'ಚಿತ್ರಸಂತೆ'ಗಾಗಿ ರಸ್ತೆ ಬಂದ್; ಜನಸಾಮಾನ್ಯರಿಗೆ ತೊಂದರೆ ಎಂದ ನೈಜ ಹೋರಾಟಗಾರರ ವೇದಿಕೆ

  • ಮ್ಯಾನರ್ ಸರ್ಕಲ್‌ನಿಂದ ಶಿವಾನಂದ ಸರ್ಕಲ್‌ವರೆಗೂ ರಸ್ತೆ ಬಂದ್
  • ಅರಮನೆ ಮೈದಾನದಲ್ಲಿ ಚಿತ್ರಸಂತೆ ಆಯೋಜನೆ ಮಾಡಲು ಸಲಹೆ

ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ಚಿತ್ರಸಂತೆ ನಡೆಯುವ ಸಮಯದಲ್ಲಿ ಶಿವಾನಂದ ಸರ್ಕಲ್‌ವರೆಗೂ ರಸ್ತೆ ಬಂದ್‌ ಮಾಡುವುದರಿಂದ ಜನಸಾಮಾನ್ಯರಿಗೆ ತೊಂದರೆ ಉಂಟಾಗುತ್ತದೆ. ಹಾಗಾಗಿ, ಇದನ್ನು ತುಮಕೂರು ರಸ್ತೆಯಲ್ಲಿರುವ ವಸ್ತು ಪ್ರದರ್ಶನ ಮೈದಾನದಲ್ಲಿ ಅಥವಾ ಅರಮನೆ ಮೈದಾನದಲ್ಲಿ ಆಯೋಜನೆ ಮಾಡಿ ಎಂದು ನೈಜ ಹೋರಾಟಗಾರ ವೇದಿಕೆಯ ಎಚ್ ಎಂ ವೆಂಕಟೇಶ್ ಹೇಳಿದ್ದಾರೆ.

"ಮುಂದಿನ ಜನವರಿ 8ರಂದು ಚಿತ್ರಕಲಾ ಪರಿಷತ್‌ನಲ್ಲಿ ಚಿತ್ರಸಂತೆ ನಡೆಯಲಿದ್ದು, ಇದರಿಂದ ವಿಂಡ್ಸರ್ ಮ್ಯಾನರ್ ಸರ್ಕಲ್‌ನಿಂದ ಶಿವಾನಂದ ಸರ್ಕಲ್ ವರೆಗೂ ಸಂಪೂರ್ಣವಾಗಿ ರಸ್ತೆ ಬಂದ್ ಮಾಡಿ ಜನಸಾಮಾನ್ಯರಿಗೆ ತೊಂದರೆ ಉಂಟುಮಾಡುತ್ತಿದ್ದಾರೆ" ಎಂದಿದ್ದಾರೆ.

“ಚಿತ್ರಸಂತೆಗೆ ದೇಶದ ನಾನಾ ಭಾಗಗಳಿಂದ ಸಾವಿರಾರು ಚಿತ್ರ ಕಲಾಕಾರರು ಬರುತ್ತಾರೆ. ಚಿತ್ರಗಳನ್ನು ಮಾರಾಟ ಮಾಡಿ, ಕೋಟ್ಯಾಂತರ ರೂ. ವ್ಯಾಪಾರ ವ್ಯವಹಾರ ನಡೆಸುತ್ತಾರೆ. ಇಲ್ಲಿ ಹೆಚ್ಚಾಗಿ ಅತ್ಯಂತ ಶ್ರೀಮಂತ ವರ್ಗದವರು ಚಿತ್ರಗಳನ್ನು ಖರೀದಿಸುತ್ತಾರೆ. ಆದರೆ, ಜನಸಾಮಾನ್ಯರ ಮತ್ತು ಬಡವರಿಗೆ ಕೈಗೆಟುಕದಿರುವ ಚಿತ್ರಗಳು ಪ್ರದರ್ಶನದಲ್ಲಿರುತ್ತವೆ. ಇದಕ್ಕೆ ನಮ್ಮ ಯಾವುದೇ ತಕರಾರು ಇಲ್ಲ. ಆದರೆ, ಚಿತ್ರಸಂತೆ ವೇಳೆ ರಸ್ತೆ ಬಂದ್ ಮಾಡುವುದರಿಂದ ಆ್ಯಂಬುಲೆನ್ಸ್‌, ಬಿಎಂಟಿಸಿ ಬಸ್ಸಿನಲ್ಲಿ ಸಂಚರಿಸುವವರಿಗೆ ಟ್ರಾಫಿಕ್ ಸಮಸ್ಯೆ ಎದುರಾಗುತ್ತದೆ. ಇದರಿಂದ ಸಮಯ ವ್ಯರ್ಥವಾಗುತ್ತದೆ” ಎಂದು ಹೇಳಿದ್ದಾರೆ.

