ಬೆಂಗಳೂರು | ಎಸಿ ರೂಮ್‌ಗಳಲ್ಲಿ ಕೆಲಸ ಮಾಡುವವರಿಗೆ ಬಿಟ್ಟಿ ಚಾಕರಿ ಮಾಡಿ ಅಂದರೆ ಮಾಡುತ್ತಾರಾ?

Asha workers protest-salary issue-bng
  • ವೇತನಕ್ಕಾಗಿ ಆಶಾ ಕಾರ್ಯಕರ್ತೆಯರ ಹೋರಾಟ; ಇಲಾಖೆ ಆಯುಕ್ತರ ವಿರುದ್ಧ ಆಕ್ರೋಶ
  • ಸೇವೆಗೆ ನಿಯೋಜನೆಗೊಂಡ 9 ವರ್ಷದಲ್ಲಿ ವೇತನಕ್ಕಾಗಿ 20 ಬಾರಿ ಹೋರಾಟಕ್ಕೆ ಬಂದಿದ್ದೇನೆ

ಸರ್ಕಾರ ಕಳೆದ ಮೂರು ತಿಂಗಳಿಂದ ನಿಗದಿತ ಗೌರವಧನ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿ ಫ್ರೀಡಂ ಪಾರ್ಕ್‌ನಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ (ಎಐಯುಟಿಯುಸಿ) ಪ್ರತಿಭಟನೆ ನಡೆಯಿತು. 

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಬಿಬಿಎಂಪಿಯಡಿ ಹಾಗೂ ಬೆಂಗಳೂರು ನಗರದಲ್ಲಿ ಆಶಾ ಕಾರ್ಯಕರ್ತೆಯರಾಗಿ ಸೇವೆ ಸಲ್ಲಿಸುತ್ತಿರುವವರು ಪ್ರತಿಭಟನೆ ನಡೆಸಿದ್ದು, ಸರ್ಕಾರ ಮತ್ತು ಆರೋಗ್ಯ ಇಲಾಖೆ ಆಯುಕ್ತರಾದ ಡಿ ರಂದೀಪ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Eedina App

"ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ಸೌಲಭ್ಯ ಜಾರಿಯಾಗಿಲ್ಲ, ಗೌರವಧನದ ಹೆಸರಲ್ಲಿ ನೀಡುತ್ತಿರುವ ವೇತನವೂ ಸಕಾಲಕ್ಕಿಲ್ಲ. ಇದರಿಂದ ಸಾಲ ಮಾಡಿ ಜೀವನ ನಿರ್ವಹಣೆ ಮತ್ತು ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಕಳೆದ ಏಪ್ರಿಲ್‌ನಲ್ಲಿಯೇ ಬಾಕಿ ವೇತನ ಪಾವತಿಗೆ ಕ್ರಮ ವಹಿಸುವುದಾಗಿ ಆರೋಗ್ಯ ಇಲಾಖೆ ಆಯುಕ್ತರು ಭರವಸೆ ನೀಡಿದ್ದರಾದರೂ ಇದುವರೆಗೂ ಆ ನಿಟ್ಟಿನಲ್ಲಿ ಯಾವುದೇ ತೀರ್ಮಾನ ಕೈಗೊಂಡಿಲ್ಲ" ಎಂದು ಪ್ರತಿಭಟನಾನಿರತ ಆಶಾ ಕಾರ್ಯಕರ್ತೆಯರು ಆರೋಪಿಸಿದರು.

