ಬೆಂಗಳೂರು | ಮತ್ತೆ ರಸ್ತೆ ಗುಂಡಿ ಮುಚ್ಚುವ ಗಡುವು ವಿಸ್ತರಿಸಿಕೊಂಡ ಪಾಲಿಕೆ; ಜನರ ಆಕ್ರೋಶ

  • ಮೇ ತಿಂಗಳಿನಿಂದ ಇಲ್ಲಿಯವರೆಗೂ ಒಟ್ಟು 33,000 ರಸ್ತೆಗುಂಡಿ ಪತ್ತೆ
  • ಇನ್ನೂ ಒಂದು ಸಾವಿರ ರಸ್ತೆಗುಂಡಿ ಮುಚ್ಚುವುದು ಬಾಕಿ ಉಳಿದಿದೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗುಂಡಿ ಸಮಸ್ಯೆಯಿಂದ ಜನ ಹೈರಾಣಾಗಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಹಿಡಿಶಾಪ ಹಾಕುತ್ತಿದ್ದಾರೆ. ಬಿಬಿಎಂಪಿ ನವೆಂಬರ್ 10ರ ಒಳಗೆ ಬೆಂಗಳೂರಿನ ಎಲ್ಲ ರಸ್ತೆಗಲ್ಲಿನ ಗುಂಡಿಗಳನ್ನು ಮುಚ್ಚುವುದಾಗಿ ಗಡುವು ನೀಡಿತ್ತು. ಆದರೆ, ಹಲವು ಬಾರಿ ಗಡುವು ವಿಸ್ತರಿಸಿಕೊಂಡಿರುವ ಬಿಬಿಎಂಪಿ, ಇದೀಗ ಮತ್ತೆ ಗಡುವು ವಿಸ್ತರಣೆ ಮಾಡಿದೆ. ನ. 19ರೊಳಗಾಗಿ ರಸ್ತೆಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.   

ಬೆಂಗಳೂರಿನ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, "ಬೆಂಗಳೂರಿನಲ್ಲಿ ಒಂದು ಸಾವಿರ ರಸ್ತೆಗುಂಡಿ ಮುಚ್ಚುವುದು ಬಾಕಿ ಇದ್ದು, ನ. 19ರೊಳಗೆ ಸಂಪೂರ್ಣ ರಸ್ತೆಗುಂಡಿಗಳನ್ನು ಮುಚ್ಚಲಾಗುವುದು" ಎಂದು ಹೇಳಿದ್ದಾರೆ.

Eedina App

"ಮೇ ತಿಂಗಳಿನಿಂದ ಇಲ್ಲಿಯವರೆಗೂ ಒಟ್ಟು 33,000 ರಸ್ತೆಗುಂಡಿಗಳನ್ನು ಪತ್ತೆ ಮಾಡಲಾಗಿದೆ. ಈ ಪೈಕಿ 32,000 ರಸ್ತೆಗುಂಡಿಗಳನ್ನು ಮುಚ್ಚಿದ್ದೇವೆ. ಇನ್ನೂ ಒಂದು ಸಾವಿರ ರಸ್ತೆಗುಂಡಿ ಮುಚ್ಚುವುದು ಬಾಕಿ ಉಳಿದಿದೆ" ಎಂದು ಅವರು ತಿಳಿಸಿದರು. 

"ನ. 11ರಂದು ನೀಡಿದ ಗಡುವಿನೊಳಗೆ ರಸ್ತೆಗುಂಡಿ ಮುಚ್ಚಬೇಕಾಗಿತ್ತು. ಆದರೆ, ಹವಾಮಾನ ವೈಪರೀತ್ಯದಿಂದ ಗುಂಡಿ ಮುಚ್ಚಲು ಸಾಧ್ಯವಾಗಲಿಲ್ಲ. ನವೆಂಬರ್ 17ರವರೆಗೆ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹವಾಮಾನದಲ್ಲಿ ಏರುಪೇರಾದರೆ ರಸ್ತೆಗುಂಡಿ ಮುಚ್ಚಲು ಸಾಧ್ಯವಾಗುವುದಿಲ್ಲ. ಉಳಿದ ರಸ್ತೆಗುಂಡಿ ಮುಚ್ಚಲು ಎರಡು ದಿನವಾದರೆ ಸಾಕು. ನ. 19ರಂದು ಬಾಕಿ ಉಳಿದಿರುವ ರಸ್ತೆಗುಂಡಿಗಳನ್ನು ಮುಚ್ಚುತ್ತೇವೆ" ಎಂದು ಹೇಳಿದರು.

