ಬೆಂಗಳೂರು| 2025ರ ಜೂನ್ ವೇಳೆಗೆ 175 ಕಿ.ಮೀ. ಉದ್ದದ ಮೆಟ್ರೋ ಮಾರ್ಗ: ಅಂಜುಂ ಪರ್ವೇಜ್

  • 'ಸಂಚಾರ ವ್ಯವಸ್ಥೆಯ ಭವಿಷ್ಯ' ಕುರಿತ ವಿಚಾರಗೋಷ್ಠಿ
  • ಶೇ.66ರಷ್ಟು ನಗರೀಕರಣ ಬಾಕಿ ಇದೆ: ಅಮಿತ್ ಭಟ್

ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ನಗರದಲ್ಲಿ ಸಂಚಾರ ವ್ಯವಸ್ಥೆಯನ್ನು ಸುಗಮ ಮತ್ತು ವೇಗಗೊಳಿಸಿದ್ದು, 2025ರ ಜೂನ್ ವೇಳೆಗೆ 175 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ಸಿದ್ಧವಾಗಲಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ತಿಳಿಸಿದರು.

ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬೆಂಗಳೂರು ತಂತ್ರಜ್ಞಾನ ಸಮಾವೇಶದಲ್ಲಿ 'ಸಂಚಾರ ವ್ಯವಸ್ಥೆಯ ಭವಿಷ್ಯ' ಕುರಿತ ವಿಚಾರಗೋಷ್ಠಿಯಲ್ಲಿ ಅಂಜುಂ ಪರ್ವೇಜ್ ಮಾತನಾಡಿದರು.

“ಬೆಂಗಳೂರಲ್ಲಿ 'ನಮ್ಮ ಮೆಟ್ರೋ' ಎರಡನೇ ಮತ್ತು ಮೂರನೇ ಹಂತದ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಕಾಮಗಾರಿಗಳು ಸಂಪೂರ್ಣವಾದ ಬಳಿಕ, ನಗರದಲ್ಲಿ 2041ರ ವೇಳೆಗೆ ಒಟ್ಟು 314 ಕಿ.ಮೀ ಉದ್ದದ ಮೆಟ್ರೋ ಮಾರ್ಗ ನಿರ್ಮಾಣವಾಗಲಿದೆ. ಆದರೆ, ನಗರದಲ್ಲಿ ಸಾರ್ವಜನಿಕರನ್ನು ತಮ್ಮ ಸ್ವಂತ ವಾಹನ ಬಿಟ್ಟು ಸಾರ್ವಜನಿಕ ಸಾರಿಗೆಯ ಕಡೆಗೆ ಕರೆತರುವುದು ಸವಾಲಿನ ಕೆಲಸವಾಗಿದೆ" ಎಂದರು.

"ಮೆಟ್ರೋ ಮೂಲಕ ಜನರು ತಮ್ಮ ಕಾರ್ಯ ಸ್ಥಳಗಳನ್ನು ತಲುಪುವಂತೆ ಮಾಡಲು ನವೋದ್ಯಮಗಳೊಂದಿಗೆ ಬಿಎಂಆರ್‌ಸಿಎಲ್ ಒಡಂಬಡಿಕೆ ಮಾಡಿಕೊಳ್ಳುತ್ತಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಜತೆಗೆ ಮೆಟ್ರೋ ನಿಲ್ದಾಣಗಳಲ್ಲೇ ಬಸ್ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವಂತೆ ಮಾತುಕತೆ ನಡೆಯುತ್ತಿದೆ. ಆದರೆ, ಈ ಬಗ್ಗೆ ಇನ್ನೂ ಯಾವುದೇ ತಿರ್ಮಾನ ತೆಗೆದುಕೊಂಡಿಲ್ಲ. ಸಾರ್ವಜನಿಕರಿಗೆ ಮೆಟ್ರೋ ನಿಲ್ದಾಣಗಳ ಒಳಗೆ ಮತ್ತು ಹೊರಗೆ ಅಗತ್ಯ ಸೌಲಭ್ಯ ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ" ಎಂದು ವಿವರಿಸಿದರು.

ಅಂತಾರಾಷ್ಟ್ರೀಯ ಸಾರಿಗೆ ಕೌನ್ಸಿಲ್‌ನ ಸದಸ್ಯ ಅಮಿತ್ ಭಟ್ ಮಾತನಾಡಿ, "ಜಗತ್ತಿನಾದ್ಯಂತ ನಗರೀಕರಣವಾಗುತ್ತಿದೆ. ಪಾಶ್ಚಾತ್ಯ ಜಗತ್ತಿನಲ್ಲಿ ಶೇ. 85ರಷ್ಟು ನಗರೀಕರಣವಾದರೆ, ಭಾರತದಲ್ಲಿ ಶೇ. 33ರಷ್ಟಾಗಿದೆ. ಇನ್ನೂ ಈ ಪ್ರಮಾಣ ಶೇ.66ರಷ್ಟು ತಲುಪಬೇಕಿದೆ. ದೇಶದಲ್ಲಿ ಇನ್ನೂ ಮೂಲಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಬೇಕಾದ ಅವಶ್ಯಕತೆ ಇದೆ. ಹೊಸದಾಗಿ ಹಲವು ನಗರಗಳು ತಲೆ ಎತ್ತಲಿವೆ" ಎಂದರು.

ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ; ಚಿಲುಮೆ ಸಂಸ್ಥೆಗೆ ನೀಡಿದ್ದ ಅನುಮತಿ ರದ್ದು

"ಜನರಿಗೆ ಸುಗಮ ಮತ್ತು ಅತ್ಯಾಧುನಿಕ ಸಾರಿಗೆ ಸೌಲಭ್ಯ ನೀಡುವಾಗ ವಾಯುಮಾಲಿನ್ಯವಾಗದಂತೆ ನೋಡಿಕೊಳ್ಳಬೇಕು. ಎಲ್ಲರನ್ನೂ ಒಳಗೊಂಡು ಯೋಜನೆ ರೂಪಿಸುವುದು ಹಾಗೂ ಯಾವುದೇ ಅಪಘಾತಗಳಿಗೆ ಆಸ್ಪದವಿಲ್ಲದಂತೆ ಖಾತ್ರಿಪಡಿಸುವುದು ದೊಡ್ಡ ಸವಾಲುಗಳಾಗಿವೆ" ಎಂದು ತಿಳಿಸಿದರು.

ಬಾಶ್ ಕಂಪನಿಯ ಉಪಾಧ್ಯಕ್ಷ ವಾದಿರಾಜ್ ಕೃಷ್ಣಮೂರ್ತಿ, ಚಲೋ ಕಂಪನಿಯ ಸಹ ಸಂಸ್ಥಾಪಕ ವಿನಾಯಕ್ ಭಾವ್ನಾನಿ ಮತ್ತಿತರರು ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app