ಬೆಂಗಳೂರು | ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾದ 'ಅಪರಿಚಿತ ಬೈಕ್'

  • ರಾಜಕಾಲುವೆಯಲ್ಲಿ ಬೈಕ್ ಮಾತ್ರ ಕಾಣಿಸಿದ್ದರಿಂದ ಪೊಲೀಸರಿಗೆ ಮಾಹಿತಿ
  • ಬೆಂಗಳೂರಿನ ಬನಶಂಕರಿ 6ನೇ ಹಂತದ ಬಿಡಿಎ ಲೇಔಟ್‌ನ ಬಳಿ ಘಟನೆ

ಬೆಂಗಳೂರು ಬನಶಂಕರಿ 6ನೇ ಹಂತದ ಬಿಡಿಎ ಲೇಔಟ್‌ನ ರಾಜಕಾಲುವೆಯಲ್ಲಿ ಅಪರಿಚಿತ ಬೈಕ್ ಪತ್ತೆಯಾಗಿದ್ದು, ಸವಾರ ನಾಪತ್ತೆಯಾಗಿದ್ದಾನೆ ಎಂದು ಕೆಲಕಾಲ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾದ ಘಟನೆ ಕಳೆದ ಬುಧವಾರ ರಾತ್ರಿ ನಡೆದಿದೆ.

ಬುಧವಾರ ಸಂಜೆ ಸ್ಥಳೀಯರು ರಾಜಕಾಲುವೆಯಲ್ಲಿ ಬೈಕ್ ನೋಡಿ, ಸವಾರ ಕಾಣಿಸದ ಕಾರಣ ತಲಘಟ್ಟಪುರ ಪೊಲೀಸರಿಗೆ ಮಾಹಿತಿ ನೀಡಿದ್ದರು.

"ಬೈಕ್ ಸಮೇತ ಸವಾರ ರಾಜಕಾಲುವೆಯಲ್ಲಿ ಬಿದ್ದಿದ್ದು, ಬೈಕ್ ಮಾತ್ರ ಕಾಣಿಸುತ್ತಿದೆ' ಎಂದು ಸ್ಥಳೀಯರು ಮಾಹಿತಿ ನೀಡಿದ್ದರು. ಆ ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದೆವು. ಹಾಗಾಗಿ, ಗುರುವಾರ ಇಡೀ ದಿನ ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಲಾಯಿತು" ಎಂದು ತಲಘಟ್ಟಪುರ ಪೊಲೀಸರು ತಿಳಿಸಿದರು.

"ಅಗ್ನಿಶಾಮಕ ದಳದ ಸಿಬ್ಬಂದಿ ಸಹಾಯದೊಂದಿಗೆ ರಾಜಕಾಲುವೆಯಿಂದ ಬೈಕ್ ಹೊರಗೆ ತೆಗೆದು, ಸವಾರನಿಗಾಗಿ ಹುಡುಕಾಟ ನಡೆಸಲಾಗಿತ್ತು. ಗುರುವಾರ ಸಂಜೆ ಬೈಕ್ ಮಾಲೀಕ ಠಾಣೆಗೆ ಬಂದು, ತಮ್ಮ ಬೈಕ್ ಕಳ್ಳತನವಾಗಿರುವುದಾಗಿ ಹೇಳಿದ್ದರು. ಅವರನ್ನು ಸ್ಥಳಕ್ಕೆ ಕರೆಸಿ ಬೈಕ್ ತೋರಿಸಿದಾಗ, ಅದು ಅವರದೇ ಬೈಕ್ ಎಂದು ಗುರುತಿಸಿದರು" ಎಂದು ಪೊಲೀಸರು ತಿಳಿಸಿದ್ದಾರೆ.

AV Eye Hospital ad

"ರಾಜಕಾಲುವೆ ಸಮೀಪದಲ್ಲಿ ಬೈಕ್ ಸವಾರ ವಾಸವಿದ್ದು, ಬೈಕನ್ನು ತಮ್ಮ ಮನೆ ಮುಂದೆ  ನಿಲ್ಲಿಸಿದ್ದರು. ಯಾರೋ ಅಪರಿಚಿತರು ಬೈಕನ್ನು ರಾಜಕಾಲುವೆಗೆ ತಳ್ಳಿದ್ದಾರೆ. ಬೈಕ್ ತೇಲಿಕೊಂಡು ಸವಾರನ ಮನೆಯಿಂದ ದೂರಕ್ಕೆ ತೆರಳಿದೆ. ಇದನ್ನೇ ನೋಡಿ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದರು. ಈಗ ಬೈಕ್ ಸವಾರ ಸಿಕ್ಕ ಬಳಿಕ, ಸ್ಥಳೀಯರಲ್ಲಿದ್ದ ಆತಂಕ ದೂರವಾಯಿತು" ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | 2023-24ನೇ ಸಾಲಿನ ವಾರ್ಷಿಕ ಬಜೆಟ್‌: ಸಾರ್ವಜನಿಕ ಅಭಿಪ್ರಾಯ ಸಂಗ್ರಹಕ್ಕೆ ಚಾಲನೆ

"ರಾಜಕಾಲುವೆಯ ಸುತ್ತ ಇರುವ ತಡೆಗೋಡೆ ಕುಸಿದಿದ್ದು, ನಿತ್ಯ ಸ್ಥಳೀಯರು ಭಯದಲ್ಲಿ ಬದುಕುವಂತಾಗಿದೆ. ಹಾಗಾಗಿ, ಬೈಕ್ ಸಮೇತ ಯಾರಾದರೂ ರಾಜಕಾಲುವೆಗೆ ಬಿದ್ದಿರಬಹುದೆಂದು ಅಂದುಕೊಂಡಿದ್ದೆವು" ಎಂದು ಸ್ಥಳೀಯರು ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app