಎಲ್ ಅನುಮೋದನೆ ನೀಡಲಿದೆ. 

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಪಟಾಕಿ ಹೊಡೆದವರಿಗಿಂತ ನೋಡಿದವರಿಗೇ ಹೆಚ್ಚು ಗಾಯ!

ಈಗಾಗಲೇ ಮೆಟ್ರೋ ಬೈಯಪ್ಪನಹಳ್ಳಿ- ವೈಟ್‌ಫೀಲ್ಡ್‌ವರೆಗೂ ಪ್ರಾಯೋಗಿಕ ಸಂಚಾರ ಆರಂಭಿಸಿದ್ದು, ಕಾರ್ಯಾಚರಣೆ ಪ್ರಗತಿಯಲ್ಲಿದೆ. ಸಂಪೂರ್ಣ ನೇರಳೆ ಮಾರ್ಗವು ಕಾರ್ಯಗತಗೊಂಡ ನಂತರ, ಕೆಂಗೇರಿಯಿಂದ ನಗರದ ಪೂರ್ವದಲ್ಲಿರುವ ವೈಟ್‌ಫೀಲ್ಡ್‌ಗೆ ಪ್ರಯಾಣ ಸುಗಮವಾಗಿರುತ್ತದೆ ಎಂದು ಅವರು ಹೇಳಿದರು. 

ಕೆಂಗೇರಿಯಿಂದ ಚಲ್ಲಘಟ್ಟದವರೆಗೂ ಮೆಟ್ರೋ ನಿರ್ಮಾಣ

ಮೈಸೂರು ರಸ್ತೆ ನಿಲ್ದಾಣದಿಂದ ಕೆಂಗೇರಿವರೆಗೆ ವಿಸ್ತರಿಸಿದ ನೇರಳೆ ಮಾರ್ಗವು ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ಕೆಂಗೇರಿಯಿಂದ ಚಲ್ಲಘಟ್ಟದವರೆಗಿನ ಮಾರ್ಗ ಮುಂದಿನ ವರ್ಷ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ. ಅಕ್ಟೋಬರ್ 25 ರಿಂದ 45 ದಿನಗಳ ಕಾಲ ಪ್ರಾಯೋಗಿಕ ಸಂಚಾರ ಇರಲಿದೆ. ಬಳಿಕ ರೈಲ್ವೇ ಸೇಫ್ಟಿ ಟೆಸ್ಟ್ ನಡೆಯಲಿದೆ. ಅದಾದ ನಂತರ ವಾಣಿಜ್ಯ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಅಂಜುಂ ಪರ್ವೇಜ್ ಹೇಳಿದರು. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app