AV Eye Hospital ad

"ಈಗಾಗಲೇ, ನಗರದ ಹಲವೆಡೆ ರಸ್ತೆಗುಂಡಿಗಳನ್ನು ಮುಚ್ಚಿದ್ದೇವೆ. ಉಳಿದ ರಸ್ತೆಗುಂಡಿಗಳನ್ನು ಆದಷ್ಟು ಬೇಗ ಮುಚ್ಚುತ್ತೇವೆ" ಎಂದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವೇತನಕ್ಕಾಗಿ ಆರೋಗ್ಯಸೌಧದ ಎದುರು '108 ಆ್ಯಂಬುಲೆನ್ಸ್' ಸಿಬ್ಬಂದಿ ಪ್ರತಿಭಟನೆ

ನಗರದಲ್ಲಿ ಕಣ್ಣು ಹಾಯಿಸದಲ್ಲೆಲ್ಲ ರಸ್ತೆಗುಂಡಿ ಕಾಣಿಸುತ್ತಿವೆ. ಮಲ್ಲೇಶ್ವರಂನ ಪ್ರತಿಯೊಂದು ರಸ್ತೆಯೂ ಗುಂಡಿಮಯವಾಗಿದೆ. ಪ್ರಕಾಶನಗರ, ಬಸವೇಶ್ವರನಗರ, ಕೊಟ್ಟಿಗೆಪಾಳ್ಯ, ಸುಮನಹಳ್ಳಿ ಜಂಕ್ಷನ್ ಸೇರಿದಂತೆ ನಗರದ ಹಲವೆಡೆ ರಸ್ತೆಗುಂಡಿಗಳು ಹೆಚ್ಚಾಗಿದ್ದು, ಬಿಬಿಎಂಪಿ ಕೇವಲ ಒಂದು ಸಾವಿರ ಗುಂಡಿಗಳ ಲೆಕ್ಕ ನೀಡುತ್ತಿದೆ. 

ಈ ಕುರಿತು ಈ ದಿನ.ಕಾಮ್ ಜತೆಗೆ ಮಾತನಾಡಿದ ಬಸವೇಶ್ವರನಗರದ ನಿವಾಸಿ, ಗೃಹಿಣಿ ಅಶ್ವಿನಿ, "ರಸ್ತೆಗುಂಡಿಗಳಿಂದ ಜೀವನ ಬೇಸತ್ತು ಹೋಗಿದೆ. ಇಷ್ಟು ಸಾವು ನೋವಾದರೂ ಕೂಡಾ ಬಿಬಿಎಂಪಿ ಎಚ್ಚೆತ್ತುಕೊಳ್ಳದೇ, ನೀಡಿದ ಗಡುವು ವಿಸ್ತರಿಸಿಕೊಂಡು ಕಾಲಹರಣ ಮಾಡುತ್ತಿದೆ. ಇತ್ತ ಕಡೆ ಗುಂಡಿಯಿಂದ ಜನರ ಜೀವ ಹೋಗುತ್ತಿದೆ. ಆದಷ್ಟು ಬೆಗ ಬಿಬಿಎಂಪಿ ನಗರದ ಎಲ್ಲ ರಸ್ತೆಗಳನ್ನು ಮುಚ್ಚಬೇಕು" ಎಂದರು.

"ಪ್ರಸ್ತುತ ದಿನಗಳಲ್ಲಿ ನಗರದ ರಸ್ತೆಗಳಲ್ಲಿ ವಾಹನದಲ್ಲಿ ಅಲ್ಲದೇ ನಡೆದುಕೊಂಡು ಹೋಗಲೂ ಸಾಧ್ಯವಾಗುತ್ತಿಲ್ಲ. ಗಣ್ಯರು ಬರುತ್ತಾರೆಂದು ರಾತ್ರೋರಾತ್ರಿ ಟಾರು ಹಾಕುವ ಈ ಬಿಬಿಎಂಪಿಯವರು ಜನಸಾಮಾನ್ಯರು ಸತ್ತರೆ, ಅದಕ್ಕೆ ಸಮಜಾಯಿಷಿ ನೀಡಿ ಮತ್ತೆ ಗಡುವು ವಿಸ್ತರಣೆ ಮಾಡುತ್ತಾರೆ. ಅಧಿಕಾರಿಗಳಿಗೆ ಕಿಂಚಿತ್ತಾದರೂ ಜವಾಬ್ದಾರಿ, ಕರ್ತವ್ಯ ಪ್ರಜ್ಞೆ ಇದ್ದರೆ ಆದಷ್ಟು ಬೇಗ ಉತ್ತಮ ರಸ್ತೆ ನಿರ್ಮಾಣ ಮಾಡಲಿ" ಎಂದು ಈ ದಿನ.ಕಾಮ್ ಜತೆಗೆ ಮಾತನಾಡಿದ ಮಲ್ಲೇಶ್ವರಂ ನಿವಾಸಿ ಲೋಕೇಶ್ ಆಕ್ರೋಶ ವ್ಯಕ್ತಪಡಿಸಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app