ಈ ಕುರಿತು ಎಐಯುಟಿಯುಸಿ ರಾಜ್ಯ ಪದಾಧಿಕಾರಿ ರಮಾ ಟಿ ಸಿ ಅವರು ಮಾತನಾಡಿ, "ಹಲವು ತಿಂಗಳುಗಳಿಂದ ವೇತನ ಇಲ್ಲದೆ ಆಶಾ ಕಾರ್ಯಕರ್ತೆಯರ ಬದುಕು ದುಸ್ತರವಾಗಿದೆ. ಮನೆ ಬಾಡಿಗೆ ಕಟ್ಟಲು, ನಿತ್ಯ ಕರ್ತವ್ಯ ನಿರ್ವಹಣೆಗೆ ಓಡಾಡಲು ಕೂಡ ಕಾಸಿಲ್ಲದೆ ಸಾಲ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ₹12000 ಜಾರಿಯಾಗಬೇಕು ಎಂದು ಬೇಡಿಕೆ ಇಟ್ಟಿದ್ದು, ಇದುವರೆಗೂ ಸರ್ಕಾರ ಸೌಲಭ್ಯ ನೀಡುವಲ್ಲಿ ವಂಚನೆ ಮಾಡಿದೆ. ಕಳೆದ ಬಾರಿ ಇದೇ ಜಾಗದಲ್ಲಿ ಪ್ರತಿಭಟನೆ ನಡೆಸಿದಾಗ ಆಯುಕ್ತರಾದ ರಂದೀಪ್‌ ಅವರು ಕಾರ್ಯಕರ್ತೆಯರಿಗೆ ಬಾಕಿ ಇರುವ ವೇತನ ಪಾವತಿ ಮಾಡಿಸುವುದಾಗಿ ಭರವಸೆ ಕೊಟ್ಟಿದ್ದರು. ಆದರೆ ಇದುವರೆಗೂ ಆ ಕುರಿತು ಯಾವುದೇ ಬೆಳವಣಿಗೆಯಾಗಿಲ್ಲ. ಬದಲಾಗಿ ಮೂರು ತಿಂಗಳಿನಿಂದ ವೇತನ ನೀಡದೆ ಆಶಾ ಕಾರ್ಯರ್ತೆಯರನ್ನು ಬಿಟ್ಟಿ ದುಡಿಸಿಕೊಳ್ಳುತ್ತಿದ್ದಾರೆ. ಇದು ಖಂಡನೀಯ" ಎಂದು ಆಕ್ರೋಶ ವ್ಯಕ್ತಪಡಿಸಿದರು.

AV Eye Hospital ad

"ಆಶಾ ಕಾರ್ಯಕರ್ತೆಯರು ಅವರು ನಿಯೋಜನೆಗೊಂಡಿರುವ ಕಾರ್ಯಕ್ಷೇತ್ರ ಬಿಟ್ಟು ಬೇರೆಡೆಗೆ ಕಳುಹಿಸಿ ಕೆಲಸ ಮಾಡಿಸುವುದು, ಆರೋಗ್ಯ ಇಲಾಖೆಯಡಿ ಸೂಚಿಸಿರುವ ಸುಗಮ ಹೆರಿಗೆ, ಸ್ವಸ್ಥ ಮಗುವಿನ ಜನನ, ತಾಯಿ-ಶಿಶು ಆರೈಕೆಯಂತಹ 38 ಕಾಂಪೋನೆಂಟ್‌ಗಳನ್ನು ಹೊರತುಪಡಿಸಿ ಬೇರೆ ಕೆಲಸಗಳಿಗೆ ನಿಯೋಜಿಸಬಾರದು. ವಿಶೇಷವಾಗಿ ಜಿಲ್ಲಾ ಮಟ್ಟದ ಆರೋಗ್ಯ ಸಂಬಂಧಿ ಸೃಜನಶೀಲ ಚಟುವಟಿಕೆಗಳನ್ನು ರೂಪಿಸಿದಾಗ ಕರ್ತವ್ಯಕ್ಕೆ ನಿಯೋಜನೆಗೊಂಡು ಆಶಾ ಕಾರ್ಯಕರ್ತೆಯರಿಗೆ ದಿನಭತ್ಯೆ ಮತ್ತು ಸಾರಿಗೆ ವೆಚ್ಚ ನೀಡಬೇಕು. ಆದರೆ, ಇದುವರೆಗೂ ತಿಂಗಳ ನಿಗದಿತ ₹5000 ಗೌರವಧನವನ್ನೇ ಕ್ರಮಬದ್ಧವಾಗಿ ನೀಡಿಲ್ಲ. ಈ ಧೋರಣೆ ಮುಂದುವರೆದರೆ ಉಗ್ರ ಹೋರಾಟಕ್ಕೆ ಮುಂದಾಗುತ್ತೇವೆ" ಎಂದು ಅವರು ಎಚ್ಚರಿಕೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಐದು ವರ್ಷಗಳ ನಂತರ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆಗೆ ಬಿಬಿಎಂಪಿ ಚಿಂತನೆ

