ಬೆಂಗಳೂರು | ತಪ್ಪು ಮಾಹಿತಿಗಳಿಗೆ ಕಿವಿಗೊಡಬೇಡಿ: ಗ್ರಾಹಕರಿಗೆ ಬೆಸ್ಕಾಂ ಮನವಿ

  • ಸಂಗ್ರಹಿಸುವ ತೆರಿಗೆ ರಾಜ್ಯ ಸರ್ಕಾರಕ್ಕೆ ನೀಡಲಾಗುತ್ತದೆ
  • ವಿದ್ಯುತ್ ಮತ್ತು ಅದರ ಪೂರೈಕೆಗೆ ನಿರ್ವಹಣಾ ವೆಚ್ಚ ನಿಗದಿ

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಬೆಸ್ಕಾಂ) ಮಾಸಿಕ ಬಿಲ್‌ನಲ್ಲಿ ವಿಧಿಸುವ ಶುಲ್ಕ ಮತ್ತು ಇಂಧನ ಹೊಂದಾಣಿಕೆ ಶುಲ್ಕದ ಕುರಿತು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಯಬಿಟ್ಟಿದ್ದಾರೆ. ಇದಕ್ಕೆ ಗ್ರಾಹಕರು ಕಿವಿಗೊಡದಂತೆ ಬೆಸ್ಕಾಂ ಮನವಿ ಮಾಡಿಕೊಂಡಿದೆ. 

ಮಾಸಿಕ ಬಿಲ್‌ನಲ್ಲಿ ನಮೂದಿಸಲಾಗುವ ನಿಗದಿತ ಶುಲ್ಕವನ್ನು ಸಂಗ್ರಹಿಸಲು ಬೆಸ್ಕಾಂಗೆ ಯಾವುದೇ ಅಧಿಕಾರವಿಲ್ಲ ಮತ್ತು ಇಂಧನ ಹೊಂದಾಣಿಕೆ ಶುಲ್ಕ ವಿಧಿಸಿ, ಗ್ರಾಹಕರನ್ನು ವಂಚಿಸಲಾಗುತ್ತಿದೆ ಎಂದು ಪುಟ್ಟೇಗೌಡ ಎಂಬ ವ್ಯಕ್ತಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಪ್ರಚಾರ ಮಾಡಿದ್ದರು.

'ಇಂತಹ ಕಿಡಿಗೇಡಿತನದಿಂದ ವರ್ತಿಸುವವರನ್ನು ನಂಬಬೇಡಿ' ಎಂದು ಬೆಸ್ಕಾಂ ತಿಳಿಸಿದೆ. ವಿಡಿಯೋ ಮಾಡಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಸ್ಕಾಂ ತಿಳಿಸಿದೆ. 

ನಿಗದಿತ ಶುಲ್ಕ ಪಾವತಿಸಲೇ ಬೇಕು

ಬಿಲ್‌ನಲ್ಲಿ ನಮೂದಿಸಿರುವ ನಿಗದಿತ ಶುಲ್ಕವು 1 ಕಿಲೋ ವ್ಯಾಟ್ ಗೆ ₹100 ಇದ್ದು, 2 ಕಿಲೋ ವ್ಯಾಟ್ ಗೆ ₹220 ರೂಪಾಯಿಯನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ)ನಿಗದಿ ಪಡಿಸಿದೆ. ನಿಗದಿತ ಶುಲ್ಕವು ಗ್ರಾಹಕರು ಬಳಸುವ ವಿದ್ಯುತ್ ಬಳಕೆ ಮೇಲೆ ವಿಧಿಸುವ ಶುಲ್ಕ ಆಗಿರುವುದಿಲ್ಲ.

ಗ್ರಾಹಕರು ವಿದ್ಯುತ್ ಬಳಸದಿದ್ದರೂ ನಿಗದಿತ ಶುಲ್ಕ (ಫಿಕ್ಸೆಡ್ ಚಾರ್ಜಸ್) ಪಾವತಿಸಲೇ ಬೇಕು. ಗ್ರಾಹಕರಿಗೆ ವಿದ್ಯುತ್ ಸಂಪರ್ಕ ಮತ್ತು ಅದನ್ನು ಪೂರೈಸಲು ಬೆಸ್ಕಾಂ ಒದಗಿಸುವ ಮೂಲ ಸೌಕರ್ಯದ ನಿರ್ವಹಣಾ ವೆಚ್ಚಕ್ಕಾಗಿ ನಿಗದಿತ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಇಂಧನ ಹೊಂದಾಣಿಕೆ ಶುಲ್ಕ ಮೂರು ತಿಂಗಳಿಗೆ ಒಮ್ಮೆ ಪರಿಷ್ಕರಣೆ

