
- ನ.17ರಿಂದಲೇ ಬಸವನಗುಡಿ ಮುಖ್ಯರಸ್ತೆಯಲ್ಲಿ ಪರಿಷೆಯ ಸಂಭ್ರಮ
- ನ.20ರಂದು ತುಲಾಭಾರ ನಡೆಸುವ ಮೂಲಕ ಪರಿಷೆಗೆ ಚಾಲನೆ
ಬೆಂಗಳೂರಿನ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಕಳೆದ ಒಂದು ವಾರದಿಂದ ಸುಮಾರು 8 ಲಕ್ಷ ಮಂದಿ ಭೇಟಿ ನೀಡಿದ್ದು, ₹40 ಕೋಟಿಗೂ ಹೆಚ್ಚು ವ್ಯಾಪಾರ ವಹಿವಾಟು ನಡೆದಿದೆ ಎಂದು ಅಂದಾಜಿಸಲಾಗಿದೆ.
ಕೋವಿಡ್ ಕಾರಣಕ್ಕೆ ಕಳೆದು ಎರಡು ವರ್ಷಗಳಿಂದ ಸ್ಥಗಿತಗೊಳಿಸಲಾಗಿದ್ದ ಕಡಲೆಕಾಯಿ ಪರಿಷೆಯ ಅಬ್ಬರವು, ಈ ಬಾರಿ ಜೋರಾಗಿಯೇ ನಡೆದಿದೆ. ಮಾಸ್ಕ್, ಸಾಮಾಜಿಕ ಅಂತರ, ಸಾಂಕ್ರಾಮಿಕ ರೋಗದ ಭಯ ಹಾಗೂ ಇತರೆ ಯಾವುದೇ ನಿರ್ಬಂಧಗಳಿಲ್ಲದೆ ಮಕ್ಕಳು, ಹಿರಿಯರು ಸೇರಿದಂತೆ ಎಲ್ಲ ವಯೋಮಾನದವರು ಪರಿಷೆಯಲ್ಲಿ ಸಂಭ್ರಮದಿಂದ ಭಾಗವಹಿಸಿದ್ದರು.
ಈ ಬಸವನಗುಡಿ ಕಡಲೆಕಾಯಿ ಪರಿಷೆಯು ಪ್ರತಿ ವರ್ಷದ ಕಾರ್ತಿಕ ಮಾಸದ ಕೊನೆಯ ಸೋಮವಾರ ನಡೆಯುತ್ತದೆ. ನ.20ರ ಭಾನುವಾರ ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತುಲಾಭಾರ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಗುರುವಾರ ಅಧಿಕೃತವಾಗಿ ಪರಿಷೆಗೆ ತೆರೆಬಿದ್ದಿದೆ. ಹೆಚ್ಚು ಜನಸಂದಣಿಯಿಂದ ಕೂಡಿದ್ದ ಶ್ರೀ ದೊಡ್ಡಗಣಪತಿ ದೇವಸ್ಥಾನದ ರಸ್ತೆ ಈಗ ಬೀಕೋ ಎನ್ನುತ್ತಿದೆ.
ಅಧಿಕೃತವಾಗಿ ಪರಿಷೆಗೆ ಭಾನುವಾರ ಸಂಜೆ ಚಾಲನೆ ನೀಡಿದ್ದರು. ನ.17ರಿಂದಲೇ ಬಸವನಗುಡಿ ಮುಖ್ಯರಸ್ತೆಯಲ್ಲಿ ಪರಿಷೆಯ ಸಂಭ್ರಮ ತುಂಬಿತ್ತು.
ತೆಪ್ಪೋತ್ಸವ ವಿಶೇಷ
13 ವರ್ಷಗಳ ಬಳಿಕ ನಡೆದ ತೆಪ್ಪೋತ್ಸವ ಈ ಬಾರಿ ಕಡಲೆಕಾಯಿ ಪರಿಷೆಯ ಪ್ರಮುಖ ಆಕರ್ಷಣೆಯಾಗಿತ್ತು. ಕೊನೆಯ ಕಾರ್ತಿಕ ಸೋಮವಾರದ ಸಂಜೆ ಕೆರೆ ಬಳಿ 25 ಸಾವಿರಕ್ಕೂ ಹೆಚ್ಚು ಮಂದಿ ಸೇರಿದ್ದರು.
"ಈ ಬಾರಿಯ ಕಡಲೆಕಾಯಿ ಪರಿಷೆಗೆ ಸುಮಾರು 8 ಲಕ್ಷ ಜನ ಆಗಮಿಸಿದ್ದರು ಎಂದು ಅಂದಾಜಿಸಲಾಗಿದೆ. ಬಸವನಗುಡಿ ಮುಖ್ಯರಸ್ತೆ ಹಾಗೂ ಸುತ್ತಮುತ್ತಲಿನ ರಸ್ತೆ ಸೇರಿ ಸುಮಾರು 3 ಕಿ.ಮೀ. ರಸ್ತೆ ಜನರಿಂದ ತುಂಬಿತ್ತು. ಇಷ್ಟು ವರ್ಷದ ಪರಿಷೆಯಲ್ಲಿ ಇದು ಹೊಸ ದಾಖಲೆ. ಹೆಚ್ಚಿನ ಜನರಿದ್ದರೂ ಗುರುವಾರ ಸಂಜೆ ಅಧಿಕೃತವಾಗಿ ಪರಿಷೆಯನ್ನು ಮುಕ್ತಾಯಗೊಳಿಸಲಾಯಿತು" ಎಂದು ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಹೇಳಿದರು.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | 2023-24ನೇ ಸಾಲಿನ ವಾರ್ಷಿಕ ಬಜೆಟ್: ಸಾರ್ವಜನಿಕ ಅಭಿಪ್ರಾಯ ಸಂಗ್ರಹಕ್ಕೆ ಚಾಲನೆ
"ಕಡಲೆಕಾಯಿ ಪರಿಷೆಯಲ್ಲಿ ವ್ಯಾಪಾರಕ್ಕಾಗಿ ಸುಮಾರು 1700ಕ್ಕೂ ಹೆಚ್ಚು ವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದರು. ನಾನಾ ಭಾಗಗಳಿಂದ ಬಂದ ವ್ಯಾಪಾರಿಗಳು ವಹಿವಾಟು ನಡೆಸಿದ್ದಾರೆ. ಸುಮಾರು ₹40 ಕೋಟಿಯಷ್ಟು ವಹಿವಾಟು ಆಗಿರಬಹುದು ಎಂದು ಅಂದಾಜಿಸಲಾಗಿದೆ" ಎಂದು ಬಿಬಿಎಂಪಿ ದಕ್ಷಿಣ ವಲಯದ ವಿಶೇಷ ಆಯುಕ್ತ ಜಯರಾಮ್ ರಾಯಪುರ ತಿಳಿಸಿದ್ದಾರೆ.