
- ರಾಜ್ಯ ಸರ್ಕಾರದಿಂದ ಜಿವಿಕೆ ಸಂಸ್ಥೆಗೆ ಹಣ ಪಾವತಿಯಾಗಿದೆ
- ಕಳೆದ 2 ತಿಂಗಳಿಂದ ಸಿಬ್ಬಂದಿಗೆ ವೇತನ ನೀಡದ ಜಿವಿಕೆ ಸಂಸ್ಥೆ
ಆ್ಯಂಬುಲೆನ್ಸ್ (108) ಸಿಬ್ಬಂದಿಗಳಿಗೆ ಕಳೆದ ಎರಡು ತಿಂಗಳಿನಿಂದ ವೇತನ ನೀಡಿಲ್ಲ. ಕೂಡಲೇ ವೇತನ ಪಾವತಿಸಬೇಕು ಎಂದು ಒತ್ತಾಯಿಸಿ ಬೆಂಗಳೂರಿನ ಆರೋಗ್ಯಸೌಧದ ಮುಂದೆ ಆ್ಯಂಬುಲೆನ್ಸ್ ಸಿಬ್ಬಂದಿಗಳು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.
ಆ್ಯಂಬುಲೆನ್ಸ್ ನಿರ್ವಹಣೆಯ ಗುತ್ತಿಗೆ ಪಡೆದಿರುವ ಜಿವಿಕೆ ಸಂಸ್ಥೆಯು ಎರಡು ತಿಂಗಳಿಂದ ಸಿಬ್ಬಂದಿಗಳಿಗೆ ವೇತನ ನೀಡಿಲ್ಲ. ಸಂಬಳವಿಲ್ಲದೆ ಸಿಬ್ಬಂದಿಗಳು ಕಂಗಾಲಾಗಿದ್ದಾರೆ. 15 ದಿನಗಳ ಹಿಂದೆ ಸಭೆ ನಡೆಸಿದ್ದ ಆರೋಗ್ಯ ಇಲಾಖೆ ಆಯುಕ್ತರು, ಮೂರು ತಿಂಗಳ ವೇತನವನ್ನು ನೀಡುವಂತೆ ಜಿವಿಕೆ ಸಂಸ್ಥೆಗೆ ಸೂಚಿಸಿದ್ದರು. ಅದರೂ, ವೇತನ ದೊರೆತಿಲ್ಲ ಎಂದು ಆ್ಯಂಬುಲೆನ್ಸ್ ಸಿಬ್ಬಂದಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಆಯುಕ್ತರು ಸೂಚನೆ ನೀಡಿದ ಬಳಿಕ ಒಂದು ತಿಂಗಳ ವೇತನವನ್ನಷ್ಟೇ ಸಂಸ್ಥೆ ನೀಡಿದೆ. ಇನ್ನೂ ಎರಡು ತಿಂಗಳ ಸಂಬಳವನ್ನು ಬಾಕಿ ಉಳಿಸಿಕೊಂಡಿದೆ. ಇಲಾಖೆ ಸೂಚಿಸಿದ ಬಳಿಕವೂ ಜಿವಿಕೆ ಸಂಸ್ಥೆ ಆ್ಯಂಬುಲೆನ್ಸ್ ಸಿಬ್ಬಂದಿಗೆ ಪೂರ್ಣ ವೇತನ ನೀಡಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಬಾಕಿ ಉಳಿದಿರುವ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಈಗಿರುವ ವೇತನವು ಸಾಕಾಗುತ್ತಿಲ್ಲ. ಸಿಬ್ಬಂದಿಗೆ ವೇತನ ಹೆಚ್ಚಳ ಮಾಡಬೇಕು" ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಲ್ಲೇಶ್ವರಂ ಗುಂಡಿಮಯಂ; ಸಚಿವರ ಕ್ಷೇತ್ರದಲ್ಲಿ ರಸ್ತೆಗುಂಡಿಗಳದ್ದೇ ಸಾಮ್ರಾಜ್ಯ
ಈ ಹಿಂದೆ ಸಭೆ ನಡೆದಾಗ, "ಜಿವಿಕೆ ಸಂಸ್ಥೆಗೆ ವೇತನ ಪಾವತಿ ಮಾಡಲು ಮೂರು ದಿನಗಳ ಗಡುವು ನೀಡಲಾಗಿದೆ. ಈ ಮೂರು ದಿನದಲ್ಲಿ ವೇತನ ನೀಡದಿದ್ದರೆ ಕಂಪನಿಯನ್ನು ಬ್ಲಾಕ್ ಲಿಸ್ಟ್ಗೆ ಸೇರಿಸಲಾಗುವುದು" ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ಎಚ್ಚರಿಕೆ ನೀಡಿದ್ದರು. ನ.14ರೊಳಗೆ ಸಂಬಳ ನೀಡುವುದಾಗಿ ಜೆವಿಕೆ ಸಂಸ್ಥೆ ತಿಳಿಸಿತ್ತು.
ಆದರೆ, ನೀಡಿದ ದಿನಾಂಕ ಮುಗಿದಿದ್ದರೂ, ಇನ್ನೂ ಸಂಬಳ ನೀಡಿಲ್ಲವೆಂದು ಆರೋಪಿಸಿರುವ ಸಿಬ್ಬಂದಿಗಳು ಪ್ರತಿಭಟನೆಗೆ ಇಳಿಸಿದ್ದಾರೆ.
ರಾಜ್ಯ ಸರ್ಕಾರದಿಂದ ಜಿವಿಕೆ ಸಂಸ್ಥೆಗೆ ಈಗಾಗಲೇ, ಹಣ ಪಾವತಿ ಆಗಿದೆ. ಸಿಬ್ಬಂದಿಗೆ ಸಂಸ್ಥೆ ಸಂಬಳ ಪಾವತಿಸಬೇಕು ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಈ ಹಿಂದೆಯೇ ತಿಳಿಸಿದ್ದರು.