
- ಚಿನ್ನ ಅಡವಿಟ್ಟರೂ ಸಿಬಿಲ್ ಸ್ಕೋರ್ ಕಾರಣಕ್ಕೆ ಸಾಲ ಕೊಡಲ್ಲ: ರೈತರ ಆರೋಪ
- ಕೃಷಿ ಸಾಲಗಳಿಗೆ ನೀಡುವ ರೈತರ ಎಲ್ಲ ಸಾಲದ ಬಡ್ಡಿಯನ್ನು 1%ಗೆ ಇಳಿಸಬೇಕು
ರೈತರ ಕೃಷಿ ಕೆಲಸ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಲ ನೀಡಲು ಬ್ಯಾಂಕ್ಗಳು ಸಿಬಿಲ್ ಸ್ಕೋರ್ ಅನ್ನು ಮಾನದಂಡವಾಗಿ ಪರಿಗಣಿಸಬಾರದು; ಅದನ್ನು ರದ್ದುಪಡಿಸಬೇಕೆಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.
ರಾಜ್ಯ ಮುಖ್ಯ ಕಾರ್ಯದರ್ಶಿ ವಂದಿತ ಶರ್ಮ ನೇತೃತ್ವದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬೆಂಗಳೂರು, ಕರ್ನಾಟಕ ವಲಯ ಕಚೇರಿಯಲ್ಲಿ ನಡೆದ ರೈತರ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಸಮಸ್ಯೆ ಬಗ್ಗೆ ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಅವರು ಮಾತನಾಡಿದರು.
"ರೈತ ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಲ ನೀಡುವಾಗ ಪೋಷಕರ ಸಿಬಿಲ್ ಸ್ಕೋರ್, ಬಾಕಿ ಸಾಲಕ್ಕೆ ಲಿಂಕ್ ಮಾಡಬಾರದು. ರೈತರ ಕೃಷಿ ಕಾರ್ಯಗಳಿಗೆ, ಮನೆ ನಿರ್ಮಾಣ, ಕೃಷಿ ಉಪಕರಣಗಳ ಖರೀದಿ, ಕೃಷಿ ಗೃಹ ಕೈಗಾರಿಕೆಗಳ ಉದ್ದೇಶಕ್ಕಾಗಿ ಸಾಲ ನೀಡುವಾಗ ಸಿಬಿಲ್ ಸ್ಕೋರ್ ಮಾನದಂಡ ಮಾಡುವುದನ್ನು ಕೈಬಿಡಬೇಕು. ಅಲ್ಲದೆ, ಅರ್ಜಿ ಸಲ್ಲಿಸಿದ ರೈತರಿಗೆ ಸಮಯಕ್ಕೆ ಸರಿಯಾಗಿ ಅಗತ್ಯಕ್ಕೆ ತಕ್ಕಷ್ಟು ಅವರ ಭೂಮಿ ಮೌಲ್ಯದ 70% ರಷ್ಟು ಸಾಲ ಮಂಜೂರು ಮಾಡಬೇಕು" ಎಂದರು.
"ಕೃಷಿ ಉಪಕರಣಗಳಿಗೆ ನೀಡಿದ ಸಾಲಗಳಿಗೆ ಮರುಪಾವತಿಗೆ ಹೆಚ್ಚಿನ ಕಾಲಾವಕಾಶ ನೀಡಬೇಕು. ಕೃಷಿ ಉತ್ಪನ್ನ ಆಧಾರಿತ ಕೈಗಾರಿಕೆಗಳನ್ನು ಪ್ರಾರಂಭಿಸುವ ರೈತರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ನೀಡಿ ಪ್ರೋತ್ಸಾಹಿಸಬೇಕು. ಕೃಷಿ ಸಾಲಗಳಿಗೆ ನೀಡುವ ರೈತರ ಎಲ್ಲ ಸಾಲದ ಬಡ್ಡಿಯನ್ನು 1%ಗೆ ಇಳಿಸಬೇಕು" ಎಂದು ಕುರುಬೂರು ಶಾಂತಕುಮಾರ್ ಆರ್ಬಿಐ ಕರ್ನಾಟಕ ವಲಯ ಅಧಿಕಾರಿಗಳನ್ನು ಒತ್ತಾಯಿಸಿದರು.
ಈ ಬಗ್ಗೆ ರಾಜ್ಯ ಮುಖ್ಯ ಕಾರ್ಯದರ್ಶಿ ವಂದಿತ ಶರ್ಮ ಮಾತನಾಡಿ, "ಮುಂಬರುವ ರಾಜ್ಯ ಮಟ್ಟದ ಬ್ಯಾಂಕ್ಗಳ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಕಳುಹಿಸಲಾಗುವುದು" ಎಂದರು.
