ಫಲಪುಷ್ಪ ಪ್ರದರ್ಶನ| ಕೊನೆಯ ದಿನ ಲಾಲ್‌ಬಾಗ್‌ನಲ್ಲಿ ಕಿಕ್ಕಿರಿದ ಜನಸಮೂಹ

Lalbhag
  • ಜನದಟ್ಟಣೆ ನಿಯಂತ್ರಿಸಲು ಪೊಲೀಸರ ಹರಸಾಹಸ
  • ಲಕ್ಷಕ್ಕೂ ಹೆಚ್ಚು ಜನರಿಂದ ಫಲಪುಷ್ಪ ಪ್ರದರ್ಶನಕ್ಕೆ ಭೇಟಿ

75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಏರ್ಪಡಿಸಿರುವ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನವು ಇಂದು ಕೊನೆಗೊಳ್ಳಲಿದ್ದು, ಹಗಲು-ರಾತ್ರಿ ಲೆಕ್ಕಿಸದೆ ನಾನಾ ಪ್ರದೇಶಗಳಿಂದ ಲಕ್ಷಕ್ಕೂ ಅಧಿಕ ಮಂದಿ ಪ್ರದರ್ಶನ ವೀಕ್ಷಿಸಿದ್ದಾರೆ. ಇನ್ನೂ ಜನ ಫಲ ಪುಷ್ಪ ಪ್ರದರ್ಶನ ನೋಡಲು ಧಾವಿಸುತ್ತಲೇ ಇದ್ದಾರೆ. 

ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಫಲಪುಷ್ಪ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಈ ವರ್ಷ ಕನ್ನಡದ ಮೇರು ನಟ ರಾಜ್‌ ಕುಮಾರ್ ಮತ್ತು ಪುನೀತ್ ರಾಜ್‌ ಕುಮಾರ್‍‌ ಸ್ಮರಣಾರ್ಥವಾಗಿ ಏರ್ಪಡಿಲಾಗಿರುವ ಫಲಪುಷ್ಪ ಪ್ರದರ್ಶನಕ್ಕೆ, ಅಭಿಮಾನಿಗಳು ಮತ್ತು ಸಸ್ಯ ಪ್ರೇಮಿಗಳು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.   

ಈ ಕುರಿತು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಜಗದೀಶ್, ಈ ದಿನ.ಕಾಮ್ ಜೊತೆಗೆ ಮಾತನಾಡಿ, ಪ್ರದರ್ಶನದ ಮೊದಲನೆಯ ದಿನದಿಂದ ಆಗಸ್ಟ್ 13ರವರೆಗೂ 1.54 ಲಕ್ಷ ಜನರು ಲಾಲ್‌ಬಾಗ್‌ಗೆ ಭೇಟಿ ನೀಡಿದ್ದರು. ವಾರಾಂತ್ಯವಾದ ಆಗಸ್ಟ್ 14ರಂದು 1.50 ಲಕ್ಷ ಜನರು ಒಂದೇ ದಿನದಲ್ಲಿ ಪ್ರದರ್ಶನ ನೋಡಲು ಬಂದಿದ್ದು ದಾಖಲೆಯಾಗಿತ್ತು. 

ಫಲಪುಷ್ಪ ಪ್ರದರ್ಶನದ 9 ದಿನಗಳಲ್ಲಿ ಸುಮಾರು 1.51 ಕೋಟಿ ರೂ ಸಂಗ್ರಹವಾಗಿದ್ದು, ಆಗಸ್ಟ್ 14 ಭಾನುವಾರ ಒಂದೇ ದಿನ ಅಂದಾಜು 78 ಲಕ್ಷ ರೂ. ಹಣ ಸಂಗ್ರಹವಾಗಿದೆ ಎಂದು ಜಗದೀಶ್‌ ಹೇಳಿದರು.

ಸೋಮವಾರ (ಆಗಸ್ಟ್‌ 15) ಸರ್ಕಾರಿ ರಜೆಯಾದ ಕಾರಣ ಫಲಪುಷ್ಪ ಪ್ರದರ್ಶನಕ್ಕೆ ಜನಸಾಗರವೇ ಹರಿದುಬಂದಿದೆ. ಇದರಿಂದಾಗಿ, ತೋಟಗಾರಿಕೆ ಇಲಾಖೆ ಮತ್ತು ಪೊಲೀಸ್‌ ಸಿಬ್ಬಂದಿಗೆ ಪ್ರವಾಸಿಗರನ್ನು ನಿಯಂತ್ರಿಸುವುದು ಸಾಹಸದ ಕೆಲಸವಾಗಿದೆ. 

ಈ ಸುದ್ದಿ ಓದಿದ್ದೀರಾ?: ಫಲಪುಷ್ಪ ಪ್ರದರ್ಶನ | ಲಾಲ್‌ಬಾಗ್‌ ಶುಚಿತ್ವ ಕಾಪಾಡಲು ಸಕಲ ವ್ಯವಸ್ಥೆ

ಇನ್ನೊಂದೆಡೆ, ಅಮೃತ ಮಹೋತ್ಸವದ ಅಂಗವಾಗಿ ರಾಜಧಾನಿಯ ರಾಜಕೀಯ ಪಕ್ಷಗಳು ಹಾಗೂ ಶಾಲಾ–ಕಾಲೇಜು ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದ್ದರಿಂದ ಮತ್ತು ಲಾಲ್‌ಬಾಗ್‌ನಲ್ಲಿ ಏರ್ಪಡಿಸಿರುವ ಪ್ರದರ್ಶನಕ್ಕೆ ಹೆಚ್ಚು ಜನ ಬಂದಿದ್ದರಿಂದ ನಗರದಾದ್ಯಂತ ಸಂಚಾರ ದಟ್ಟಣೆ ಉಂಟಾಗಿತ್ತು. 

ಲಾಲ್‌ಬಾಗ್‌ಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾದ ಕಾರಣ, ಉದ್ಯಾನವನದ ನಾಲ್ಕೂ ದ್ವಾರಗಳಲ್ಲಿ ಟಿಕೆಟ್ ಕೌಂಟರ್‍‌ಗಳನ್ನು ಹೆಚ್ಚಿಸಲಾಗಿತ್ತು. ಹೊಸೂರು ರಸ್ತೆ, ಆರ್.ವಿ. ರಸ್ತೆ, ಸಿದ್ದಾಪುರ ರಸ್ತೆ, ಜಯನಗರ ಮಾರ್ಗದ ಕೆಲವು ರಸ್ತೆಗಳಲ್ಲಿ ಭಾರಿ ಸಂಚಾರ ದಟ್ಟಣೆಯಿಂದಾಗಿ ಜನರು ಪರದಾಡಿದರು. ಮಾರಾಟಕ್ಕೆ ಇಟ್ಟಿದ್ದ ಸಸಿಗಳು ಮತ್ತು ಮಾರಾಟ ಮಳಿಗೆಗಳಲ್ಲಿ ವಸ್ತುಗಳನ್ನು ಖರೀದಿಸುವವರ ಸಂಖ್ಯೆ ದುಪ್ಪಾಟ್ಟಾಗಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್