ಬೆಂಗಳೂರು | ಚಿಲ್ಲರೆ ವ್ಯಾಪಾರಿಗಳಿಂದ ಡೀಸೆಲ್ ಪೂರೈಕೆ ಸ್ಥಗಿತ : ಬಿಎಂಟಿಸಿ ಬಸ್‌ಗಳ ಸಂಚಾರಕ್ಕೂ ಕುತ್ತು

  • ಚಿಲ್ಲರೆ ವ್ಯಾಪಾರಿಗಳಿಂದ ಡಿಪೋ ಬಂಕ್‌ಗಳಿಗೆ ಡೀಸೆಲ್ ಪೂರೈಕೆ ಸ್ಥಗಿತ
  • ಸಗಟು ದರದಲ್ಲಿ ಖರೀದಿಸುವಂತೆ ಇಂಧನ ಕಂಪನಿಗಳ ಪರೋಕ್ಷ ಒತ್ತಡ?

ಡೀಸೆಲ್ ಕೊರತೆಯಿಂದ ಬಿಎಂಟಿಸಿ ಬಸ್‌ಗಳ ಸಂಚಾರಕ್ಕೂ ಕುತ್ತು ಬಂದಿದೆ. ಡಿಪೋ ಬಂಕ್‌ಗಳಲ್ಲಿ ಇಂಧನ ಖಾಲಿಯಾದ ಕಾರಣ ಡೀಸೆಲ್‌ಗಾಗಿ ಪೆಟ್ರೋಲ್ ಬಂಕ್‌ಗಳ ಬಳಿ ಬಿಎಂಟಿಸಿ ಬಸ್‌ಗಳು ಕಾದು ನಿಲ್ಲುವಂತಾಗಿದೆ.

ಎಚ್‌ಪಿಸಿಎಲ್‌ನಿಂದ ಇಂಧನ ಖರೀದಿಸುತ್ತಿದ್ದ ಬಿಎಂಟಿಸಿ, ₹70 ಕೋಟಿ ಬಾಕಿ ಉಳಿಸಿಕೊಂಡಿದೆ. ಸದ್ಯ ಸಗಟು ಖರೀದಿ ದರ ಪ್ರತಿ ಲೀಟರ್‌ ಡೀಸೆಲ್‌ಗೆ ₹119 ಆಗಿದೆ. ಚಿಲ್ಲರೆ ವ್ಯಾಪಾರದಲ್ಲಿ ಡೀಸೆಲ್ ದರ ಲೀಟರ್‌ಗೆ ₹ 87 ಇದೆ. ಇದರಿಂದಾಗಿ ಬಿಎಂಟಿಸಿ, ಚಿಲ್ಲರೆ ವ್ಯಾಪಾರಿಗಳಿಂದಲೇ ಡೀಸೆಲ್ ಖರೀದಿಸಿ ಬಸ್‌ಗಳ ಸಂಚಾರವನ್ನು ಸುಗಮ ಮಾಡಿಕೊಂಡಿತ್ತು. ಚಿಲ್ಲರೆ ವ್ಯಾಪಾರಿಗಳೇ ಟ್ಯಾಂಕರ್‌ಗಳಲ್ಲಿ ಪ್ರತಿದಿನ ಸಂಸ್ಥೆಗಳ ಡಿಪೋಗಳಲ್ಲಿರುವ ಬಂಕ್‌ಗಳಿಗೆ ಪೂರೈಕೆ ಮಾಡುತ್ತಿದ್ದರು. ಸಂಸ್ಥೆಯು ಅಂದಿನ ಡೀಸೆಲ್ ಮೊತ್ತವನ್ನು ಅಂದೇ ಪಾವತಿಸುತ್ತಿತ್ತು. ಈ ಪ್ರಕ್ರಿಯೆ ಎರಡು ತಿಂಗಳಿಂದ ನಡೆಯುತ್ತಿತ್ತು.

ಎರಡು ದಿನಗಳಿಂದ ಬಂಕ್‌ಗಳಿಗೆ ಡೀಸೆಲ್ ಪೂರೈಕೆ ಮಾಡುವುದನ್ನು ಚಿಲ್ಲರೆ ವ್ಯಾಪಾರಿಗಳು ಸ್ಥಗಿತಗೊಳಿಸಿದ್ದಾರೆ. ಡಿಪೋಗಳ ಬಂಕ್‌ಗಳಲ್ಲಿ ಡೀಸೆಲ್ ಖಾಲಿಯಾಗಿ ಬಸ್‌ಗಳು ಡಿಪೋ ಸಮೀಪದ ಪೆಟ್ರೋಲ್ ಬಂಕ್‌ಗಳಲ್ಲಿ ಸಾಲುಗಟ್ಟಿ ನಿಲ್ಲುವಂತಾಗಿದೆ. ಇದರಿಂದಾಗಿ ಬಂಕ್‌ಗಳ ಮುಂದೆ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಪೀಣ್ಯದಲ್ಲಿ ಶನಿವಾರ ಬಹುತೇಕ ಪೆಟ್ರೋಲ್ ಬಂಕ್‌ಗಳಲ್ಲಿ ಬಿಎಂಟಿಸಿ ಬಸ್‌ಗಳ ಸಾಲು ಇತ್ತು ಎಂದು ವರದಿಯಾಗಿದೆ.

