ಬಿಜೆಪಿಯ ಆಡಳಿತ 'ತೃಪ್ತಿಕರ'ವಾಗಿಲ್ಲ ಎಂದ ಬೆಂಗಳೂರಿಗರು; ಸಮೀಕ್ಷೆಯಲ್ಲಿ ಬಹಿರಂಗ

ರಾಜಧಾನಿಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಬೆಂಗಳೂರು ರಾಜಕೀಯ ಕಾರ್ಯಕಾರಿ ಸಮಿತಿಯ ಪಕ್ಷಾತೀತ ನಾಗರಿಕರ ವೇದಿಕೆ ಬಿ. ಪ್ಯಾಕ್ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿ ಸರ್ಕಾರದ ಆಡಳಿತ ತೃಪ್ತಿಕರವಾಗಿಲ್ಲ ಎಂಬ ಅಂಶ ಬಹಿರಂಗವಾಗಿದೆ.
B Pac Survey

ರಾಜಧಾನಿಯ ಅಭಿವೃದ್ಧಿ ಮತ್ತು ಮೂಲ ಸೌಕರ್ಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರದ ಬಗ್ಗೆ ಬೆಂಗಳೂರಿನ ಜನತೆ ಮುಕ್ತ ಅಭಿಪ್ರಾಯ ವ್ಯಕ್ತಪಡಿಸಿದ್ದು, ಶೇ.57ರಷ್ಟು ಜನರು ರಾಜ್ಯ ಸರ್ಕಾರದ ಆಡಳಿತ 'ತೃಪ್ತಿಕರ'ವಾಗಿಲ್ಲ ಎಂದು ತಿಳಿಸಿದ್ದಾರೆ.

ರಾಜಧಾನಿಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಬೆಂಗಳೂರು ರಾಜಕೀಯ ಕಾರ್ಯಕಾರಿ ಸಮಿತಿಯ ಪಕ್ಷಾತೀತ ನಾಗರಿಕರ ವೇದಿಕೆ ಬಿ. ಪ್ಯಾಕ್ ನಡೆಸಿದ ಸಮೀಕ್ಷೆಯಲ್ಲಿ ಸರ್ಕಾರದ ಆಡಳಿತ ತೃಪ್ತಿಕರವಾಗಿಲ್ಲ ಎಂಬ ಅಂಶ ಬಹಿರಂಗವಾಗಿದೆ.

ಸಮೀಕ್ಷೆಯ ಪ್ರಕಾರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ‌ಯ (ಬಿಬಿಎಂಪಿ) 187 ವಾರ್ಡ್‌ಗಳಲ್ಲಿ ರಸ್ತೆಗಳ ನಿರ್ಮಾಣ , ರಸ್ತೆ ಗುಂಡಿಗಳ ನಿರ್ವಹಣೆ, ಕುಡಿಯುವ ನೀರು, ಘನ ತ್ಯಾಜ್ಯ ನಿರ್ವಹಣೆ ಹಾಗೂ ಸಾರ್ವಜನಿಕ ಶೌಚಾಲಯ ವ್ಯವಸ್ಥೆಯಲ್ಲಿ ಬೆಂಗಳೂರಿನ ನಿವಾಸಿಗಳು ಸಮಸ್ಯೆಗಳನ್ನು ಗುರುತಿಸಿದ್ದಾರೆ. ಮುಖ್ಯವಾಗಿ ರಾಜಧಾನಿಯ ಕಳಪೆ ರಸ್ತೆಗಳು ಮತ್ತು ಸಂಚಾರ ದಟ್ಟಣೆ ಬೆಂಗಳೂರಿನ ನಿವಾಸಿಗಳಿಗೆ ದೊಡ್ಡ ತಲೆನೋವಾಗಿದೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ವಹಿಸದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಾಲಿಕೆಯ ವಾರ್ಡ್‌ ಬಗ್ಗೆ 

2015ರಿಂದ 2020ರ ಅವಧಿಯಲ್ಲಿ ಪಾಲಿಕೆ ಸದಸ್ಯರ ಬಗ್ಗೆ ಶೇ.85ರಷ್ಟು ಜನತೆಗೆ ಅರಿವಿದೆ. ಇದರಲ್ಲಿ ಶೇ.35ರಷ್ಟು ಜನಗಳಿಗೆ ತಮ್ಮ ಕಾರ್ಪೋರೇಟರ್ ಮಾಡಿದ ಅಭಿವೃದ್ಧಿ ಕೆಲಸದ ಬಗ್ಗೆ ತೃಪ್ತಿಯಿದೆ. ಶೇ.57ರಷ್ಟು ಜನ ವಾರ್ಡ್‌ ಸಮಸ್ಯೆ ಪೂರ್ವಭಾವಿಯಾಗಿ ಪಾಲಿಕೆ ಮಾಜಿ ಸದಸ್ಯರು ಬಗೆಹರಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿರುವುದು ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. 

