ಬೆಂಗಳೂರು | ‍ಲೈನ್‌ ಕ್ಲಿಯರೆನ್ಸ್‌ಗೆ ₹50 ಸಾವಿರ ಲಂಚ ಬೇಡಿಕೆ: ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ ಎಂಜಿನಿಯರ್

  • ಎಲ್‌ಸಿ ನೀಡಲು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟ ಬೆಸ್ಕಾಂ ಎಂಜಿನಿಯರ್
  • ಅ.20ರಂದು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ ಕುಮಾರ್

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ)ಯ ಎಕ್ಸಿಕ್ಯೂಟಿವ್ ಎಂಜಿನಿಯರ್ (ಎಇ) ಒಬ್ಬರು ಬಹುಮಹಡಿ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಲೈನ್ ಕ್ಲಿಯರೆನ್ಸ್ (ಎಲ್‌ಸಿ) ನೀಡಲು ಗುತ್ತಿಗೆದಾರನಿಂದ ₹50 ಸಾವಿರ ಲಂಚ ಸ್ವೀಕರಿಸಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬೆಸ್ಕಾಂ ಬಿಳೇಕಹಳ್ಳಿ ಉಪವಿಭಾಗದ ಎಇ ಎನ್. ನಾಗರಾಜು ಬಂಧಿತ ಆರೋಪಿ. ಬೇಗೂರು ಹೋಬಳಿ ಕೋಡಿಚಿಕ್ಕನಹಳ್ಳಿ ಗ್ರಾಮದಲ್ಲಿ ಅಬ್ದುಲ್ ರಹೀಮ್ ಅವರಿಗೆ ಸೇರಿದ ಸೈಟ್‌ನಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣವಾಗಿದ್ದು, ಎಚ್.ಎಸ್. ಕುಮಾರ್ ಅವರು ಎಲೆಕ್ಟ್ರಿಕಲ್ ಕೆಲಸದ ಗುತ್ತಿಗೆಯನ್ನು ಪಡೆದುಕೊಂಡಿದ್ದರು. ಕಟ್ಟಡಕ್ಕೆ 37 ಕಿಲೋವ್ಯಾಟ್ ವಿದ್ಯುತ್ ಮಂಜೂರಾತಿ ಪಡೆಯಲಾಗಿತ್ತು. ಆದರೆ, ಕಾರಣಾಂತರಗಳಿಂದ ಕೆಲಸ ಸ್ಥಗಿತವಾಗಿತ್ತು.

Eedina App

ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಒಂದು ತಿಂಗಳ ಹಿಂದೆ ಗುತ್ತಿಗೆದಾರ ಕುಮಾರ್ ಮುಂದಾಗಿದ್ದರು. ಹಾಗಾಗಿ, ಅಗತ್ಯವಾದ ಎಲ್‌ಸಿ ಪಡೆಯಲು ಬೆಸ್ಕಾಂ ಕಚೇರಿಗೆ ಮನವಿ ಸಲ್ಲಿಸಿದ್ದರು.

ಎಲ್‌ಸಿ ನೀಡಲು ಒಪ್ಪದ ಎಇ ನಾಗರಾಜು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಬೇಡಿಕೆ ಇಟ್ಟಿರುವ ಆಡಿಯೊ ಸಮೇತ ಕುಮಾರ್ ಅ.20ರಂದು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

AV Eye Hospital ad

ದೂರು ನೀಡಿದ ಹಿನ್ನೆಲೆ, ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಡಿವೈಎಸ್ಪಿ ಅಂಟೋನಿ ಜಾನ್ ನೇತೃತ್ವದ ತಂಡ, ಗುರುವಾರ ರಾತ್ರಿ ಎಇ ನಾಗರಾಜು ಅವರು ದೂರುದಾರ ಕುಮಾರ್ ಅವರಿಂದ ರಾಜರಾಜೇಶ್ವರಿ ನಗರದಲ್ಲಿ ₹50 ಸಾವಿರ ಲಂಚ ಪಡೆಯುವ ವೇಳೆ ಕಾರ್ಯಾಚರಣೆ ಮಾಡಿ ಆರೋಪಿ ನಾಗರಾಜು ಅವರನ್ನು ಬಂಧಿಸಿದ್ದಾರೆ. 

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬಳಗೆರೆ ರಸ್ತೆ ಅವ್ಯವಸ್ಥೆ: ಕೆಸರಿನಲ್ಲಿ ಸಿಲುಕಿ ಪರದಾಡಿದ ಶಾಲಾ ಬಸ್‌

ಲಂಚ ಪಡೆದ ಆರೋಪಿ ನಾಗರಾಜು ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಪ್ರಕರಣದ ಕುರಿತಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. 2017ರಲ್ಲಿ ಬೆಸ್ಕಾಂನಲ್ಲಿ ಶಾಖಾಧಿಕಾರಿಯಾಗಿ ಆರೋಪಿ ಎಇ ನಾಗರಾಜು ಕಾರ್ಯನಿರ್ವಹಿಸುತ್ತಿದ್ದರು. ಈ ಹಿಂದೆಯೂ ವ್ಯಕ್ತಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app