"ಸಗಟು ಡೀಸೆಲ್ ದರವನ್ನು ಲೀಟರ್‌ಗೆ ₹ 119ಕ್ಕೆ ಏರಿಸಲಾಗಿದೆ. ಚಿಲ್ಲರೆಯಾಗಿ ನಮಗೆ ₹87ಕ್ಕೆ ಒಂದು ಲೀಟರ್‌ ಡೀಸೆಲ್‌ ಸಿಗುತ್ತಿದೆ. ದುಬಾರಿ ಮೊತ್ತದಲ್ಲೇ ನಾವು ಡೀಸೆಲ್ ಖರೀದಿ ಮಾಡಬೇಕಾದ ಅನಿವಾರ್ಯವನ್ನು ಕಂಪನಿಗಳು ಸೃಷ್ಟಿಸುತ್ತಿವೆ. ಇಂಧನ ಕಂಪನಿಗಳು ಚಿಲ್ಲರೆ ವ್ಯಾಪಾರಿಗಳನ್ನೂ ಬೆದರಿಸಿ ನಮಗೆ ಪೂರೈಕೆ ಸ್ಥಗಿತವಾಗುವಂತೆ ಮಾಡಿವೆ’ ಎಂದು ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕರು ದೂರುತ್ತಿದ್ದಾರೆ.

"ಸ್ಥಳೀಯ ಡಿಪೋಗಳಲ್ಲಿನ ಬಂಕ್‌ಗಳಿಗೆ ಟ್ಯಾಂಕರ್‌ಗಳ ಮೂಲಕ ಡೀಸೆಲ್‌ ಪೂರೈಸುತ್ತಿದ್ದ ವ್ಯಾಪಾರಿಗಳಿಗೆ ಕಂಪನಿಗಳು ಬೆದರಿಕೆ ಹಾಕುತ್ತಿವೆ. ಬಿಎಂಟಿಸಿಗೆ ಡೀಸೆಲ್ ಪೂರೈಸಿದರೆ ಪರವಾನಗಿ ರದ್ದುಪಡಿಸುವ ಬೆದರಿಕೆ ಹಾಕುತ್ತಿವೆ. ಇದರಿಂದಾಗಿ ವ್ಯಾಪಾರಿಗಳು ನಮಗೆ ಡೀಸೆಲ್ ಪೂರೈಸಲು ಹೆದರುತ್ತಿದ್ದಾರೆ" ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ ಸತ್ಯವತಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಸಮಸ್ಯೆ ಸರಿಪಡಿಸುವ ಸಂಬಂಧ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಮತ್ತು ರಾಜ್ಯದಲ್ಲಿರುವ ಎಲ್ಲ ತೈಲ ಕಂಪನಿಗಳ ಸಮನ್ವಯಕಾರರಿಗೆ ಸಾರಿಗೆ ಸಂಸ್ಥೆಯು ಪತ್ರ ಬರೆದಿದೆ. ಸಮಸ್ಯೆ ಸರಿಪಡಿಸದಿದ್ದರೆ ಬಸ್‌ಗಳನ್ನು ರಸ್ತೆಗೆ ಇಳಿಸುವುದು ಕಷ್ಟವಾಗಲಿದೆ ಎಂದು ಚಾಲಕರು ಹೇಳುತ್ತಿದ್ದಾರೆ. ಖಾಸಗಿ ಪೆಟ್ರೋಲ್ ಬಂಕ್‌ಗಳಿಗೆ ಬಸ್‌ಗಳು ಹೋದರೆ ಸಂಚಾರ ದಟ್ಟಣೆ ಸಮಸ್ಯೆಯೂ ಹೆಚ್ಚಾಗಲಿದೆ. ಈ ಕುರಿತು ಸಾರಿಗೆ ಸಂಸ್ಥೆಯು ಪೊಲೀಸ್ ಆಯುಕ್ತರಿಗೂ ಪತ್ರ ಬರೆದಿದೆ, 

ಸಾರಿಗೆ ಸಂಸ್ಥೆಗಳ ಸಮಸ್ಯೆ ಒಂದೆಡೆಯಾದರೆ, ಇನ್ನೊಂದೆಡೆ ಪೆಟ್ರೋಲ್ ಬಂಕ್‌ಗಳಿಗೂ ಡೀಸೆಲ್ ಮತ್ತು ಪೆಟ್ರೋಲ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ನಗರದಲ್ಲಿ ಹಲವು ಬಂಕ್‌ಗಳಲ್ಲಿ ಇಂಧನ ಖಾಲಿ ಎಂಬ ಫಲಕಗಳನ್ನು ಹಾಕಲಾಗಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಿ: ಮುಖ್ಯಮಂತ್ರಿ ಬೊಮ್ಮಾಯಿ ಸೂಚನೆ

ಕೆಲವು ಡಿಪೊಗಳಲ್ಲಿ ಮೂರು ದಿನಕ್ಕೆ ಸಾಕಾಗುವಷ್ಟು ದಾಸ್ತಾನು ಇದ್ದರೆ, ಇನ್ನೂ ಕೆಲವು ಡಿಪೊಗಳಲ್ಲಿ ಡೀಸೆಲ್ ಖಾಲಿಯಾಗಿದೆ. ಭಾನುವಾರ ಕಾರ್ಯಾಚರಣೆ ಶೇ 20ರಷ್ಟು ಕಡಿಮೆ ಇರಲಿದ್ದು, ತೊಂದರೆ ಕಾಣಿಸುವುದಿಲ್ಲ. ಆದರೆ, ಸೋಮವಾರದ ತನಕ ಸಮಸ್ಯೆ ಪರಿಹಾರವಾಗದಿದ್ದರೆ ಬಸ್‌ಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗಿ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್