
- ಕಾಮಗಾರಿ ವೇಳೆ ಸಂಚಾರಿ ದಟ್ಟಣೆ ಉಂಟಾಗುವ ಸಾಧ್ಯತೆ
- ವಿನ್ಯಾಸದಲ್ಲಿ ಬದಲಾವಣೆಯೊಂದಿಗೆ ಯೋಜನೆ ಮುಂದುವರಿಕೆ
ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಸಂಪರ್ಕ ಕೊಂಡಿಯಾಗಿರುವ ಹೆಬ್ಬಾಳ ಮೇಲ್ಸೇತುವೆಗೆ ಎರಡು ಪಥಗಳನ್ನು ನಿರ್ಮಿಸುವ ಕಾಮಗಾರಿ ಪುನಾರಂಭವಾಗಲಿದೆ.
ಹೆಬ್ಬಾಳದ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಗಮನ ಹರಿಸಬೇಕೆಂಬ ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಕಾಮಗಾರಿ ಪುನಾರಂಭವಾಗಲಿದ್ದು, ಕಾಮಗಾರಿ ವೇಳೆ ಸಂಚಾರಿ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ.
ಹೆಬ್ಬಾಳ ಮೇಲ್ಸೇತುವೆ ಸುತ್ತಮುತ್ತ ಸಂಚಾರ ದಟ್ಟಣೆಯಿಂದ ತೊಂದರೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಕಡೆಯಿಂದ ನಗರದ ಕಡೆಗೆ ಇರುವ ಮೇಲ್ಸೇತುವೆ ಜೊತೆಗೆ ಇನ್ನೆರಡು ಪಥಗಳನ್ನು ನಿರ್ಮಿಸಲಾಗುತ್ತದೆ ಎಂದು ಈ ಹಿಂದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ಹೇಳಿದ್ದರು.
"2019ರಲ್ಲಿ ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ಸಿಎಲ್) ಆಕ್ಷೇಪಣೆಯ ಬಳಿಕ ಸ್ಥಗಿತಗೊಂಡಿದ್ದ ಎರಡು ಪಥಗಳ ನಿರ್ಮಾಣ ಕಾಮಗಾರಿಯೂ ಇನ್ನು ಒಂದು ಅಥವಾ ಎರಡು ವಾರಗಳಲ್ಲಿ ಪುನರಾರಂಭಗೊಳ್ಳಲಿದೆ. ವಿನ್ಯಾಸದಲ್ಲಿ ಬದಲಾವಣೆಯೊಂದಿಗೆ ಯೋಜನೆಯನ್ನು ಮುಂದುವರಿಸಲಾಗುವುದು" ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಹೆಬ್ಬಾಳ ಮೇಲ್ಸೇತುವೆಗೆ ಈ ಎರಡು ಪಥಗಳನ್ನು ಸೇರಿಸುವುದರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಗರಕ್ಕೆ ಬರುವ ವಾಹನ ಸವಾರರಿಗೆ ಅನುಕೂಲವಾಗಲಿದೆ" ಎಂದರು.
"2019ರಲ್ಲಿ ಬಿಎಂಆರ್ಸಿಎಲ್ ಹೆಬ್ಬಾಳದಲ್ಲಿ ಎರಡು ಪಥಗಳನ್ನು ನಿರ್ಮಿಸುವುದರಿಂದ ಮೆಟ್ರೋ ಪ್ರಸ್ತಾವಿತ ಮೂರನೇ ಹಂತದ ಮೆಟ್ರೋ ಯೋಜನೆಗೆ ಅಡ್ಡಿಯಾಗುತ್ತದೆ ಎಂದು ಆಕ್ಷೇಪಿಸಿತ್ತು. ಹಾಗಾಗಿ, ಗುತ್ತಿಗೆದಾರರಿಗೆ ಕೆಲಸವನ್ನು ನಿಲ್ಲಿಸುವಂತೆ ತಿಳಿಸಲಾಯಿತು" ಎಂದು ಹೇಳಿದರು.
"ಮೇಲ್ಸೇತುವೆಗೆ ಎರಡು ಪಥಗಳನ್ನು ನಿರ್ಮಿಸುವುದಲ್ಲದೆ ತುಮಕೂರು ರಸ್ತೆ ಬದಿಯಿಂದ ಬರುವ ವಾಹನ ಸವಾರರು ಕೆ.ಆರ್.ಪುರಂ ಕಡೆಗೆ ಚಲಿಸಲು ಅನುಕೂಲವಾಗುವಂತೆ ಏಕಮುಖ ಅಂಡರ್ಪಾಸ್ ನಿರ್ಮಾಣವನ್ನು ಗುತ್ತಿಗೆದಾರರಿಗೆ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನೂ ಕೈಗೆತ್ತಿಕೊಳ್ಳಲಾಗುವುದು” ಎಂದು ಅಧಿಕಾರಿಗಳು ತಿಳಿಸಿದರು.
