ಬೆಂಗಳೂರು | 318 ರೈಲ್ವೆ ಕೋಚ್‌ ಖರೀದಿಗೆ ಟೆಂಡರ್‌ ಕರೆದ ಬಿಎಂಆರ್‌ಸಿಎಲ್‌

  • ನೂತನ ಟೆಂಡರ್ ಮುಂದಿನ 15 ವರ್ಷಗಳು ಕೋಚ್‌ಗಳ ನಿರ್ವಹಣೆ ಮಾಡಬೇಕು
  • 2022ರ ಡಿಸೆಂಬರ್ 12ರಂದು ಟೆಂಡರ್‌ನ ಬಿಡ್ ತೆರೆಯುವ ಸಾಧ್ಯತೆ

ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಕೆಲ ಮೆಟ್ರೋ ಮಾರ್ಗಗಳಿಗೆ 318 ಕೋಚ್‌ಗಳನ್ನು ಖರೀದಿಸಲು ಟೆಂಡರ್ ಕರೆದಿದ್ದು, ನೂತನ ಟೆಂಡರ್‌ಗೆ ಆಯ್ಕೆಯಾಗುವವರು ಮುಂದಿನ 15 ವರ್ಷ ಅವುಗಳ ನಿರ್ವಹಣೆ ಮಾಡಬೇಕೆಂದು ಪ್ರಕಟಣೆ ಹೊರಡಿಸಿದೆ. 

ಹೊರ ವರ್ತುಲ ರಸ್ತೆಯ ಕೇಂದ್ರ ರೇಷ್ಮೆ ಮಂಡಳಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಹಾಗೂ ಗುಲಾಬಿ ಮಾರ್ಗದ ಕಾಳೇನ ಅಗ್ರಹಾರ-ನಾಗವಾರ ಸಂಚಾರಕ್ಕೆ ಕೋಚ್‌ಗಳ ಖರೀದಿಗೆ ಟೆಂಡರ್ ಕರೆದಿದೆ.

ಬಿಎಂಆರ್‌ಸಿಎಲ್‌ 318 ಸ್ಟ್ಯಾಂಡರ್ಡ್ ಗೇಜ್ ಮೆಟ್ರೋ ಕಾರುಗಳ ವಿನ್ಯಾಸ, ತಯಾರಿಕೆ, ಪೂರೈಕೆ, ಸ್ಥಾಪನೆ, ಪರೀಕ್ಷೆ, ಕಾರ್ಯಾರಂಭ ಹಾಗೂ 15 ವರ್ಷಗಳವರೆಗಿನ ಸಮಗ್ರ ನಿರ್ವಹಣೆ ಸೇರಿದಂತೆ ಸಿಬ್ಬಂದಿಗಳ ತರಬೇತಿಗಾಗಿ ಟೆಂಡರ್‌ನಲ್ಲಿ ಷರತ್ತು ವಿಧಿಸಿದೆ. 2022ರ ಡಿಸೆಂಬರ್ 12ರಂದು ಟೆಂಡರ್‌ನ ಬಿಡ್ ತೆರೆಯುವ ಸಾಧ್ಯತೆಯಿದೆ.

318 ಬೋಗಿಗಳ ಪೈಕಿ, ಆರು ಬೋಗಿಗಳ 16 ರೈಲುಗಳು ಗುಲಾಬಿ ಮಾರ್ಗಕ್ಕೆ, ಆರು ಬೋಗಿಗಳ 16 ರೈಲು ಕೇಂದ್ರ ರೇಷ್ಮೆ ಮಂಡಳಿಯಿಂದ-ಕೆಆರ್‌ ಪುರಂವರೆಗೆ ಹಾಗೂ ಆರು ಬೋಗಿಗಳ 21 ರೈಲುಗಳನ್ನು ಕೆ ಆರ್‌ ಪುರಂ- ವಿಮಾನ ನಿಲ್ದಾಣ ಮಾರ್ಗಕ್ಕೆ ನಿಯೋಜನೆ ಮಾಡಲಾಗಿದೆ ಎಂದು ಬಿಎಮ್‌ಆರ್‌ಸಿಎಲ್‌ ತಿಳಿಸಿದೆ. 

ಆರ್‌ವಿ ರಸ್ತೆ - ಬೊಮ್ಮಸಂದ್ರ ಕಡೆಗೆ ಹಳದಿ ಮಾರ್ಗದ ಮೆಟ್ರೋ ರೈಲು ನಿರ್ಮಾಣಕ್ಕಾಗಿ 72 ಹೊಸ ಕೋಚ್‌ಗಳ ಖರೀದಿಗೆ ಟೆಂಡರ್‌ ಆಹ್ವಾನಿಸಿತು. ಈ ಟೆಂಡರ್‌ಗಾಗಿ, ನಾಲ್ಕು ಸಂಸ್ಥೆಗಳಾದ ಟ್ರಾನ್ಸ್‌ಪೋರ್ಟ್‌, ಬಿಇಎಂಎಲ್‌, ಮಿತ್ಸುಬಿಷಿ ಎಲೆಕ್ಟ್ರಿಕ್‌ ಮತ್ತು ಟಿಟಾಗರ್‌ ವ್ಯಾಗನ್‌ಗಳು ಟೆಂಡರ್‌ನಲ್ಲಿ ಬಿಡ್‌ ಸಲ್ಲಿಸಿವೆ. ಆದರೆ, ಬಿಎಂಆರ್‌ಸಿಎಲ್‌ ಇನ್ನೂ ಟೆಂಡರ್‌ ಅಂತಿಮಗೊಳಿಸಿಲ್ಲ. 

ಈ ಸುದ್ದಿ ಓದಿದ್ದೀರಾ?: ಟ್ರಾಫಿಕ್ ಜಾಮ್ ಪ್ರೇಮ: ಸ್ನೇಹಿತರು ಪ್ರೇಮಿಗಳಾಗಿ, ಪ್ರೇಮಿಗಳು ಮದುವೆಯಾದರೂ ಮುಗಿಯಲಿಲ್ಲ ಫ್ಲೈಓವರ್ ಕಾಮಗಾರಿ!

2019ರ ಡಿಸೆಂಬರ್‌ನಲ್ಲಿ, 3.3 ವರ್ಷಗಳಲ್ಲಿ 216 ಕೋಚ್‌ಗಳನ್ನು ಒದಗಿಸಲು ಸಿಆರ್‌ಸಿಸಿ ಕಂಪನಿಯೊಂದಿಗೆ ಬಿಎಂಆರ್‌ಸಿಎಲ್‌ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಅವಧಿ ಮುಗಿದ ನಂತರ ಸರಣಿ ಶೋಕಾಸ್ ನೋಟಿಸ್ ಜಾರಿ ಮಾಡಿದರೂ ಸಹ ಒಂದು ಕೋಚ್‌ ಅನ್ನು ಒದಗಿಸಿಲ್ಲ. ಇದರಿಂದಾಗಿ ನೂತನವಾಗಿ ಟೆಂಡರ್ ಕರೆದಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್