
ರಾಜ್ಯದಲ್ಲಿ ಸರ್ಕಾರದಿಂದ ವಿಶೇಷಚೇತನರಿಗೆ 5.86 ಲಕ್ಷ ವಿಶಿಷ್ಟ ಗುರುತಿನ ಚೀಟಿ ವಿತರಣೆ ಮಾಡಲಾಗಿದೆ. ಎಲ್ಲ ವಿಶೇಷಚೇತನರಿಗೂ ಯುನಿವರ್ಸಲ್ ಗುರುತು ಚೀಟಿ (ಯುಡಿಐಡಿ) ನೀಡಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಯುಡಿಐಡಿ ಕಾರ್ಡ್ ವಿತರಣೆ ಪ್ರಕ್ರಿಯೆಯ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ”ವಿಕಲಚೇತನರ ಸಬಲೀಕರಣ ಇಲಾಖೆಯ ಸಹಯೋಗದೊಂದಿಗೆ ವಿಶೇಷಚೇತನರಿಗೆ ಯುಡಿಐಡಿ ನೀಡಲಾಗುತ್ತಿದೆ. ಗುರುತು ಚೀಟಿ ನೀಡುವುದರಲ್ಲಿ ಕರ್ನಾಟಕ ಉತ್ತಮ ಸಾಧನೆ ಮಾಡಿದೆ” ಎಂದರು.
“ರಾಮನಗರ ಜಿಲ್ಲೆಯಲ್ಲಿ ಅಧಿಕ ಯುಡಿಐಡಿ ಕಾರ್ಡ್ಗಳು ವಿತರಣೆಯಾಗಿದ್ದು, ಮೊದಲ ಸ್ಥಾನದಲ್ಲಿದೆ. ಚಿಕ್ಕಮಗಳೂರು ಎರಡನೇ ಸ್ಥಾನದಲ್ಲಿದ್ದು, ಬಾಗಲಕೋಟೆ, ಹಾವೇರಿ, ಉತ್ತರ ಕನ್ನಡ, ಬೆಳಗಾವಿ ಹಾಗೂ ಮಂಡ್ಯ ಜಿಲ್ಲೆಗಳು ನಂತರದ ಸ್ಥಾನಗಳಲ್ಲಿವೆ" ಎಂದು ತಿಳಿಸಿದರು.
“ವಿಶೇಷಚೇತನರು ಕಡ್ಡಾಯವಾಗಿ ಯುಡಿಐಡಿ ಪೋರ್ಟಲ್ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಒಮ್ಮೆ ಲಾಗಿನ್ ಆದ ನಂತರ ಯುಡಿಐಡಿ ಕಾರ್ಡ್ ಪಡೆಯುವುದು ಸುಲಭ. ಇದರ ಮೂಲಕ ಸರ್ಕಾರದಿಂದ ಹಲವಾರು ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಲಿದೆ. ಕಟ್ಟ ಕಡೆಯ ವಿಶೇಷಚೇತನರಿಗೂ ಯುಡಿಐಡಿ ಕಾರ್ಡ್ಗಳನ್ನು ವಿತರಿಸುವುದು ಸರ್ಕಾರದ ಗುರಿಯಾಗಿದೆ" ಎಂದರು.
"ಅಂಗವೈಕಲ್ಯದಲ್ಲಿ ಈ ಹಿಂದೆ 7 ಬಗೆಯ ನ್ಯೂನತೆಗಳನ್ನು ಮಾತ್ರ ಪರಿಗಣಿಸಲಾಗುತ್ತಿತ್ತು. ಆದರೆ, 2016ರ ಆರ್ಪಿಡಬ್ಲ್ಯೂಡಿ ಕಾಯ್ದೆಗೆ ತಿದ್ದುಪಡಿ ತಂದ ನಂತರ 21 ರೀತಿಯ ನ್ಯೂನತೆಗಳನ್ನು ಗುರುತಿಸಲಾಗಿದೆ. ಶೇ.40 ರಷ್ಟು ದೈಹಿಕ ನ್ಯೂನತೆ ಹೊಂದಿರುವವರನ್ನು ವಿಶೇಷಚೇತನರು ಎಂದು ಗುರುತಿಸಲಾಗುತ್ತಿದೆ. 2011 ರ ಜನಗಣತಿ ಪ್ರಕಾರ, ದೇಶದಲ್ಲಿ ಶೇ.2.21 ರಷ್ಟು ಮಂದಿ ಇಂತಹ ಸಮಸ್ಯೆಗಳನ್ನು ಹೊಂದಿದ್ದಾರೆ. ಇವರಿಗೆ ಸೌಲಭ್ಯಗಳನ್ನು ದೊರಕಿಸಿಕೊಡಲು ವಿಶೇಷ ಒತ್ತು ನೀಡಲಾಗಿದೆ" ಎಂದು ತಿಳಿಸಿದರು.