ಆಗಸ್ಟ್‌ 15| ಕಬ್ಬನ್‌ಪಾರ್ಕ್‌ ರಸ್ತೆಯಲ್ಲಿ ಖಾಸಗಿ ವಾಹನ ಸಂಚಾರ ನಿರ್ಬಂಧ

  • ಬೆಳಿಗ್ಗೆ 8ರಿಂದ 11ರವರೆಗೂ ಕಾರ್ಯಕ್ರಮ ನಡೆಯಲಿದೆ
  • ಅತಿಥಿಗಳಿಗೆ ಮಾತ್ರ ವಾಹನ ನಿಲುಗಡೆಗೆ ಅನುಮತಿ

ರಾಜ್ಯ ಸರ್ಕಾರದ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ, ಕಬ್ಬನ್‌ ಪಾರ್ಕ್‌ನಲ್ಲಿ ಖಾಸಗಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಕಳೆದ ಎರಡು ವರ್ಷಗಳಿಂದ ಕೋವಿಡ್ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ, ರಾಷ್ಟ್ರೀಯ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಲಾಗಿರಲಿಲ್ಲ. ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಕಡಿಮೆಯಾದ ಕಾರಣ ರಾಜ್ಯ ಸರ್ಕಾರವು ಸ್ವಾತಂತ್ರ್ಯದ ಅಮೃತ ಮಹೋತ್ಸವನ್ನು ಸಾರ್ವಜನಿಕರನ್ನು ಒಳಗೊಂಡು ಆಚರಿಸಲು ನಿರ್ಧರಿಸಿದೆ.

ಆ ಹಿನ್ನೆಲೆಯಲ್ಲಿ ವಾಹನ ಸಂಚಾರ ದಟ್ಟಣೆ ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸುವ ಗಣ್ಯರು ಮತ್ತು ಶಾಲಾ ಮಕ್ಕಳಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳಲು ಕಬ್ಬನ್‌ ಪಾರ್ಕ್‌ ರಸ್ತೆಯಲ್ಲಿ ಖಾಸಗಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ ಮತ್ತು ಎಂ ಜಿ ರಸ್ತೆ, ಸೆಂಟ್ರಲ್‌ ಸ್ಟ್ರೀಟ್‌ ರಸ್ತೆಗಳಲ್ಲಿ ಖಾಸಗಿ ವಾಹನ ನಿಲುಗಡೆಗೆ ನಿರ್ಬಂಧ ಹೇರಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ವಾಹನದೊಂದಿಗೆ ಆಗಮಿಸಿದವರು ನಿಗದಿತ ಸ್ಥಳಗಳಲ್ಲಿ ವಾಹನ ನಿಲ್ಲಿಸಲು ತಿಳಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಆಹ್ವಾನಿತರಿಗೆ ಈಗಾಗಲೇ ‘ಎಂಟ್ರಿ ಪಾಸ್' ನೀಡಲಾಗಿದ್ದು, ಪಾಸ್‌ಗಳಲ್ಲಿ ನಮೂದಿಸಿರುವ ಮೈದಾನದ ದ್ವಾರಗಳ ಮೂಲಕ ಪ್ರವೇಶಿಸಲು ತಿಳಿಸಲಾಗಿದೆ.

ಕಾರ್ಯಕ್ರಮವು ಬೆಳಿಗ್ಗೆ 8ರಿಂದ 11ರವರೆಗೂ ನಡೆಯಲಿದ್ದು, ಕಾರ್ಯಕ್ರಮಕ್ಕೆ ಆಗಮಿಸುವ ಮುಖ್ಯ ಅತಿಥಿಗಳಿಗೆ ಮಾತ್ರ ಕಬ್ಬನ್ ಪಾರ್ಕ್‌ ರಸ್ತೆ ಬದಿಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಒದಗಿಸಲಾಗಿದೆ. 

ಆಗಸ್ಟ್ 15ರ ಬೆಳಗ್ಗೆ 8.55ಕ್ಕೆ ಮಾಣಿಕ್‌ ಷಾ ಪರೇಡ್‌ ಮೈದಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದು, 9 ಗಂಟೆಗೆ ಧ್ವಜಾರೋಹಣ ನೆರವೇರಲಿದೆ. 2,400 ಮಕ್ಕಳು ಪರೇಡ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಕೆಎಸ್ಆರ್‍‌ಪಿ, ಸಿಆರ್‍‌ಪಿಎಪ್‌, ಬಿಎಸ್ಎಫ್, ಸಿಎಆರ್, ಮಹಿಳಾ ಮೀಸಲು ಪೊಲೀಸ್, ಸಂಚಾರ ಪೊಲೀಸ್, ಗೃಹ ರಕ್ಷಕ ದಳ ಸೇರಿದಂತೆ 1,200 ಸದಸ್ಯರು ಪರೇಡ್‌ನಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 11.20ಕ್ಕೆ ಧ್ವಜ ಮೆರವಣಿಗೆ ಮುಕ್ತಾಯವಾಗಲಿದೆ. 

ಈ ಸುದ್ದಿ ಓದಿದ್ದೀರಾ?: ಬಿಬಿಎಂಪಿ | ರಾಷ್ಟ್ರಧ್ವಜ ಖರೀದಿಸುವ ಮುನ್ನ ಗಮನವಿರಲಿ: ಭಾಸ್ಕರ್ ರಾವ್ ಎಚ್ಚರಿಕೆ

ಎರಡು ವರ್ಷಗಳ ನಂತರ ಸಾರ್ವಜನಿರಿಗೆ ಕಾರ್ಯಕ್ರಮದ ಆಮಂತ್ರಣ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ 1,700 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಭದ್ರತಾ ಕಾರ್ಯದಲ್ಲಿ ಒಂಬತ್ತು ಡಿಸಿಪಿ, 15 ಎಸಿಪಿ, 44 ಇನ್ಸ್‌ಪೆಕ್ಟ್‌ರ್‍‌ಗಳು, 96 ಪಿಎಸ್ಐ, 14 ಮಹಿಳಾ ಪಿಎಸ್ಐ, 77 ಎಎಸ್ಐ ಹಾಗೂ 800 ಸಿಬ್ಬಂದಿಗಳು, 10 ಕೆಎಸ್ಆರ್‍‌ಪಿ ತುಕಡಿಗಳು ತೊಡಗಿಕೊಳ್ಳಲಿವೆ. ಇದರ ಜೊತೆಗೆ ನೂರು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app