ಬೆಂಗಳೂರು ಸಾರಿಗೆ| ಆಗಸ್ಟ್‌ 15ರಿಂದ 75 ನೂತನ ವಿದ್ಯುತ್‌ಚಾಲಿತ ಬಸ್‌ ಸೇವೆ ಆರಂಭ

E-Bus
  • 12 ಮೀಟರ್ ಉದ್ದ, 41 ಸೀಟು ಹೊಂದಿದ ಇ-ಬಸ್
  • ಪ್ರಯಾಣಿಸಿದಷ್ಟು ದೂರಕ್ಕೆ ಮಾತ್ರ ಹಣ ನಿಗದಿ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಆಗಸ್ಟ್ 15ರಿಂದ 75 ಹೊಸ ವಿದ್ಯುತ್ ಚಾಲಿತ ಬಸ್‌ಗಳನ್ನು ಸಾರ್ವಜನಿಕ ಸೇವೆಗಾಗಿ ರಸ್ತೆಗಿಳಿಸಲು ನಿರ್ಧರಿಸಿದೆ.

ಸ್ವಾತಂತ್ಯ್ರದ 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ನೂತನ ಬಸ್ ಸೇವೆಗೆ ಚಾಲನೆ ನೀಡಬೇಕಿತ್ತು. ಆದರೆ ಆಗಸ್ಟ್ 6ರಂದು ಅವರಿಗೆ ಕೋವಿಡ್ ಸೋಂಕು ತಗುಲಿರುವುದರಿಂದ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಸಾರಿಗೆ ಸಂಸ್ತೆಯು ತಿಳಿಸಿದೆ.

ಇ-ಬಸ್ ಗಳು ಮೊದಲ ಹಂತದಲ್ಲಿ ಯಲಹಂಕ ಡಿಪೋದಿಂದ ಆರಂಭಿಸಲು ಯೋಜಿಸಲಾಗಿದ್ದು, 290ಇ ಸಂಖ್ಯೆಯ ಬಸ್‌ ಶಿವಾಜಿನಗರ ಮತ್ತು ಯಲಹಂಕ ತೆರಳುತ್ತವೆ. 401 ಕೆ ಯಲಹಂಕ- ಕೆಂಗೇರಿ, 402ಬಿ, 402ಡಿ ಕೆಂಪೇಗೌಡ ಬಸ್ ನಿಲ್ದಾಣ-ಯಲಹಂಕ ಸ್ಯಾಟಲೈಟ್ ಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತವೆ ಎಂದು ತಿಳಿಸಿದ್ದಾರೆ.

"ಎಲೆಕ್ಟ್ರಿಕ್ ಬಸ್ 12 ಮೀಟರ್ ಉದ್ದವಿದ್ದು, 41 ಸೀಟುಗಳನ್ನು ಹೊಂದಿರಲಿವೆ. ಸಂಪೂರ್ಣ ಹವಾ ನಿಯಂತ್ರಿತವಾಗಿದೆ. ಒಮ್ಮೆ ಚಾರ್ಜ್ ಮಾಡಿದ ಬಳಿಕ ಬಸ್‌ಗಳು 250ರಿಂದ 300ಕಿ.ಮೀ ತನಕ ಸಂಚಾರ ಮಾಡಬಹುದು. ಇ-ಬಸ್ ಸಂಚಾರದಿಂದ ಬಿಎಂಟಿಸಿಗೆ ಆರ್ಥಿಕ ಹೊರೆ ಕಡಿಮೆಯಾಗಲಿದೆ. ಸಗಟು ಡೀಸೆಲ್ ದರ ಲೀಟರ್‌ಗೆ 125.4 ರೂ. ಆಗಿದ್ದು, ಸಂಸ್ಥೆಗೆ ಆರ್ಥಿಕವಾಗಿ ಭಾರೀ ಹೊರೆಯಾಗುತ್ತಿದೆ" ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದರು.

ಈ ಸುದ್ದಿ ಓದಿದ್ದೀರಾ?: ಒಂದು ನಿಮಿಷದ ಓದು | ಸೋಮವಾರ ಮುಂಜಾನೆಯೇ ಶುರುವಾದ ಜೋರು ಮಳೆ

"ಕೆಬಿಎಸ್‌, ಕೆಂಗೇರಿ, ಯಶವಂತಪುರ ಮತ್ತು ಸೆಂಟ್ರಲ್ ಸಿಲ್ಕ್‌ ಬೋರ್ಡ್‌ ಡಿಪೋಗಳಲ್ಲಿ 300 ಇ-ಬಸ್‌ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ ಎಂದರು. ಪ್ರಸ್ತತ ಬಿಎಂಟಿಸಿಯು 90 ಇ-ಬಸ್‌ ಗಳನ್ನು ಹೊಂದಿದೆ. ಹಿರಿಯ ನಾಗರಿಕರಿಗಾಗಿ ಮತ್ತು ವಿಕಲಚೇತನರಿಗಾಗಿಯೇ ಪ್ರತ್ಯೇಕ 'ಲೋ-ಫ್ಲೋರ್ ಇ-ಬಸ್‌ ಕಲ್ಪಿಸುವಂತೆ ಪ್ರಯಾಣಿಕರ ಒತ್ತಾಯಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಈ 12 ಮೀಟರ್ ಉದ್ದದ 'ನಾನ್-ಎಸಿ ಸ್ವಿಚ್ ಮೊಬಿಲಿಟಿ ಇ-ಬಸ್‌'ಗಳು 900 ಎಂಎಂ ನೆಲದ ಎತ್ತರ (ಗ್ರೌಂಡ್ ಕ್ಲಿಯರೆನ್ಸ್) ಹೊಂದಿವೆ. ಅವುಗಳಲ್ಲಿ ಪ್ರತಿಯೊಂದೂ ವೀಲ್-ಚೇರ್ ಲಿಫ್ಟಿಂಗ್ ಸೌಲಭ್ಯವನ್ನು ಹೊಂದಿರುತ್ತದೆ” ಎಂದು ಅಧಿಕಾರಿಯೊಬ್ಬರು ಹೇಳಿದರು.

"ಇ-ಬಸ್‌ಗಳು ಪ್ರತಿ ದಿನ ಕನಿಷ್ಟ 225 ಕಿ.ಮೀ ಪ್ರಯಾಣಿಸಿದರೆ ಮಾತ್ರ ಪ್ರತಿ 48 ರೂ. ಗಳಂತೆ ನೀಡಲಾಗುವುದು. ನಿಗದಿತ ಪ್ರಮಾಣಕ್ಕಿಂತ ಕಡಿಮೆ ದೂರ ಕ್ರಮಿಸಿದಲ್ಲಿ ಕ್ರಮಿಸಿದ ದೂರಕ್ಕೆ ತಕ್ಕಂತೆ ಮಾತ್ರ ಹಣ ಸಂದಾಯ ಮಾಡುವಂತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅಷ್ಟೇ ಅಲ್ಲದೆ ನಿಯಮದಂತೆ ಬಸ್‌ಗಳು ಕಾರ್ಯಚರಣೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ" ಎಂದು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್