ವಾರ್ಡ್‌ ಸಮಿತಿ ಸಭೆ 

ಶೇ.70 ಮಂದಿ ಬಿಬಿಎಂಪಿಯಿಂದ ನಡೆಯುವ ವಾರ್ಡ್ ಸಮಿತಿಗಳು ಪರಿಣಾಮದ ಬಗ್ಗೆ ಮಾತನಾಡಿದ್ದಾರೆ. ಶೇ.47 ನಿವಾಸಿಗಳು ವಾರ್ಡ್ ಸಮಿತಿ ಸಭೆ ನಡೆಸಿದ ಬಗ್ಗೆ ತಮಗೆ ಮಾಹಿತಿಯೇ ಇಲ್ಲ ಎಂದಿದ್ದಾರೆ. ಇನ್ನೂ ಶೇ.30 ನಿವಾಸಿಗಳು ಉತ್ತಮವಾಗಿ ಸಭೆ ನಡೆಯುತ್ತಿವೆ ಎಂದಿದ್ದು, ಶೇ.23 ನಿವಾಸಿಗಳು ಸಭೆಗಳು ನಿಯಮಿತವಾಗಿ ನಡೆಯುತ್ತಿಲ್ಲ ಎಂದಿದ್ದಾರೆ. ಹಾಗೆಯೇ ಶೇ.63 ಮಂದಿ ತಮ್ಮ ವಾರ್ಡ್‌ಗಳಲ್ಲಿ ನಡೆಯುವ ಸಮಿತಿ ಸಭೆಗೆ ಹಾಜರಾಗಿಲ್ಲ ಎಂದು ತಿಳಿಸಿದ್ದಾರೆ.

ಮಹದೇವಪುರ ವಲಯ ವಾರ್ಡ್‌ ಬಗ್ಗೆ ಅಸಮಾಧಾನ

ಇತ್ತೀಚೆಗೆ ಸುರಿದ ಮಹಾಮಳೆಯಿಂದಾಗಿ ಮಹದೇವಪುರ ವಲಯ ಜಲಾವೃತವಾಗಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಯಿತು. ವಾರ್ಡ್‌ ಬಗ್ಗೆ ಜನತೆ ವರ್ಷದ ಆರಂಭದಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಲಯದಲ್ಲಿ ಜನರ ಮೂಲಸೌಕರ್ಯ ಮತ್ತು ಸೇವೆಗಳಿಗೆ ಸಂಬಂಧಿಸಿದಂತೆ ಬಹಳಷ್ಟು ಮಂದಿ ಅಸಮಾಧಾನ ಹೊರ ಹಾಕಿರುವುದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.

ಪಾಲಿಕೆ ಚುನಾವಣೆ ಕುರಿತು 

ಬೆಂಗಳೂರು ನಿವಾಸಿಗಳು ಮುಂಬರುವ ಪಾಲಿಕೆ ಚುನಾವಣೆಯಲ್ಲಿ ಮತದಾನದ ಬಗ್ಗೆ ಪ್ರತಿಕ್ರಿಯಿಸಿದ್ದು, ಶೆ.93ರಷ್ಟು ಜನ ಖಂಡಿತವಾಗಿ ಮತದಾನದಲ್ಲಿ ಭಾಗವಹಿಸುತ್ತೇವೆ ಎಂದು ಹೇಳಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಮತದಾನ ಕಡಿಮೆಯಾಗಲು ಶೇ.40 ಮಂದಿ ಮತದಾರರ ಗುರುತಿನ ಚೀಟಿ ಹೊಂದಿರಲಿಲ್ಲ. ಇನ್ನೂ ಶೇ.40ರಷ್ಟು ಜನ ಚುನಾವಣೆ ಸಮಯದಲ್ಲಿ ನಗರದಲ್ಲಿ ವಾಸಿಸುವವರು ಬೇರೆ ಊರಿಗೆ ಹೋಗಿದ್ದಕ್ಕೆ ಕಡಿಮೆ ಮತದಾನವಾಗಿತ್ತು ಎಂಬುದು ಸಮೀಕ್ಷೆಯಲ್ಲಿ ತಿಳಿದಿದೆ.

