ಬೆಂಗಳೂರು | ಮುಂದುವರಿದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ

encroachment clearance operation
  • ಬಿಬಿಎಂಪಿ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಒತ್ತುವರಿ ತೆರವು
  • ಶಾಂತಿನಿಕೇತನ, ಪಾಪಯ್ಯ ರೆಡ್ಡಿ ಲೇಔಟ್ ನಲ್ಲಿ 500 ಮೀಟರ್ ಒತ್ತುವರಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆದಿದ್ದು, ಗುರುವಾರ ಬಿಬಿಎಂಪಿ ಅಧಿಕಾರಿಗಳು ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಮಾಡಿದರು.

ಮಹದೇವಪುರ ವಲಯದ ಮುನ್ನೇನಕೊಳಲಿನ ಶಾಂತಿನಿಕೇತನ ಲೇಔಟ್‌ನಲ್ಲಿ ಒಂದು ಅಂತಸ್ತಿನ ಕಟ್ಟಡ, ಪಾಪಯ್ಯ ರೆಡ್ಡಿ ಲೇಔಟ್‌ನಲ್ಲಿ ನಾಲ್ಕು ಅಂತಸ್ತಿನ ಕಟ್ಟಡ, ಸರ್ಜಾಪುರ ರಸ್ತೆಯ ಗ್ರೀನ್ ವುಡ್ ರೆಸಿಡೆನ್ಸಿ ಬಳಿ ಸ್ಲ್ಯಾಬ್ ತೆರವು ಕಾರ್ಯಾಚರಣೆ ಮಾಡಲಾಯಿತು.

ಮುನ್ನೇನಕೊಳಲು ಬಳಿಯ ಶಾಂತಿ ನಿಕೇತನ ಲೇಔಟ್ ನಲ್ಲಿ ಒಂದು ಅಂತಸ್ತಿನ ಕಟ್ಟಡವನ್ನು ರಾಜಕಾಲುವೆ ಮೇಲೆ ನಿರ್ಮಾಣ ಮಾಡಿದ್ದರು. ಕೂಡಲೆ ಮನೆ ಖಾಲಿ ಮಾಡಲು ತಹಶೀಲ್ದಾರ್ ಅವರಿಂದ ನೋಟಿಸ್ ನೀಡಲಾಗಿತ್ತು. ಅದರಂತೆ ಮನೆ ಖಾಲಿ ಮಾಡಿದ ಬಳಿಕ ಹಿಟಾಚಿಯ ಬ್ರೇಕರ್ ಮೂಲಕ ಸಂಪೂರ್ಣ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ.

ಪಾಪಯ್ಯ ರೆಡ್ಡಿ ಲೇಔಟ್ ನಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದ ನಾಲ್ಕು ಅಂತಸ್ತಿನ ಕಟ್ಟಡ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿತ್ತು. ಮನೆ ಖಾಲಿ ಮಾಡಿದ ನಂತರ ಗುರುವಾರ ಕಟ್ಟಡ ಮುಂದಿನ ಕೆಲಭಾಗವನ್ನು ತೆರವುಗೊಳಿಸಲಾಯಿತು.

ಕೂಡಲೇ ಮಳೆ ನೀರು ಕಾಲುವೆ ನಿರ್ಮಿಸಿ : ತ್ರಿಲೋಕ್ ಚಂದ್ರ ಸೂಚನೆ

ಮಹದೇವಪುರ ವಲಯ ಆಯುಕ್ತ ಡಾ. ತ್ರಿಲೋಕ್ ಚಂದ್ರ ಸ್ಥಳದಲ್ಲಿ ಉಪಸ್ಥಿತರಿದ್ದು, “ಶಾಂತಿನಿಕೇತನ ಮತ್ತು ಪಾಪಯ್ಯ ರೆಡ್ಡಿ ಲೇಔಟ್‌ನಲ್ಲಿ ಅಂದಾಜು 500 ಮೀಟರ್ ನಷ್ಟು ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದು, ಬಾಕಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಅದಕ್ಕಾಗಿ ಅವಶ್ಯಕ ಯಂತ್ರೋಪಕರಣಗಳು ಮತ್ತು ಸಿಬ್ಬಂದಿ ನಿಯೋಜನೆ ಮಾಡಿಕೊಂಡು ತ್ವರಿತವಾಗಿ ಕಾರ್ಯ ನಿರ್ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ ಒತ್ತುವರಿ ತೆರವು ಕಾರ್ಯಾಚರಣೆ ಮಾಡಿರುವ ಸ್ಥಳಗಳಲ್ಲಿ ಬೃಹತ್ ಮಳೆ ನೀರು ಕಾಲುವೆ ವಿಭಾಗದಿಂದ ಕೂಡಲೇ ಕಾಲುವೆ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಿ” ಎಂದು ಸೂಚನೆ ನೀಡಿದರು.

ಈ ವೇಳೆ ವಲಯ ಜಂಟಿ ಆಯುಕ್ತ ವೆಂಕಟಾ ಚಲಪತಿ, ಮುಖ್ಯ ಎಂಜಿನಿಯರ್ ಬಸವರಾಜ್ ಕಬಾಡೆ ಇದ್ದರು.

ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | ಚಿಕ್ಕಬಾಣಾವರದಲ್ಲಿ 290 ಮರಗಳು ಮಿಸ್ಸಿಂಗ್; ಎಲ್ಲಿ ಹೋದವೋ, ಕಣ್ಣಿಗೆ ಕಾಣದಾದವೋ!

ಸ್ಲ್ಯಾಬ್ ತೆರವು ಕಾರ್ಯ ಮುಂದುವರಿಕೆ

ಸರ್ಜಾಪುರ ರಸ್ತೆಯ ಗ್ರೀನ್ ಹುಡ್ ರೆಸಿಡೆನ್ಸ್ ಬಳಿ ಮಳೆ ನೀರು ಕಾಲುವೆಯ ಮೇಲೆ ಅಳವಡಿಸಿದ್ದ ಸ್ಲ್ಯಾಬ್ ತೆರವು ಕಾರ್ಯಾ ಬಹುತೇಕ ಪೂರ್ಣಗೊಂಡಿದ್ದು, ಸ್ಲ್ಯಾಬ್‌ಗೆ ಅಳವಡಿಸಿರುವ ಕಬ್ಬಿಣದ ಕಂಬಿಗಳನ್ನು ತೆರವುಗೊಳಿಸಬೇಕಿದೆ. 

ಜತೆಗೆ ಮಳೆ ನೀರು ಕಾಲುವೆಯ ಮೇಲೆ ಅಳವಡಿಸಿರುವ ಸ್ಲ್ಯಾಬ್ ಮೇಲ್ಭಾಗದಲ್ಲಿ ಹಸಿರೀಕರಣ ಮಾಡಿದ್ದು, ಅದನ್ನು ತೆರವುಗೊಳಿಸಿ ನಂತರ ಬಾಕಿಯಿರುವ ಸ್ಲ್ಯಾಬ್ ತೆರವು ಕಾರ್ಯ ನಡೆಯಲಿದೆ. ಮಾರತಹಳ್ಳಿ ಪೊಲೀಸ್ ಠಾಣೆಯ ಹಿಂಭಾಗ, ಜಲಮಂಡಳಿ ಎಸ್‌ಟಿಪಿ ಬಳಿ ರಾಜಕಾಲುವೆಯ ಮೇಲೆ ನಿರ್ಮಾಣ ಮಾಡಿರುವ ಸೇತುವೆ ತೆರವು ಮಾಡಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್