
- ಜೆಪಿ ನಗರದ 9ನೇ ಹಂತದಲ್ಲಿ 22 ಗುಂಟೆ ಜಾಗ ಒತ್ತುವರಿ
- ಪೊಲೀಸ್ ಬಂದೋಬಸ್ತ್ನಲ್ಲಿ ಆರು ತಾತ್ಕಾಲಿಕ ಶೆಡ್ಗಳ ತೆರವು
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಭೂ ಒತ್ತುವರಿದಾರರ ವಿರುದ್ಧ ಕಾರ್ಯಾಚರಣೆ ಮುಂದುವರೆಸಿದ್ದು, ಸೋಮವಾರ ಬೆಳಗ್ಗೆ ₹30 ಕೋಟಿ ಮೌಲ್ಯದ 22 ಗುಂಟೆ ಜಾಗವನ್ನು ವಶಕ್ಕೆ ಪಡೆದುಕೊಂಡಿದೆ.
ಜೆಪಿ ನಗರ 9ನೇ ಹಂತದ 1ನೇ ಬ್ಲಾಕ್ನಲ್ಲಿನ ಆಲಹಳ್ಳಿ ಸರ್ವೆ ಸಂಖ್ಯೆ 4/1 ರಲ್ಲಿ ಬಿಡಿಎಗೆ ಸೇರಿದ್ದ 22 ಗುಂಟೆ ಜಾಗವನ್ನು ಕೆಲವು ಒತ್ತುವರಿದಾರರು ಕಳೆದ ಹತ್ತು ವರ್ಷಗಳಿಂದ ತಾತ್ಕಾಲಿಕ್ ಶೆಡ್ಗಳನ್ನು ಹಾಕಿಕೊಂಡು, ವ್ಯಾಪಾರ ವಹಿವಾಟು ನಡೆಸುತ್ತಿದ್ದರು.
ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ಸೂಚನೆಯ ಮೇರೆಗೆ, ಬಿಡಿಎ ಅಧಿಕಾರಿಗಳು ಮತ್ತು ಎಂಜಿನಿಯರ್ಗಳು ತೆರವು ಕಾರ್ಯಾಚರಣೆ ನಡೆಸಿದ್ದು, ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ತೆರವುಗೊಳಿಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಆರು ತಾತ್ಕಾಲಿಕ ಶೆಡ್ಗಳನ್ನು ಪೊಲೀಸ್ ಬಂದೋಬಸ್ತ್ನಲ್ಲಿ ತೆರವುಗೊಳಿಸಲಾಗಿದೆ.
ಈ ಕುರಿತು ಮಾತನಾಡಿದ ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್, "ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿ ಹಣದಾಸೆಗೆ ಎನ್ಓಸಿಗಳನ್ನು ನೀಡಿ ಬಿಡಿಎ ಜಾಗವನ್ನು ಒತ್ತುವರಿಯಾಗುವಂತೆ ಮಾಡಿದ್ದರು. ಈಗ ನಕಲಿ ಎನ್ಓಸಿ ಪ್ರಕರಣಗಳನ್ನು ಹೊರತೆಗೆಯಲು ತನಿಖೆ ನಡೆಸಲಾಗುತ್ತಿದೆ. ಈ ಕುರಿತಂತೆ ಯಾವುದೇ ಅಧಿಕಾರಿ ತಪ್ಪು ಮಾಡಿದ್ದರೆ, ಅವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ನಕಲಿ ಎನ್ಒಸಿ ಬಳಸಿ ಬಿಡಿಎ ಜಾಗವನ್ನು ಅತಿಕ್ರಮಣ ಮಾಡಿಕೊಂಡವರ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ" ಎಂದು ತಿಳಿಸಿದ್ದಾರೆ.
"ಬಿಡಿಎ ಜಾಗವನ್ನು ಒತ್ತುವರಿ ಮಾಡಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡವರ ಬಗ್ಗೆ ಮಾಹಿತಿ ಮತ್ತು ದಾಖಲೆಗಳು ಸಾರ್ವಜನಿಕರ ಬಳಿ ಇದ್ದರೆ ಅವರು, ಬಿಡಿಎ ಗಮನಕ್ಕೆ ತರಬೇಕು" ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸರ್ಜಾಪುರ ಮತ್ತು ಹೆಬ್ಬಾಳ ಮೆಟ್ರೋ ರೈಲು ಮಾರ್ಗಕ್ಕೆ ಸರ್ವೇ ಕಾರ್ಯ ಆರಂಭ
"ತನಿಖೆ ನಡೆಸಿ ಒತ್ತುವರಿ ಪ್ರದೇಶಗಳನ್ನು ವಶಕ್ಕೆ ಪಡೆಯಲಾಗುವುದು. ಆ ಜಾಗವನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗುವುದು ಹಾಗೂ ಮಾಹಿತಿ ನೀಡುವ ಸಾರ್ವಜನಿಕರ ಹೆಸರನ್ನು ಗೌಪ್ಯವಾಗಿಡಲಾಗುವುದು" ಎಂದು ತಿಳಿಸಿದರು.