
- ಅರ್ಜಿಯನ್ನೇ ಸಲ್ಲಿಸದ ಫಲಾಪೇಕ್ಷಿಗಳಿಗೆ ಅಕ್ರಮವಾಗಿ ಸೌಲಭ್ಯ ನೀಡಿರುವ ಆರೋಪ
- ಶಾಸಕರ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಅನುಮೋದನೆ ಇಲ್ಲದೆ ಫಲಾನುಭವಿಗಳ ಆಯ್ಕೆ
ಭ್ರಷ್ಟಾಚಾರ, ಕರ್ತವ್ಯಲೋಪ ಮತ್ತು ದುರ್ನಡತೆ ಆರೋಪದ ಹಿನ್ನೆಲೆ ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ ಎಂ ಸುರೇಶ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಈ ಕುರಿತು ಆದೇಶ ಹೊರಡಿಸಿದ್ದು, “ಕೆಎಎಸ್ (ಆಯ್ಕೆ ಶ್ರೇಣಿ) ಅಧಿಕಾರಿ, ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ ಎಂ ಸುರೇಶ್ ಕುಮಾರ್ ಅವರು ಗಂಗಾ ಕಲ್ಯಾಣ ಯೋಜನೆ, ನೇರ ಸಾಲ, ಉದ್ಯಮಶೀಲತೆ ಅಭಿವೃದ್ಧಿ ಯೋಜನೆ, ಮೈಕ್ರೋ ಕ್ರೆಡಿಟ್, ಸಮೃದ್ಧಿ ಮತ್ತು ಐರಾವತ ಯೋಜನೆಗಳಲ್ಲಿ ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ಅನುದಾನ ದುರ್ಬಳಕೆ ಎಸಗಿರುವುದಾಗಿ ಪ್ರಸ್ತಾಪಿಸಲಾಗಿದೆ” ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಅಧಿಕಾರಿ ಮೇಲಿನ ಆರೋಪಗಳು
1) ಗಂಗಾ ಕಲ್ಯಾಣ ಯೋಜನೆಯ ಗುತ್ತಿಗೆದಾರರಿಗೆ ಜಿಎಸ್‌ಟಿ ಮೊತ್ತವನ್ನು ಅಕ್ರಮವಾಗಿ ಪಾವತಿಸಿ ನಿಗಮಕ್ಕೆ 3.5 ಕೋಟಿ ರೂ. ಆರ್ಥಿಕ ನಷ್ಟ ಉಂಟುಮಾಡಿರುವುದು.
2) ನೇರ ಸಾಲ ಯೋಜನೆಯಲ್ಲಿ ಶಾಸಕರ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಅನುಮೋದನೆ ಇಲ್ಲದೆ, ನೇರವಾಗಿ ಅಕ್ರಮವಾಗಿ 5,000 ಫಲಾನುಭವಿಗಳ ಆಯ್ಕೆ ಮಾಡಿ 25 ಕೋಟಿ ರೂ. ದುರುಪಯೋಗ ಮಾಡಿ ನಿಗಮಕ್ಕೆ ಆರ್ಥಿಕ ನಷ್ಟ ಉಂಟುಮಾಡಿರುವುದು.
3) 2018-19ನೇ ಸಾಲಿನ ಐರಾವತ ಯೋಜನೆಯಡಿ ಸರ್ಕಾರದ ಆದೇಶದಂತೆ ಮೆರಿಟ್ ಅಂಕಗಳನ್ನು ಆಧರಿಸಿ ಆಯ್ಕೆಯಾಗಿದ್ದ 92 ಹೆಸರುಗಳನ್ನು ರದ್ದುಪಡಿಸಿ, ಅರ್ಜಿಯನ್ನೇ ಸಲ್ಲಿಸದ 92 ಫಲಾಪೇಕ್ಷಿಗಳಿಗೆ ನೇರವಾಗಿ, ಅಕ್ರಮವಾಗಿ ಸೌಲಭ್ಯ ನೀಡಿರುವುದು.
4) 2019 – 20ನೇ ಸಾಲಿನ ಐರಾವತ ಮತ್ತು ಸಮೃದ್ಧಿ ಯೋಜನೆಗಳಿಗೆ ಬಿಡುಗಡೆಯಾದ ಅನುದಾನ ಅನುಷ್ಠಾನ ಮಾಡದೇ, ಆ ಅನುದಾನ 2022ರಲ್ಲಿ ಬಳಸಿ, 2018-19ನೇ ಸಾಲಿನ ಈ ಯೋಜನೆಗಳಲ್ಲಿ ಅರ್ಜಿಯನ್ನೇ ಸಲ್ಲಿಸದ ಫಲಾನುಭವಿಗಳಿಗೆ ಅಕ್ರಮವಾಗಿ ಮಂಜೂರಾತಿ ನೀಡಿರುವುದು.
ಈ ಸುದ್ದಿ ಓದಿದ್ದೀರಾ? ಚುನಾವಣಾ ಆಯೋಗಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಪ್ರಶ್ನೆ
ಈ ಮೇಲಿನ ಆರೋಪಗಳನ್ನು ಎಸಗಿರುವ ಬಗ್ಗೆ ಲಭ್ಯವಾಗಿರುವ ದಾಖಲೆಗಳು ಮತ್ತು ಸಮಾಜ ಕಲ್ಯಾಣ ಇಲಾಖೆಯ ಶಿಫಾರಸನ್ನು ಪರಿಶೀಲಿಸಿದಾಗ ಮೇಲ್ನೋಟಕ್ಕೆ ಆರೋಪ ದೃಢಪಟ್ಟಿದೆ. ಹಾಗಾಗಿ ಕೆ ಎಂ ಸುರೇಶ್ ಕುಮಾರ್ ಅವರು ಅದೇ ಹುದ್ದೆಯಲ್ಲಿ ಮುಂದುವರಿದರೆ ಸಾಕ್ಷ್ಯ ನಾಶ ಮಾಡುವ ಮತ್ತು ಮುಕ್ತ ತನಿಖೆಗೆ ಅಡ್ಡಿ ಉಂಟು ಮಾಡುವ ಸಾಧ್ಯತೆ ಇರುವುದರಿಂದ ಅವರ ಸರ್ಕಾರಿ ಸೇವೆಯನ್ನು ಅಮಾನತು ಪಡಿಸಲಾಗಿದೆ. ಅಮಾನತು ಅವಧಿಯಲ್ಲಿ ಅಧಿಕಾರಿಯು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೆ ಕೇಂದ್ರಸ್ಥಾನ ಬಿಡಬಾರದು” ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.