
- ರೈತರ ಪ್ರತಿಭಟನೆ, ರಸ್ತೆ ಗುಂಡಿಗೆ ಯೋಧ ಬಲಿ ಸೇರಿ ಹಲವು ಸಮಸ್ಯೆಗಳ ಆಗರ
- ʼಅಧಿಕಾರಿ- ಜನಪ್ರತಿನಿಧಿಗಳ ನಡುವೆ ಎದ್ದು ತೋರುತ್ತಿದೆ ಸಮನ್ವಯದ ಕೊರತೆʼ
ಮಂಡ್ಯದಲ್ಲಿ ಜಿಲ್ಲಾ ಮಟ್ಟದ ಕರ್ನಾಟಕ ಪ್ರಗತಿ ಪರಿಶೀಲನಾ ಸಭೆ(ಕೆಡಿಪಿ ಸಭೆ) ನಡೆದು ಆರು ತಿಂಗಳಾಗಿದ್ದು, ಕೂಡಲೇ ಸಭೆ ಕರೆಯಬೇಕೆಂದು ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ ಮತ್ತು ಮಧು ಜಿ ಮಾದೇಗೌಡ ಅವರು ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಅವರಿಗೆ ಮನವಿ ಮಾಡಿದ್ದಾರೆ.
ವಿಧಾನಸೌಧದಲ್ಲಿ ಬುಧವಾರ ಶಾಸಕರಿಬ್ಬರು ಸಚಿವರನ್ನು ಭೇಟಿ ಮಾಡಿದ್ದು, "ಜಿಲ್ಲೆಯಲ್ಲಿ ರೈತರು ಪ್ರತಿಭಟನೆ ಕುಳಿತ್ತಿದ್ದಾರೆ. ರಸ್ತೆ ಗುಂಡಿಗೆ ಯೋಧನ ಜೀವ ಹೋಗಿದೆ. ಜಿಲ್ಲಾಡಳಿತದ ಕಾರ್ಯವೈಖರಿಗೆ ವೇಗ ನೀಡಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ಗಮನಹರಿಸಬೇಕಿದೆ. ಹಾಗಾಗಿ ನಿಮ್ಮ ನೇತೃತ್ವದಲ್ಲಿ ತುರ್ತಾಗಿ ಜಿಲ್ಲಾ ಮಟ್ಟದ ಸಭೆ ಕರೆಯಿರಿ" ಎಂದು ಹೇಳಿದ್ದಾರೆ.
ಕಳೆದ ಜೂನ್ 29ರಂದು ಕೆಡಿಪಿ ಸಭೆ ನಡೆಸಿರುವುದು ಬಿಟ್ಟರೆ ಸತತ ಆರು ತಿಂಗಳ ಕಾಲ ಜಿಲ್ಲಾಮಟ್ಟದಲ್ಲಿ ಸಭೆ ನಡೆದಿಲ್ಲ ಎಂಬುದು ಗಮನಾರ್ಹ ಮತ್ತು ಗಂಭೀರ ವಿಚಾರವಾಗಿದೆ.
ಶಾಸಕರ ಮನವಿಯಲ್ಲೇನಿದೆ?
ಕಳೆದ ಹಲವು ತಿಂಗಳಿನಿಂದ ಸುರಿದ ಮಳೆಗೆ ರೈತರ ಬೆಳೆ ಹಾನಿಯಾಗಿದೆ, ಜನ-ಜಾನುವಾರು ಸಂಕಷ್ಟಕ್ಕೆ ಒಳಗಾಗಿದ್ದು, ಇಂದಿಗೂ ಹಲವು ಸಮಸ್ಯೆಗಳು ಎದುರಿಸಲಾಗುತ್ತಿದೆ. ಹಾಳಾದ ರಸ್ತೆಯಿಂದ ಹೆಮ್ಮೆಯ ಯೋಧ ಅಪಘಾತಕ್ಕೀಡಾಗಿ ಮರಣ ಹೊಂದಿದ್ದಾರೆ. ಹಾಗಾಗಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ರಸ್ತೆ ದುರಸ್ತಿ ಮತ್ತು ಗುಂಡಿ ಮುಚ್ಚುವ ಕಾರ್ಯ ತುರ್ತಾಗಿ ಆಗಬೇಕಿದೆ.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡಲು ಆಗ್ರಹ; ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ, ಸಿಎಂ ಅಣಕು ಶವಯಾತ್ರೆ
ಜಿಲ್ಲೆಯ ರೈತರ ಪ್ರಮುಖ ವಾಣಿಜ್ಯ ಬೆಳೆಯಾದ ಕಬ್ಬಿಗೆ ಪ್ರೋತ್ಸಾಹ ಧನ ಮತ್ತು ನ್ಯಾಯೋಚಿತ ಹಾಗೂ ಲಾಭದಾಯಕ ಬೆಲೆ ನಿಗದಿಗೆ ಒತ್ತಾಯಿಸಿ ರೈತರು ಮತ್ತು ವಿವಿಧ ಸಂಘಟನೆಗಳು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಭತ್ತದ ಬೆಳೆ ಕೋಯ್ಲಿಗೆ ಬಂದಿದ್ದು, ಬೆಂಬಲ ಬೆಲೆ ಯೋಜನೆಯಡಿ ಟಾಸ್ಕ್ಪೋರ್ಸ್ ಸಮಿತಿ ಸಭೆ ನಡೆಸಿ ಜಿಲ್ಲಾದ್ಯಂತ ಕೂಡಲೇ ಖರೀದಿ ಕೇಂದ್ರಗಳನ್ನು ತೆರೆಯಬೇಕಿದೆ.
ಈ ಎಲ್ಲ ವಿಚಾರಗಳ ಕುರಿತು ಚರ್ಚಿಸಲು ಸಭೆ ನಡೆದಿಲ್ಲ, ಅಧಿಕಾರಿ ಮತ್ತು ಜನಪ್ರತಿನಿಧಿಗಳ ನಡುವೆ ಸಮನ್ವಯತೆಯ ಕೊರತೆಯುಂಟಾಗಿ ಜಿಲ್ಲೆಯ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ. ಹಾಗಾಗಿ ಕೂಡಲೇ ಕೆಡಿಪಿ ಸಭೆ ಕರೆದು ಅಭಿವೃದ್ಧಿ ಕಾರ್ಯಗಳು ಮತ್ತು ಜನರ ಸಮಸ್ಯೆಗಳ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಬೇಕು ಎಂದು ಸಚಿವರಿಗೆ ಮನವಿ ಮಾಡಲಾಗಿದೆ.