ಚಾಮರಾಜನಗರದ ಆಶಾ ಕಾರ್ಯಕರ್ತೆ ಸರಸ್ವತಿ ಮಾತನಾಡಿ, "ಕೊರೊನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುವಾಗ ನಡೆದಾಡುವ ದೇವತೆಯರು ಅಂತ ಕರೆದರು. ಕೊಡುತ್ತಿದ್ದ ₹500 ಪ್ರೋತ್ಸಾಹ ಧನವನ್ನು ನಿಲ್ಲಿಸಿದ್ದಾರೆ. ನಮಗೆ ಪ್ರಚಾರ ಬೇಡ. ಬದುಕುವುದಕ್ಕೆ ಸರಿಯಾದ ವೇತನ ಕೊಡಿ. ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಕೆಲಸ ಮಾಡುವವರನ್ನು ಬಿಟ್ಟಿ ಚಾಕರಿ ಮಾಡಿ ಅಂದರೆ ಮಾಡುತ್ತಾರಾ? ನಿತ್ಯ ಬಿಸಿಲಲ್ಲೇ ಕೆಲಸ ಮಾಡುವ ನಮಗೆ ಕನಿಷ್ಠ ವೇತನ, ಕೆಲಸಕ್ಕೆ ನಿಗದಿತ ಸಮಯ ಅನ್ನೋದು ಬೇಡವಾ?" ಎಂದು ಅಸಮಾಧಾನ ವ್ಯಕ್ತಪಡಿಸಿದರು.

"ಸರ್ಕಾರಿ ಆಸ್ಪತ್ರೆಯೆಂದರೆ ಜನ ತಿರುಗಿ ನೋಡುತ್ತಿರಲಿಲ್ಲ. ನಮ್ಮ ಆಸ್ಪತ್ರೆ, ಉಚಿತ ಮತ್ತು ಉತ್ತಮ ಸೌಲಭ್ಯಗಳಿವೆ ಬನ್ನಿ ಎಂದು ಜನರಿಗೆ ಅಂಗಲಾಚಿ ಬೇಡಿ ಕರೆತಂದು ಸರ್ಕಾರದ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕಾಗಿ ದುಡಿದಿರುವ ನಮ್ಮನ್ನು ಈ ರೀತಿ ನಡೆಸಿಕೊಳ್ಳಲು ಸರ್ಕಾರಕ್ಕೆ ನಾಚಿಕೆಯಾಗಬೇಕು" ಎಂದು ಅವರು ಛೀಮಾರಿ ಹಾಕಿದರು.