ಸಿಬಿಲ್ ಸ್ಕೋರ್ ಕುರಿತಂತೆ ರೈತರ ದೂರುಗಳು
ಚಾಮರಾಜನಗರ ತಾಲೂಕಿನ ಹೊಂಗನೂರು ಪಿಎಸಿಸಿ ಸಹಕಾರ ಸಂಘದಲ್ಲಿ ರೈತರಿಗೆ ₹50,000 ಸಾಲ ಮಂಜೂರು ಮಾಡಲು ಭೂಮಿ ಅಡಮಾನಕ್ಕಾಗಿ ಸಬ್ ರಿಜಿಸ್ಟರ್ ಕಚೇರಿಗೆ ಹೋಗಿ ನೊಂದಣಿ ಮಾಡಬೇಕೆಂದು ನಿತ್ಯ ಅಲೆದಾಡಿಸುತ್ತಾರೆ ಎಂದು ರೈತ ಮೂಕಳ್ಳಿ ಮಾದೇವಸ್ವಾಮಿ ಆರೋಪಿಸಿದ್ದಾರೆ.
ಮೈಸೂರು ಜಿಲ್ಲೆ ಟಿ ನರಸೀಪುರ ತಾಲೂಕಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ ಸಿಬಿಲ್ ಸ್ಕೋರ್ ಇಲ್ಲದ ಕಾರಣಕ್ಕೆ ಕೃಷಿ ಚಟುವಟಿಕೆಗೆ ಚಿನ್ನದ ಮೇಲೆ ಸಾಲ ಕೊಡಲು ನಿರಾಕರಿಸಿದರು ಎಂದು ರೈತ ಎಸ್ ಜಿ ನಂಜುಂಡಸ್ವಾಮಿ ಸಮುದೇವನಪುರ ಅವರು ದೂರಿದರು.
ದಾವಣಗೆರೆ ಜಿಲ್ಲೆ, ಹರಿಹರ ತಾಲೂಕು ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಸಾಲ ನೀಡುವುದಾಗಿ ಎಲ್ಲಾ ದಾಖಲಾತಿ ಪಡೆದು, ನಂತರ ಎರಡು ವರ್ಷಗಳ ಹಿಂದೆ ಬೇರೆ ಸಾಲ ಸೆಟಲ್ಮೆಂಟ್ ಮಾಡಿದ್ದೀರಿ. ಹಾಗಾಗಿ ಸಿಬಿಲ್ ಸ್ಕೋರಿಲ್ಲ ಎಂದು ಸಾಲ ಕೊಡಲ್ಲ ಎನ್ನುತ್ತಿದ್ದಾರೆಂದು ನಂದಿತಾವರೆ ಗ್ರಾಮದ ರೈತ ಮುರುಗೇಂದ್ರಯ್ಯ ಆರೋಪ ಮಾಡಿದರು.
ಇದೇ ರೀತಿಯಲ್ಲಿ ರಾಜ್ಯದ ಹಲವೆಡೆ ರೈತರಿಗೆ ಸಾಲ ಮಂಜೂರು ಮಾಡಲು ಸಿಬಿಲ್ ಸ್ಕೋರ್ ನೆಪ ಹೇಳಿ ನಿರಾಕರಿಸುತ್ತಿದ್ದಾರೆ. ಹಾಗಾಗಿ ಅನ್ನ ಹಾಕುವ ರೈತ ಅಸಹಾಯಕನಾಗಿದ್ದಾನೆ. ಕೂಡಲೇ ಅಂತಹ ಪ್ರಕರಣಗಳ ತಪಿತಸ್ಥರ ವಿರುದ್ಧ ಕ್ರಮ ಜರುಗಿಸಿ ಎಂದು ಕುರುಬೂರು ಶಾಂತಕುಮಾರ್ ಅಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರೈತ ಯುವಕರಿಗೆ ವಧು ಕೊರತೆ; ಹೆಣ್ಣುಮಕ್ಕಳಿಗೆ ಸಹಾಯಧನ, ವಿಶೇಷ ಪ್ಯಾಕೇಜ್ ಘೋಷಿಸಿ; ಹಸಿರು ಪ್ರತಿಷ್ಠಾನ
ಕಬ್ಬು ಬೆಳೆಗಾರರು ಸಲ್ಲಿಸಿದ ಬೇಡಿಕೆಗಳ ಪಟ್ಟಿ ಹೀಗಿದೆ:
- ರಾಜ್ಯದ ಎಲ್ಲ ಬ್ಯಾಂಕ್ ಶಾಖೆಗಳಲ್ಲಿ ಕೃಷಿ ಜ್ಞಾನವಿರುವ, ಕನ್ನಡ ಭಾಷೆಯ ಅಧಿಕಾರಿಗಳು ಕಡ್ಡಾಯವಾಗಿ ಇರಬೇಕು.
