ಬೆಂಗಳೂರು| ರಸ್ತೆಗುಂಡಿ ಮುಚ್ಚುವಂತೆ ಒತ್ತಾಯಿಸಿ 'ಬೆಂಗಳೂರು ಉಳಿಸಿ ಸಮಿತಿ' ಪ್ರತಿಭಟನೆ

  • ಅತಿಯಾದ ಭ್ರಷ್ಟಾಚಾರದಿಂದ ಹದಗೆಟ್ಟ ರಸ್ತೆಗಳು
  • ರಸ್ತೆಗುಂಡಿ ಸರಿಪಡಿಸುವಂತೆ ಭಿತ್ತಿ ಪತ್ರಗಳ ಪ್ರದರ್ಶನ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗುಂಡಿ ಸಮಸ್ಯೆ ಹೆಚ್ಚಾಗಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿರುದ್ಧ ಬೆಂಗಳೂರು ಉಳಿಸಿ ಸಮಿತಿ (ಎಸ್‌ಬಿಸಿ) ಪ್ರತಿಭಟನೆ ನಡೆಸಿತು.

ಗುರುವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಎಸ್‌ಬಿಸಿ ಸದಸ್ಯರು ಹಾಗೂ ಹಲವು ನಾಗರಿಕರು ಒಟ್ಟುಗೂಡಿ ಸಾಮೂಹಿಕ ಪ್ರತಿಭಟನೆ ನಡೆಸಿದರು. ನಗರದ ರಸ್ತೆಗಳ ಸ್ಥಿತಿಗತಿ ವಿವರಿಸುವ ಮತ್ತು ರಸ್ತೆಗುಂಡಿ ಸರಿಪಡಿಸುವಂತೆ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು.

ಪ್ರತಿಭಟನೆ ವೇಳೆ ಮಾತನಾಡಿದ ಎಸ್‌ಬಿಸಿಯ ಸದಸ್ಯ ಎನ್ ರವಿ, “ಬಿಬಿಎಂಪಿ ಸಾರ್ವಜನಿಕರ ಮನವಿಗಳನ್ನು ನಿರ್ಲಕ್ಷಿಸುತ್ತಿದೆ. ಕಳಪೆ ರಸ್ತೆಗಳನ್ನು ನಿರ್ಮಾಣ ಮಾಡುತ್ತಿದೆ. ನಗರದಲ್ಲಿ ಮಳೆ ನೀರು ಚರಂಡಿಗಳಿಗೆ ಹರಿಯುವ ಬದಲಾಗಿ ರಸ್ತೆಗಳ ಮೇಲೆ ನಿಲ್ಲುತ್ತಿದೆ. ಹಾಗಾಗಿ, ಗುಂಡಿಗಳು ಅಧಿಕವಾಗಿವೆ" ಎಂದರು.

“ಬಿಬಿಎಂಪಿಯಲ್ಲಿನ ಅತಿಯಾದ ಭ್ರಷ್ಟಾಚಾರದಿಂದ ಈ ಹದಗೆಟ್ಟ ರಸ್ತೆಗಳು ನಿರ್ಮಾಣವಾಗಿವೆ. ನಾಗರಿಕರ ಹಿತದೃಷ್ಟಿಯಿಂದ ಬಿಬಿಎಂಪಿ ಕೂಡಲೇ ರಸ್ತೆಗಳನ್ನು ಸರಿಪಡಿಸಬೇಕು” ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ಮುಂದಿನ ಹತ್ತು ವರ್ಷದಲ್ಲಿ ಬೆಂಗಳೂರಿನ ಜನಸಂಖ್ಯೆ 2.50 ಕೋಟಿ ತಲುಪಲಿದೆ: ತ್ರಿಲೋಕಚಂದ್ರ

ರಸ್ತೆಗುಂಡಿಗೆ ಸರಣಿ ಸಾವು-ನೋವು

ಕಳೆದ ವಾರ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ರಸ್ತೆಗುಂಡಿ ತಪ್ಪಿಸಲು ಹೋಗಿ ಪ್ಲಂಬಿಂಗ್ ಕೆಲಸ ಮಾಡುವ ಕುಮಾರ ಎಂಬುವವರು ಟ್ಯ್ರಾಕ್ಟರ್ ಕೆಳಗೆ ಸಿಲುಕಿ ಸಾವನ್ನಪ್ಪಿದ್ದರು. ಇಷ್ಟೇ ಅಲ್ಲದೇ ಕಳೆದ ಆರು ತಿಂಗಳಲ್ಲಿ ನಗರದಲ್ಲಿ ಇದು ರಸ್ತೆಗುಂಡಿಯಿಂದ ಸಾವನ್ನಪ್ಪಿದ್ದ ಏಳನೇ ಪ್ರಕರಣವಾಗಿದೆ.

ನಿತ್ಯ ಹಲವಾರು ಜನ ರಸ್ತೆಗುಂಡಿಯಿಂದ ಗಾಯಗೊಳ್ಳುತ್ತಿದ್ದಾರೆ. ಕೈ ಕಾಲು ಮುರಿದುಕೊಂಡಿದ್ದಾರೆ. ಕೋಮಾ ಸ್ಥಿತಿಗೂ ತಲುಪಿದ್ದಾರೆ. ಇಷ್ಟೇಲ್ಲಾ ಆದರೂ ಬಿಬಿಎಂಪಿ ಮಾತ್ರ ರಸ್ತೆಗುಂಡಿ ಮುಚ್ಚುವ ಗಡುವನ್ನು ಮುಂದೂಡುತ್ತಲೇ ಇದೆ. ಹಾಗಾಗಿ, ಬೆಂಗಳೂರು ಉಳಿಸಿ ಸಮಿತಿ ಕಳಪೆ ರಸ್ತೆ ಅಭಿವೃದ್ಧಿ ಹಾಗೂ ರಸ್ತೆಗುಂಡಿ ವಿರುದ್ಧ ಪ್ರತಿಭಟಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app