"ಇಷ್ಟೊಂದು ಪ್ರಮಾಣದ ಜನಸಮೂಹವನ್ನು ಸೇರಿಸಿ ಶ್ರೀಮಂತ ವರ್ಗದವರ ವಿಲಾಸಿ ಜೀವನಕ್ಕೆ ಎಡೆಮಾಡಿಕೊಡುವ ಚಿತ್ರಸಂತೆ ಬಡವರ ಸಾಮಾನ್ಯ ಜನರ ಸಂಚಾರಕ್ಕೆ ಧಕ್ಕೆ ಉಂಟು ಮಾಡಿ, ಅವರ ದುಃಖಕ್ಕೆ ಕಾರಣವಾಗುತ್ತದೆ" ಎಂದು ವೇದಿಕೆಯ ಎಚ್ ಎಂ ವೆಂಕಟೇಶ್ ದೂರಿದ್ದಾರೆ.

"ಒಂದು ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿ, ವಹಿವಾಟು ನಡೆಸಲು ಅನುಕೂಲ ಮಾಡಿಕೊಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಂಚಾರಿ ಪೊಲೀಸರು, ಪರಿಷತ್ ಅಧ್ಯಕ್ಷರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ" ಎಂದು ತಿಳಿಸಿದ್ದಾರೆ.

"ನಗರದ ನಾಗರಿಕರು ತಮ್ಮ ನ್ಯಾಯಯುತವಾದ ಬೇಡಿಕೆಗಳಿಗಾಗಿ ಒಂದು ಚಿಕ್ಕ ಪ್ರತಿಭಟನೆ ಮಾಡಿದಾಗ ಸಂಚಾರಕ್ಕೆ ತೊಂದರೆಯಾಗುತ್ತದೆ ಎಂದು ಅವರ ಮೇಲೆ ಪ್ರಕರಣ ದಾಖಲಿಸುವ ಪೊಲೀಸ್ ಆಯುಕ್ತರು, ಇಡೀ ರಸ್ತೆಯನ್ನು ಸಂಪೂರ್ಣವಾಗಿ ಇಡೀ ದಿನ ಬಂದ್ ಮಾಡಿ ಒಂದು ವರ್ಗದ ಜನಸಮೂಹಕ್ಕೆ ಸಹಾಯ ಮಾಡುತ್ತಿರುವುದು ನ್ಯಾಯಸಮ್ಮತವಲ್ಲ" ಎಂದು ಆರೋಪಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು| ಚಿತ್ರಸಂತೆಯಲ್ಲಿ ಜ.8ರಂದು ಕಲಾವಿದರ ಪ್ರತಿಭೆ ಅನಾವರಣ

"ಚಿತ್ರಕಲಾ ಪರಿಷತ್ ಅಧ್ಯಕ್ಷರು ಮತ್ತು ಬೆಂಗಳೂರು ಮಹಾನಗರದ ಪೊಲೀಸ್ ಆಯುಕ್ತರು, ಮತ್ತು ಜಂಟಿ ಪೊಲೀಸ್ ಆಯುಕ್ತರು ಬೆಂಗಳೂರು ನಗರ ಸಂಚಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಜನಸಾಮಾನ್ಯರಿಗೆ ಆಗುವ ಅನಾನುಕೂಲಗಳ ಬಗ್ಗೆ ಪರಿಶೀಲಿಸಿ ಜನವರಿ 8ರಂದು ಕುಮಾರ ಕೃಪಾ ರಸ್ತೆಯನ್ನು ಚಿತ್ರಸಂತೆಗೆ ಉಪಯೋಗಿಸದಂತೆ ಆದೇಶ ಹೊರಡಿಸಬೇಕು" ಎಂದು ಆಗ್ರಹಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app