ಬೆಂಗಳೂರು| ಬ್ಯಾನರ್ ತಯಾರಿಕಾ ಘಟಕಗಳ ಮೇಲೆ ಬಿಬಿಎಂಪಿ ದಾಳಿ

  • 3 ಫ್ಲೆಕ್ಸ್ ಹಾಗೂ ಬ್ಯಾನರ್ ತಯಾರಿಕಾ ಘಟಕಗಳ ಮೇಲೆ ದಾಳಿ
  • ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್, ಪೋಸ್ಟರ್ ಮುದ್ರಿಸುವಂತಿಲ್ಲ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪಶ್ಚಿಮ ವಲಯ ವ್ಯಾಪ್ತಿಯ ಗಾಂಧಿನಗರ ವಾರ್ಡ್‌ನ ಶೇಷಾದ್ರಿಪುರ ಪೊಲೀಸ್ ಠಾಣೆಯ ಸುತ್ತಮುತ್ತಲಿನ ಪ್ರದೇಶದಲ್ಲಿರುವ 3 ಫ್ಲೆಕ್ಸ್ ಹಾಗೂ ಬ್ಯಾನರ್ ತಯಾರಿಕಾ ಘಟಕಗಳ ಮೇಲೆ ಬಿಬಿಎಂಪಿ ದಾಳಿ ನಡೆಸಿ 12 ಪ್ಲಾಸ್ಟಿಕ್ ರೋಲ್‌ಗಳನ್ನು ಜಪ್ತಿ ಮಾಡಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ಸ್, ಪೋಸ್ಟರ್ಸ್ ಹಾಕುವುದನ್ನು ನಿಷೇಧಿಸಲಾಗಿದ್ದು, ಪಾಲಿಕೆ ವ್ಯಾಪ್ತಿಯ ಎಲ್ಲ ವಲಯಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್‌ಗಳನ್ನು ತೆರುವುಗೊಳಿಸಲಾಗುತ್ತಿದೆ. ಈ ಸಂಬಂಧ ಸೋಮವಾರ ಬಿಬಿಎಂಪಿ ವಲಯ ಆಯುಕ್ತರಾದ ಡಾ. ದೀಪಕ್, ಮಾಹಿತಿ ತಂತ್ರಜ್ಞಾನ ನಿರ್ದೇಶಕರಾದ ಸೂರ್ಯ ಸೇನ್ ಅವರ ನೇತೃತ್ವದಲ್ಲಿ 3 ಫ್ಲೆಕ್ಸ್ ಹಾಗೂ ಬ್ಯಾನರ್‍ಸ್ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ; ಜನರ ಪರದಾಟ

ಶೇಷಾದ್ರಿಪುರ ಪೊಲೀಸ್ ಠಾಣೆಯ ಸುಬೇದಾರ್ ಛತ್ರಂ ರಸ್ತೆಯಲ್ಲಿರುವ ಸಿ ಎಂ ರಾಮ್ ಆರ್ಟ್ಸ್‌ಗೆ ದಿಢೀರ್ ದಾಳಿ ನಡೆಸಿ 9 ರೋಲ್ ವಶಪಡಿಸಿಕೊಂಡರು. ಮುರುಗನ್ ಆರ್ಟ್ಸ್ ಹೆಸರಿನ 2 ಯುನಿಟ್‌ಗಳ ಪೈಕಿ ಒಂದು ಯುನಿಟ್‌ನಲ್ಲಿದ್ದ 3 ರೋಲ್‌ಗಳು, ಫ್ಲೆಕ್ಸ್, ಬ್ಯಾನರ್ ಘಟಕಗಳಲ್ಲಿ 12 ಪ್ಲಾಸ್ಟಿಕ್ ರೋಲ್‌ಗಳನ್ನು ವಶಪಡಿಸಿಕೊಂಡು ಮಾರ್ಷಲ್‌ಗಳ ಗಸ್ತು ವಾಹನದಲ್ಲಿ ಜಂಟಿ ಆಯುಕ್ತರ ಕಚೇರಿಗೆ ತಂದು ನಿಯಂತ್ರಣ ಕೊಠಡಿಯ ಸಿಬ್ಬಂದಿಗೆ ಒಪ್ಪಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.

ಇನ್ನು ಮುಂದೆ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್, ಪೋಸ್ಟರ್‌ಗಳನ್ನು ಮುದ್ರಿಸದಂತೆ ಘಟಕದ ಮಾಲೀಕರಿಗೆ ಬಿಬಿಎಂಪಿ ಅಧಿಕಾರಗಳು ಸೂಚನೆ ನೀಡಿದ್ದಾರೆ.

ಪರಿಶೀಲನೆಯ ವೇಳೆ ವಲಯ ಜಂಟಿ ಆಯುಕ್ತ ಶ್ರೀನಿವಾಸ್, ಕಾರ್ಯಪಾಲಕ ಅಭಿಯಂತರ, ಆರೋಗ್ಯ ವೈದ್ಯಾಧಿಕಾರಿ, ಮಾರ್ಷಲ್‌ಗಳ ಮೇಲ್ವಿಚಾರಕರು ಹಾಗೂ ಮಾರ್ಷಲ್‌ಗಳು ಉಪಸ್ಥಿತರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್