- ಫಾರ್ಮ್ ಹೌಸ್, ಕೃಷಿಕರ ಮನೆ ಮತ್ತು ಕೃಷಿ ಗೋದಾಮುಗಳ ನಿರ್ಮಾಣ, ದುರಸ್ತಿ ವಿಸ್ತರಣೆಗೆ ಆದ್ಯತೆ ನೀಡಿ ಕಡಿಮೆ ಬಡ್ಡಿಯಲ್ಲಿ ಸಾಲ ನೀಡಬೇಕು.
- ಕೃಷಿ ಚಟುವಟಿಕೆಗೆ ಬೆಳೆ ಸಾಲ ನೀತಿ ರೂಪಿಸುವ ಸಭೆಗಳಿಗೆ ಆಯಾ ಭಾಗದ ರೈತ ಪ್ರತಿನಿಧಿಗಳನ್ನು ಆಹ್ವಾನಿಸಿ ಸಲಹೆ ಪಡೆದು ಸಾಲ ನೀಡಬೇಕು.
- ಕೊಯ್ಲಿನ ನಂತರದ ಕೃಷಿ ಚಟುವಟಿಕೆಗೆ, ಕೃಷಿ ಆಧಾರಿತ ಉದ್ಯೋಗ ಘಟಕಗಳಿಗೆ ವಿಶೇಷ ನೆರವು ಪ್ರೋತ್ಸಾಹ ನೀಡಬೇಕು.
- ಕಬ್ಬು ಬೆಳೆಗಾರರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಬೇಕು ಮತ್ತು ಸಾಲ ಮರುಪಾವತಿಯ ಅವಧಿಯನ್ನು 20 ತಿಂಗಳಿಗೆ ವಿಸ್ತರಿಸಬೇಕು.
- ಸಕ್ಕರೆ ಕಾರ್ಖಾನೆಗಳಿಂದ ಮತ್ತು ಖರೀದಿದಾರರಿಂದ ಹಣ ಪಾವತಿ ಬಾಕಿ ಇದ್ದಾಗ ರೈತರಿಗೆ ಮರುಪಾವತಿಗೆ ಕಿರುಕುಳ ನೀಡದೆ, ಮುಂದಿನ ಹಂಗಾಮಿಗೆ ತುರ್ತು ಸಾಲ ನೀಡಬೇಕು.
- ರೈತ ಉತ್ಪಾದಕ ಸಂಸ್ಥೆಗಳಿಗೆ ನೀಡುವ ಸಾಲಗಳಿಗೆ ಬಡ್ಡಿ ಶೇ 7ಕ್ಕೆ ಇಳಿಸಬೇಕು.
- ಸರ್ಕಾರ ಜಾರಿಗೆ ತರುವ ಯಾವುದೇ ಕೃಷಿ ಸಾಲ ನೀತಿಗಳ ಬಗ್ಗೆ ಬ್ಯಾಂಕುಗಳ ಮುಂದೆ ಕಡ್ಡಾಯವಾಗಿ ಬಿತ್ತಿಫಲಕಗಳಲ್ಲಿ ಪ್ರಕಟಿಸಬೇಕು.
- ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕುಗಳು ರೈತರಿಗೆ ನೀಡುವ ಸಾಲ ಮಂಜೂರು ಮಾಡುವಾಗ ಬ್ಯಾಂಕ್ ಅಧಿಕಾರಿಗಳಿಂದ ಆಗುವ ಕಿರುಕುಳ, ತೊಂದರೆ ತಪ್ಪಿಸಬೇಕು.
- ದೇಶದ ಜನರಿಗೆ ಆಹಾರ ವಲಯವಾದ ಕೃಷಿ ಕ್ಷೇತ್ರದ ಉತ್ಪಾದನೆಗೆ ಪ್ರೋತ್ಸಾಹಿಸುವ ಕಿಸಾನ್ ಯೋಜನೆ, ಬೆಳೆ ವಿಮೆ, ಹಾಲು ಮಾರಾಟ ಸಹಾಯಧನ ಹಾಗೂ ಇತರೆ ಸಹಾಯಧನ ರೂಪದಲ್ಲಿ ರೈತರ ಖಾತೆಗೆ ಬಂದ ಹಣವನ್ನು ಬೇರೆ ಹಳೆಯ ಸಾಲಗಳಿಗೆ ಜಮಾ ಮಾಡಬಾರದು.
ಸಭೆಯಲ್ಲಿ ರಾಜ್ಯ ಮಟ್ಟದ ಬ್ಯಾಂಕ್ಗಳ ಸಮಿತಿಯ ಮುಖ್ಯಸ್ಥ ಪಾರ್ಶ್ವನಾಥ್, ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯ ಕಬ್ಬು ಬೆಳೆಗಾರ ಸಂಘದ ಮುಖಂಡರುಗಳಾದ ಸುರೇಶ್ ಮಾ ಪಾಟೀಲ್, ರಮೇಶ್ ಉಗಾರ್, ಲಕ್ಷ್ಮೀದೇವಿ, ಹತ್ತಹಳ್ಳಿ ದೇವರಾಜ್, ಭಾಗವಹಿಸಿದ್ದರು.