ಅದೇ ರೀತಿ ಇಂಧನ ಹೊಂದಾಣಿಕೆ ಶುಲ್ಕವನ್ನು ಕಲ್ಲಿದ್ದಲು ಖರೀದಿ ವೆಚ್ಚದ ಆಧಾರದ ಮೇಲೆ, ಪ್ರತಿ ಮೂರು ತಿಂಗಳಿಗೊಮ್ಮೆ  ಕೆಇಆರ್‌ಸಿ ಪರಿಷ್ಕರಿಸುತ್ತದೆ  ಎಂದು ಬೆಸ್ಕಾಂ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಗ್ರಾಹಕರು ತಾವು ಪಡೆದ ವಿದ್ಯುತ್ ಪ್ರಮಾಣದ ಸಾಮರ್ಥ್ಯಕ್ಕಿಂತ ಹೆಚ್ಚಿನ ವಿದ್ಯುತ್ ಸಾಮರ್ಥ್ಯವನ್ನು ಬಳಸಿದ್ದರೆ ಮಾತ್ರ ದಂಡ ವಿಧಿಸಲಾಗುತ್ತದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. 

ಈ ಸುದ್ದಿ ಓದಿದ್ದೀರಾ?: ಬಿಬಿಎಂಪಿ | ಪಾವತಿ ಪಾರ್ಕಿಂಗ್ ಜಾರಿಗೆ ಟೆಂಡರ್:‌ ಮನೆ ಮುಂದೆ ವಾಹನ ನಿಲ್ಲಿಸಿದರೂ ದಂಡ!

ದಂಡ ವಿಧಿಸುವ ರೀತಿ

ವಿದ್ಯುತ್ ಬಿಲ್‌ನಲ್ಲಿ ನಮೂದಿಸಿರುವ ಬಡ್ಡಿಯನ್ನು ನಿಗದಿತ ಅವಧಿಯೊಳಗೆ ವಿದ್ಯುತ್ ಶುಲ್ಕ ಪಾವತಿಸದಿದ್ದರೆ ಮಾತ್ರ ದಂಡ ವಿಧಿಸಲಾಗುತ್ತದೆ. ಹಾಗೆಯೇ ಬಿಲ್‌ನಲ್ಲಿ ಉಲ್ಲೇಖಿಸಿರುವ ತೆರಿಗೆಯನ್ನು ರಾಜ್ಯ ಸರ್ಕಾರದ ಪರವಾಗಿ ಬೆಸ್ಕಾಂ ಸಂಗ್ರಹಿಸುತ್ತಿದೆ. ತೆರಿಗೆ ದರವನ್ನು ಕೆಇಆರ್‌ಸಿ ಪರಿಷ್ಕರಿಸುತ್ತದೆ.

ಈ ಎಲ್ಲ ನಿಯಮಗಳನ್ನು ಅರ್ಥಮಾಡಿಕೊಳ್ಳದ ಈ ವ್ಯಕ್ತಿ, ಬಿಲ್ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಸರಿಯಾದ ಮಾಹಿತಿಯನ್ನು ಪಡೆಯದೇ ಜನರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಬೆಸ್ಕಾಂ ತಿಳಿಸಿದೆ.

ವಿಡಿಯೋ ಮಾಡಿದ ವ್ಯಕ್ತಿ ಸುಮಾರು ನಾಲ್ಕು ತಿಂಗಳ ಹಿಂದೆ; ವಿದ್ಯುತ್‌ ಬಿಲ್‌ ಪಾವತಿಸಲು 6 ತಿಂಗಳ ಕಾಲಾವಕಾಶವಿರುತ್ತದೆ. ಅಲ್ಲಿಯ ತನಕ ಬಿಲ್‌ ಕಟ್ಟದಿದ್ದರೆ, ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಲು ಕೆಇಬಿ ಅಧಿಕಾರಿಗಳಿಗೆ ಅಧಿಕಾರವಿರುವುದಿಲ್ಲ ಎಂಬ ತಪ್ಪು ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್