"ಪ್ರಸ್ತುತವಿರುವ ಎರಡು ಪಥಗಳಿಗೆ ಸಮಾನಾಂತರವಾಗಿ ಈಗ ಎರಡು ಪಥಗಳನ್ನು ನಿರ್ಮಿಸಲಾಗುವುದು ಮತ್ತು ರಸ್ತೆಯ ಮುಖ್ಯ ಪಥಗಳು (ಮೇಕ್ರಿ ಸರ್ಕಲ್ ಕಡೆಗೆ) ಸಂಪರ್ಕಿಸುವ ಬ್ಯಾಪ್ಟಿಸ್ಟ್ ಆಸ್ಪತ್ರೆ ಬಳಿ ಡೌನ್ ರಾಂಪ್ ಕೊನೆಗೊಳ್ಳುತ್ತದೆ" ಎಂದು ಅಧಿಕಾರಿ ಹೇಳಿದರು.
"ಮುಂದಿನ ದಿನಗಳಲ್ಲಿ ಕೆ.ಆರ್.ಪುರಂನಿಂದ ಬರುವ ವಾಹನ ಸವಾರರು ಪೂರ್ವ ಭಾಗದಲ್ಲಿ ಇರುವ ಎರಡು ಪಥಗಳನ್ನು ಬಳಸುತ್ತಾರೆ. ನೂರಾರು ವಾಹನಗಳು ನಗರ ಪ್ರವೇಶಿಸಲು ದ್ವಿಪಥದ ಲೂಪ್ ಅನ್ನು ಬಳಸುವುದರಿಂದ ಲೂಪ್ ಅನ್ನು ಕಿತ್ತುಹಾಕಲಾಗುತ್ತದೆ. ಇದರಿಂದ ಸಂಚಾರ ದಟ್ಟಣೆ ತಪ್ಪುವ ಸಾಧ್ಯತೆಯಿದೆ" ಎಂದು ಹೇಳಿದರು.
"ಲೂಪ್ ಅನ್ನು ಕಿತ್ತುಹಾಕಿದ ನಂತರ ಕೆ.ಆರ್.ಪುರಂ ಕಡೆಗೆ ಸಾಗುವ ಮೇಲ್ಸೇತುವೆಯ ಅಡಿಯಲ್ಲಿ ಯು-ತಿರುವನ್ನು ತೆಗೆದುಕೊಳ್ಳಬಹುದು. ಪ್ರಸ್ತುತ ತುಮಕೂರು ರಸ್ತೆ ಕಡೆಯಿಂದ ಬರುವ ವಾಹನ ಸವಾರರು ಮತ್ತು ಎಸ್ಟೀಮ್ ಮಾಲ್ ಕಡೆಯಿಂದ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಿಂದ ಬರುವ ವಾಹನಗಳು ಈ ಲೂಪ್ ಅನ್ನು ಬಳಸುತ್ತಿವೆ. ಇದರಿಂದ ಇನ್ನಷ್ಟು ಅವ್ಯವಸ್ಥೆ ಸೃಷ್ಟಿಸುವ ಸಾಧ್ಯತೆ ಉಂಟಾಗುತ್ತಿದೆ" ಎಂದರು.
ಬಿಡಿಎ ಅಧಿಕಾರಿಯೊಬ್ಬರು ಮಾತನಾಡಿ, "ಇನ್ನು ಮುಂದೆ ಕೆ.ಆರ್.ಪುರಂನಿಂದ ಬರುವ ವಾಹನಗಳ ಅನುಕೂಲಕ್ಕಾಗಿ ಮೇಲ್ಸೇತುವೆ ನಿರ್ಮಿಸುವ ಯೋಜನೆ ಇದೆ. ಮುಂದಿನ ದಿನಗಳಲ್ಲಿ ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆಗೆ ಪ್ರತ್ಯೇಕ ಟೆಂಡರ್ ಕರೆಯಲಾಗುವುದು. ಬಿಎಂಆರ್ಸಿಎಲ್ನ ಒಪ್ಪಿಗೆಗಾಗಿ ಕಾಯಲಾಗುತ್ತಿದೆ" ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಫೆ.13 ರಿಂದ 'ಏರೋ ಇಂಡಿಯಾ ವೈಮಾನಿಕ ಪ್ರದರ್ಶನ-2023' ಆರಂಭ
"ಬಿಡಿಎ ಬಿಎಂಆರ್ಸಿಎಲ್ನೊಂದಿಗೆ ಚರ್ಚೆ ನಡೆಸಿದ್ದು, 2019ರಲ್ಲಿ ಸ್ಥಗಿತಗೊಂಡಿರುವ ಕಾಮಗಾರಿಯನ್ನು ಪುನರಾರಂಭಿಸಲು ಲಿಖಿತ ಒಪ್ಪಿಗೆ ಕೋರಿ ಸಂಸ್ಥೆಗೆ ತಿಳಿಸಲಾಗಿದೆ. ಹಸಿರು ನಿಶಾನೆ ದೊರೆತ ಬಳಿಕ ಕಾಮಗಾರಿ ಕೈಗೊಳ್ಳಲಾಗುವುದು" ಎಂದು ಅಧಿಕಾರಿ ತಿಳಿಸಿದ್ದಾರೆ.