2022ರ ಫೆಬ್ರವರಿ-ಮೇ ತಿಂಗಳಲ್ಲಿ ಆನ್‌ಲೈನ್‌ ಮೂಲಕ ಸಮೀಕ್ಷೆ ನಡೆಸಲಾಗಿದ್ದು, ನಾಗರಿಕರಿಗೆ ಪ್ರಶ್ನಾವಳಿಗಳನ್ನು ನೀಡಿ, ಹಿಂದಿನ 198 ವಾರ್ಡ್‌ಗಳ ಪೈಕಿ 186 ವಾರ್ಡ್‌ ಒಳಗೊಂಡು ಎಂಟು ವಲಯಗಳಲ್ಲಿ 8405 ಪ್ರತಿಕ್ರಿಯೆಯಡಿ ಬಿ.ಪ್ಯಾಕ್‌ ಸಮೀಕ್ಷೆ ನಡೆಸಿದೆ.

ಇದೇ ಸಮೀಕ್ಷೆಯಲ್ಲಿ ಸಕಾರಾತ್ಮಕ ಅಂಶಗಳ ಬಗ್ಗೆಯೂ ಜನರು ಅಭಿಪ್ರಾಯ ತಿಳಿಸಿದ್ದು, ಕೆರೆಗಳ ಅಭಿವೃದ್ಧಿ ಮತ್ತು ಅವುಗಳ ಪುನರುಜ್ಜೀವನ ಕಾರ್ಯಕ್ಕೆ ನಾಗರಿಕರು ಶಹಭಾಸ್‌ ಗಿರಿ ನೀಡಿದ್ದಾರೆ. ಹಾಗೆಯೇ ರಾಜರಾಜೇಶ್ವರಿ ನಗರ ವಲಯ ವಾರ್ಡ್‌ಗಳಲ್ಲಿ ಬಹಳಷ್ಟು ಜನ ಪಾಲಿಕೆ ಆಡಳಿತ ವ್ಯವಸ್ಥೆ ಮೆಚ್ಚಿಕೊಂಡಿದ್ದಾರೆ.

'ಬಿ ಪ್ಯಾಕ್' ಸಂಸ್ಥೆಯ ಆಡಳಿತಾಧಿಕಾರಿ ರೇವತಿ ಅಶೋಕ್ ಅವರು ಬುಧವಾರ ಸುದ್ದಿಗೋಷ್ಠಿ ನಡೆಸಿ ಸಮೀಕ್ಷಾ ವರದಿ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು, "ಕಳೆದ ಕೆಲ ವರ್ಷಗಳಿಂದ ಬೆಂಗಳೂರು ನಗರದಲ್ಲಿ ಮಳೆ ಪ್ರವಾಹದಿಂದ ರಸ್ತೆ ಹಾಳಾಗುವುದು, ಸಂಚಾರ ದಟ್ಟಣೆ, ಸಾರ್ವಜನಿಕ ಆಸ್ತಿ ನಾಶ ಹಾಗೂ ಜನತೆಯ ಆರೋಗ್ಯಕ್ಕೆ ತೊಂದರೆಯಾಗುತ್ತಿದೆ. ನಗರದ ಅಭಿವೃದ್ಧಿಗೆ ಪೂರಕವಾಗಿ ಸಾವಿರಾರು ನಾಗರಿಕರನ್ನು ಸಮೀಕ್ಷೆಗೊಳಪಡಿಸಿ ಅಭಿಪ್ರಾಯ, ಆಶಯ ಹಾಗೂ ಅಭಿವೃದ್ಧಿಯ ದೃಷ್ಟಿಕೋನಗಳನ್ನು ಸಂಗ್ರಹಿಸಿದ್ದು, ಸರ್ಕಾರ ಸಮೀಕ್ಷೆಯನ್ನು ಬಳಸಿಕೊಳ್ಳಬಹುದು" ಎಂದಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್