
- ಪ್ರತಿ ತಿಂಗಳು ಮೋದಿ ನಗರಕ್ಕೆ ಬರಬೇಕೆಂದು ಆಗ್ರಹಿಸಿ ಆಪ್ ಪ್ರತಿಭಟನೆ: ಪೊಲೀಸರಿಂದ ಬಂಧನ
- ಸರ್ಕಾರದ ವಿರುದ್ಧ ಭಿತ್ತಿಪತ್ರಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದ ಆಪ್ ಕಾರ್ಯಕರ್ತರು
ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಲು ಒಂದೆರಡು ದಿನಗಳಿರುವಾಗ ಮಾತ್ರ ರಸ್ತೆ ದುರಸ್ತಿ ಮಾಡಲು ರಾಜ್ಯ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗುತ್ತವೆ. ಹಾಗಾಗಿ, ನಗರದ ರಸ್ತೆಗಳು ಸದಾ ಕಾಲ ಚೆನ್ನಾಗಿರಬೇಕೆಂದರೆ ಮೋದಿಯವರು ತಿಂಗಳಿಗೊಮ್ಮೆ ಬರುತ್ತಿರಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿಯ ವಿನೂತನ ಚಳವಳಿ ನಡೆಸಿತು.
ಗುರುವಾರದಂದು ಬೆಳಗ್ಗೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಎದುರಿನ ರಸ್ತೆಯಲ್ಲಿ ಹಾಗೂ ಮಧ್ಯಾಹ್ನ ಮಲ್ಲೇಶ್ವರಂನ ದತ್ತಾತ್ರೇಯ ದೇವಸ್ಥಾನ ರಸ್ತೆಯಲ್ಲಿ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಭಿತ್ತಿಪತ್ರಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ, ರೈಲು ನಿಲ್ದಾಣದ ಸಮೀಪ ಪ್ರತಿಭಟಿಸಿದ ಎಎಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಎಎಪಿ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ, “ಜನಸಾಮಾನ್ಯರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲದ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಸಾಲು ಸಾಲು ವಾಹನ ಸವಾರರು ರಸ್ತೆ ಗುಂಡಿಗಳಿಗೆ ಬಿದ್ದು ಕೈಕಾಲು ಮುರಿದುಕೊಂಡರೂ ಸರ್ಕಾರ ತಲೆಕೆಡಿಸಿಕೊಂಡಿರಲಿಲ್ಲ. ಈಗ ಮೋದಿಯವರು ಬರುತ್ತಾರೆಂಬ ಕಾರಣಕ್ಕೆ ತರಾತುರಿಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲಾಗುತ್ತಿದೆ. ಅವರು ಸಂಚರಿಸುವ ರಸ್ತೆಗಳನ್ನು ಮಾತ್ರ ದುರಸ್ತಿ ಮಾಡಿ, ಉಳಿದ ರಸ್ತೆಗಳ ಬಗ್ಗೆ ನಿರ್ಲಕ್ಷ್ಯ ತೋರಲಾಗುತ್ತಿದೆ. ಮೋದಿಯವರನ್ನು ಮೆಚ್ಚಿಸಿ, ಮುಂದಿನ ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿಯಾಗುವುದೇ ಬಸವರಾಜ ಬೊಮ್ಮಾಯಿಯವರ ಏಕೈಕ ಉದ್ದೇಶ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ” ಎಂದು ಹೇಳಿದರು.
“ಮೋದಿಯವರು ಬರುತ್ತಾರೆಂದು ಮುಚ್ಚಿದ ಗುಂಡಿಗಳು ಅವರು ದೆಹಲಿಗೆ ವಾಪಸಾದ ಕೆಲವೇ ದಿನಗಳಲ್ಲಿ ಮತ್ತೆ ಬಾಯಿ ತೆರೆಯಲಿವೆ. ಗುಣಮಟ್ಟ ಕಾಯ್ದುಕೊಳ್ಳದೇ ಅವರಸರದಲ್ಲಿ ಮಾಡಿದ ಕಾಮಗಾರಿಗಳು ಒಂದು ತಿಂಗಳು ಬಾಳಿಕೆ ಬರುವುದೂ ಅನುಮಾನ. ಮೋದಿಯವರು ಈ ಹಿಂದೆ ರಾಜ್ಯಕ್ಕೆ ಬಂದಾಗಲೂ ನಾವಿದನ್ನು ಗಮನಿಸಿದ್ದೇವೆ. ಆದ್ದರಿಂದ ಪ್ರಧಾನಿ ಮೋದಿಯವರು ತಿಂಗಳಿಗೊಮ್ಮೆ ಬೆಂಗಳೂರಿಗೆ ಬಂದು ಇಲ್ಲಿನ ಎಲ್ಲ ರಸ್ತೆಗಳಲ್ಲಿ ಸಂಚರಿಸಬೇಕು. ಇಲ್ಲದಿದ್ದರೆ ಇಲ್ಲಿನ ಸಿಎಂ, ಸಚಿವರು ಹಾಗೂ ಶಾಸಕರು ನಿದ್ರಾವಸ್ಥೆಯಲ್ಲಿ ಇರುತ್ತಾರೆ” ಎಂದು ಮೋಹನ್ ದಾಸರಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕಡಲೆಕಾಯಿ ಪರಿಷೆ: ಕೆಂಪಾಂಬುಧಿ ಕೆರೆಯಲ್ಲಿ ತೆಪ್ಪೋತ್ಸವ ನಡೆಸಲು ನಿರ್ಧಾರ
“ಆದಾಯ ತೆರಿಗೆ, ಜಿಎಸ್ಟಿ, ಆಸ್ತಿ ತೆರಿಗೆ ಮುಂತಾದವುಗಳನ್ನು ಮಾತ್ರವಲ್ಲದೇ ಉತ್ತಮ ರಸ್ತೆಗಾಗಿ ವಾಹನ ನೋಂದಣಿ ಶುಲ್ಕ, ರಸ್ತೆ ತೆರಿಗೆಯನ್ನು ಜನಸಾಮಾನ್ಯರು ಪಾವತಿಸುತ್ತಾರೆ. ಆದರೆ ಸರ್ಕಾರವು ಜನರಿಗಾಗಿ ರಸ್ತೆ ದುರಸ್ತಿ ಮಾಡುವ ಬದಲು ಪ್ರಧಾನಿಗಾಗಿ ದುರಸ್ತಿ ಮಾಡುತ್ತಿದೆ. ಜನಸಾಮಾನ್ಯರನ್ನು ಕಸದಂತೆ ಕಂಡು, ಜನವಿರೋಧಿ ಆಡಳಿತ ನೀಡುತ್ತಿರುವ ಬಿಜೆಪಿಗೆ ಜನಸಾಮಾನ್ಯರೇ ತಕ್ಕ ಪಾಠ ಕಲಿಸಬೇಕು” ಎಂದು ಮೋಹನ್ ದಾಸರಿ ಹೇಳಿದರು.
ಪಕ್ಷದ ನಾಯಕರಾದ ಜಗದೀಶ್ ವಿ ಸದಂ, ಸುರೇಶ್ ರಾಥೋಡ್, ಅಂಜನಾ ಗೌಡ, ಅಶೋಕ್ ಮೃತ್ಯುಂಜಯ, ಗೋಪಿನಾಥ್ ಮತ್ತಿತರ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.