ಮತ್ತೊಬ್ಬ ಆಶಾ ಕಾರ್ಯಕರ್ತೆ ನಿರ್ಮಲ ಮಾತನಾಡಿ, "ಕಳೆದ ಒಂಭತ್ತು ವರ್ಷಗಳಿಂದ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದು ಮೊದಲ ಎರಡು ವರ್ಷ ಸೇವೆ ಮಾಡಿ ಎಂದು ಬಿಟ್ಟಿಯಾಗಿ ಕೆಲಸ ಮಾಡಿಸಿಕೊಂಡಿದ್ದಾರೆ. ವರ್ಷಕ್ಕೆ ಇನ್ಸೆಂಟಿವ್‌ ಮತ್ತು ಗೌರವಧನ ಸೇರಿ ₹90000 ದವರೆಗೂ ಒಟ್ಟು ಮೊತ್ತ ಪಾವತಿಯಾಗಬೇಕು. ಅದರೆ ಒಂದು ತಿಂಗಳು ₹5000 ಗೌರವಧನ ಕೊಟ್ಟರೆ ಮತ್ತೆ ಐದು ತಿಂಗಳು ಕೊಡುವುದಿಲ್ಲ. ಕೇಳಿದರೆ ಅಧಿಕಾರಿಗಳು ಬೆದರಿಸಿ ಕಳುಹಿಸುತ್ತಾರೆ. ಸೇವೆಗೆ ನಿಯೋಜನೆಗೊಂಡಾಗಿನಿಂದ ವೇತನಕ್ಕಾಗಿ 20 ಬಾರಿ ಹೋರಾಟಕ್ಕೆ ಬಂದಿದ್ದೇನೆ. ಡಯಾಬಿಟಿಸ್‌ನಿಂದ ಬಳಲುತ್ತಿರುವ ನಾನು ಸಂಬಳ ಇಲ್ಲದೆ ಬಿಸಿಲಲ್ಲಿ ತಿರುಗಿ ಹೇಗೆ ಕೆಲಸ ಮಾಡಲಿ, ಔಷಧಿ, ಆಹಾರ ಎಲ್ಲದಕ್ಕೂ ಸಾಲ ಮಾಡಬೇಕು" ಎಂದು ಕಣ್ಣೀರಾದರು. 

ಆಶಾ ಕಾರ್ಯಕರ್ತೆಯರ ಬೇಡಿಕೆಗಳು ಹೀಗಿವೆ:

  1. ಮೂರು ತಿಂಗಳಿಂದ ಬಾಕಿ ಇರುವ ರಾಜ್ಯದ ನಿಗದಿತ ಪ್ರೋತ್ಸಾಹಧನವನ್ನು ಈ ಕೂಡಲೇ ಬಿಡುಗಡೆ ಮಾಡಬೇಕು.
  2. ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡಲು ಸೂಕ್ತ ಕ್ರಮ ವಹಿಸಬೇಕು.
  3. ಬಾಕಿ ಇರುವ ಕೇಂದ್ರದ ಇನ್ಸೆಂಟಿವ್ ಮತ್ತು ಎನ್‌ಡಿ ಹಣವನ್ನು ಬಿಡುಗಡೆ ಮಾಡಿ.
  4. ಆಧಾರ್ ಕಾರ್ಡ್, ಮತದಾರರ ಚೀಟಿ ಜೋಡಣೆ (ಬಿಎಲ್‌ಓ ಕೆಲಸ), ಈ-ಸಂಜೀವಿನಿ ಮುಂತಾದ ಮೊಬೈಲ್‌ ಆಧಾರಿತ ಕೆಲಸಗಳನ್ನು ಆಶಾಗಳಿಂದ ಒತ್ತಾಯಪೂರ್ವಕವಾಗಿ ಮಾಡಿಸುತ್ತಿರುವುದನ್ನು ಕೈಬಿಡಿ.
  5. ಬೆಂಗಳೂರು ನಗರದ ದುಬಾರಿ ಜೀವನ ವೆಚ್ಚಕ್ಕೆ ಅನುಗುಣವಾಗಿ ಬೆಂಗಳೂರು ನಗರ ಮತ್ತು ಬಿಬಿಎಂಪಿ ಆಶಾಗಳಿಗೆ ಹೆಚ್ಚುವರಿಯಾಗಿ ರೂ.5,000 ಇನ್ಸೆಂಟಿವ್ ನಿಗದಿ ಮಾಡಿ.
  6. ಬೆಂಗಳೂರು ನಗರ ಮತ್ತು ಬಿಬಿಎಂಪಿ ಆಶಾಗಳಿಗೆ ಪ್ರತಿ ತಿಂಗಳು ಬಸ್ ಪಾಸ್ ಕೊಡಿ.
ನಿಮಗೆ ಏನು ಅನ್ನಿಸ್ತು?
1 ವೋಟ್
eedina app