ಬೆಂಗಳೂರು | ಕೋವಿಡ್ ಲಾಕ್‌ಡೌನ್‌ ಬಳಿಕ ಅದ್ಧೂರಿ ಗಣರಾಜ್ಯೋತ್ಸವ ಆಚರಣೆಗೆ ಸಕಲ ಸಿದ್ಧತೆ

Republic day
  • ಬೆಂಗಳೂರಿನ ಮಾಣಿಕ್ ಷಾ ಮೈದಾನದಲ್ಲಿ ನಡೆಯುವ ಗಣರಾಜ್ಯೋತ್ಸವ
  • ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಧ್ವಜಾರೋಹಣ

ಕೋವಿಡ್ ಲಾಕ್‌ಡೌನ್‌ ಕಾರಣದಿಂದ ಕಳೆದೆರಡು ವರ್ಷಗಳಿಂದ ಸರಳವಾಗಿ ಆಚರಿಸಿದ್ದ ಗಣರಾಜ್ಯೋತ್ಸವವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸಲು ಬೆಂಗಳೂರು ಜಿಲ್ಲಾಡಳಿತ, ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆ ಸಿದ್ಧತೆ ಕೈಗೊಂಡಿದೆ.

ಜನವರಿ 26ರಂದು ಬೆಂಗಳೂರಿನ ಮಾಣಿಕ್ ಷಾ ಮೈದಾನದಲ್ಲಿ ನಡೆಯುವ ಗಣರಾಜ್ಯೋತ್ಸವದ ಸಿದ್ಧತೆ ಕುರಿತು ಮಂಗಳವಾರ ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್, ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮತ್ತು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಮಾಣಿಕ್ ಷಾ ಮೈದಾನದಲ್ಲಿ ಗುರುವಾರ ಬೆಳಿಗ್ಗೆ 9 ಗಂಟೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ನಂತರ ಗೌರವ ರಕ್ಷೆ ಸ್ವೀಕರಿಸಿ ರಾಜ್ಯದ ಜನರಿಗೆ ಗಣರಾಜ್ಯೋತ್ಸವ ಸಂದೇಶ ಸಾರಲಿದ್ದಾರೆ ಎಂದು ತಿಳಿಸಿದರು.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾತನಾಡಿ, “ಬೆಂಗಳೂರಲ್ಲಿ ಭದ್ರತೆಗೆ 1,200ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. 9 ಮಂದಿ ಡಿಸಿಪಿ, 16 ಮಂದಿ ಎಸಿಪಿ, 45 ಮಂದಿ ಇನ್‌ಸ್ಪೆಕ್ಟರ್‌ಗಳು, 101 ಪಿಎಸ್ಐ, 14 ಮಹಿಳಾ ಪಿಎಸ್ಐ, 83 ಎಎಸ್ಐ, 577 ಹೆಡ್ ಕಾನ್‌ಸ್ಟೆಬಲ್ಸ್‌, 77 ಮಹಿಳಾ ಸಿಬ್ಬಂದಿ, ಮಫ್ತಿಯಲ್ಲಿ 172 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಹೆಚ್ಚುವರಿ ಭದ್ರತೆಗೆ 10 ಕೆಎಸ್ಆರ್‌ಪಿ ತುಕಡಿ, ಸಿಎಆರ್ ತುಕಡಿ ನಿಯೋಜಿಸಲಾಗಿದೆ” ಎಂದು ಮಾಹಿತಿ ನೀಡಿದರು.

“ಭದ್ರತೆ ದೃಷ್ಠಿಯಿಂದ ಮಾಣಿಕ್ ಷಾ ಮೈದಾನದ ಸುತ್ತಮುತ್ತ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. 3 ಅಗ್ನಿಶಾಮಕ ವಾಹನಗಳು, 2 ಆಂಬುಲೆನ್ಸ್‌, 1 ಕ್ಷಿಪ್ರ ಕಾರ್ಯಾಚರಣೆ ಪಡೆ, 1 ಡಿಸ್ವಾಟ್, 1 ಆರ್‌ಐವಿ, 1 ಗರುಡ, ಮೈದಾನದ ಆಯಕಟ್ಟಿನಲ್ಲಿ 100 ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. 4 ಬ್ಯಾಗೇಜ್ ಸ್ಕ್ಯಾನರ್, 20 ಡಿಎಫ್ ಎಂಡಿ ಮುಂತಾದ ಉಪಕರಣಗಳ ಬಳಕೆ ಮಾಡಲಾಗುತ್ತಿದೆ. ಯಾವುದೇ ಅನುಮಾನಾಸ್ಪದ ವ್ಯಕ್ತಿ ಅಥವಾ ವಸ್ತುಗಳು ಕಂಡುಬಂದರೆ ಸಾರ್ವಜನಿಕರು 112 ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಬಹುದು” ಎಂದು ಹೇಳಿದರು.

Republic day

ಪಥಸಂಚಲನದಲ್ಲಿ 38 ತಂಡಗಳು ಭಾಗಿ

“ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಪೊಲೀಸ್ ತಂಡ, ಕೇರಳ ಮಹಿಳಾ ಪೊಲೀಸ್, ಸ್ಕೌಟ್ಸ್, ಗೈಡ್ಸ್, ಎನ್‌ಸಿಸಿ, ಸೇವಾದಳ, ಆರ್ಮಿ, ಏರ್ಫೋರ್ಸ್, ಸಿಆರ್‌ಪಿಎಫ್‌ ಸೇರಿದಂತೆ ಒಟ್ಟು 38 ತಂಡಗಳ 1520 ಮಂದಿ ಭಾಗವಹಿಸಲಿದ್ದಾರೆ” ಎಂದು ಮಾಹಿತಿ ನೀಡಿದರು.

ಈ ಸುದ್ದಿ ಓದಿದ್ದೀರಾ? ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ | ಬೆಂಗಳೂರಿನ ಫ್ರೀಡಂ ಪಾರ್ಕಿನತ್ತ ಹೆಜ್ಜೆಹಾಕಿದ 30 ಸಾವಿರ ನೌಕರರು

7,000 ಮಂದಿಗೆ ಆಸನ ವ್ಯವಸ್ಥೆ

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, “ಗಣರಾಜ್ಯೋತ್ಸವದ ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಪ್ರತಿವರ್ಷದಂತೆ ಸಿದ್ಧತೆ ಕೈಗೊಳ್ಳಲಾಗಿದೆ. 2,000 ಶಾಲಾ ಮಕ್ಕಳಿಂದ ಮೂರು ಸಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿದ್ದೇವೆ. ಜೊತೆಗೆ ಆರ್ಮಿ ವತಿಯಿಂದ ಕೆಲವು ಮನಸೆಳೆವ ಕಾರ್ಯಕ್ರಮಗಳು ನಡೆಯಲಿವೆ. 7,000 ಮಂದಿಗೆ ಆಸನದ ವ್ಯವಸ್ಥೆ ಮಾಡಿದ್ದೇವೆ. ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಲು ಈಗಾಗಲೇ 3,000 ಪಾಸ್‌ಗಳನ್ನು ವಿತರಿಸಲಾಗಿದ್ದು, ಗೇಟ್ ಸಂಖ್ಯೆ 4ರಲ್ಲಿ ಪ್ರವೇಶ ಕಲ್ಪಿಸಲಾಗಿದೆ. ಶಾಲಾ ಮಕ್ಕಳು ಮತ್ತು ಪೋಷಕರಿಗೆ ಮೊದಲ ಆದ್ಯತೆ ನೀಡಲಾಗುವುದು” ಎಂದು ಮಾಹಿತಿ ನೀಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app