ಬೆಂಗಳೂರು | ಭಾರೀ ಮಳೆಗೆ ಕುಸಿದುಬಿದ್ದ ಶಿಥಿಲಗೊಂಡಿದ್ದ ಮೂರಂತಸ್ತಿನ ಕಟ್ಟಡ; ಪ್ರಾಣಾಪಾಯವಿಲ್ಲ

avenue road
  • ನೋಟಿಸ್ ನೀಡಿದರು ತೆರವುಗೊಳಿಸದೆ ನಿರ್ಲಕ್ಷ್ಯ
  • ಕೆಳ ಮಹಡಿಯಲ್ಲಿದ್ದ 'ಫ್ಯಾನ್ಸಿ' ಸಾಮಾಗ್ರಿಗಳು ನೆಲಸಮ

ಹಲವು ದಿನಗಳಿಂದ ಬೆಂಗಳೂರಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಬೆಳಿಗ್ಗೆ ಮೋಡ ಕವಿದ ವಾತಾವರಣವಿದ್ದರೆ, ಮಧ್ಯಾಹ್ನ ಹಾಗೂ ಸಂಜೆ ಸಮಯಕ್ಕೆ ಸುರಿಯುವ ಮಳೆ, ರಸ್ತೆಗಳಲ್ಲಿ ನೀರು ತುಂಬಿಕೊಂಡು ಸಂಚಾರದಟ್ಟಣೆ ಉಂಟಾಗುತ್ತಿದೆ. ಬಡಾವಣೆಗಳು ಜಲಾವೃತಗೊಂಡಿದೆ. ಶಿಥಿಲಗೊಂಡ ಮನೆಗಳು ಕುಸಿದಿದ್ದು, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಅವಘಡಗಳಿಂದ ನಗರ ನಿವಾಸಿಗಳು ಪ್ರತಿದಿನವೂ ಪರದಾಡುವಂತಾಗಿದೆ.

ಭಾರಿ ಮಳೆಯಿಂದಾಗಿ, ಅವೆನ್ಯೂ ರಸ್ತೆಯಲ್ಲಿ ಶಿಥಿಲಗೊಂಡಿದ್ದ ಮೂರು ಅಂತಸ್ತಿನ ಕಟ್ಟಡ ಆಗಸ್ಟ್ 6ರ ಮುಂಜಾನೆ 3ಕ್ಕೆ ಕುಸಿದುಬಿದ್ದಿದೆ. ಕಟ್ಟಡದ ನೆಲಮಹಡಿಯಲ್ಲಿದ್ದ ಮೂರು ಅಂಗಡಿಗಳೂ ನೆಲಸಮಗೊಂಡಿವೆ. ಅದೃಷ್ಟವಶಾತ್ ಘಟನೆ ಸಂಭವಿಸಿದ ವೇಳೆ ಯಾರಿಗೂ ಪ್ರಾಣ ಹಾನಿಯಾಗಿಲ್ಲ. 

ನಗರದ ಅವೆನ್ಯೂ ರಸ್ತೆಯ ಬೆಳ್ಳಿ ಬಸವ ದೇವಸ್ಥಾನ ಬಳಿ ಇದ್ದ ಮೂರು ಅಂತಸ್ತಿನ ಕಟ್ಟಡವು ಭಂಡಾರಿ, ಅಶೋಕ್‌ಕುಮಾರ್‌, ಪ್ರತೀಕ್‌ ಮತ್ತು ವಿಮಲ್‌ ಚಂದ್‌ ಎಂಬುವವರಿಗೆ ಸೇರಿದ್ದಾಗಿದೆ. ಕಟ್ಟಡ ಮಾಲೀಕರು ನೆಲಮಹಡಿಯಲ್ಲಿ ಬಟ್ಟೆ, ಫ್ಯಾನ್ಸಿ ಸ್ಟೋರ್‌ ಹಾಗೂ ಪ್ಲಾಸ್ಟಿಕ್‌ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಹೊಂದಿದ್ದರು. 

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಭಾರಿ ಮಳೆ ಬೆಂಗಳೂರಿಗೆ 'ಯೆಲ್ಲೋ ಅಲರ್ಟ್‌' ಘೋಷಿಸಿದ ಹವಾಮಾನ ಇಲಾಖೆ

"ವಿಮಲ್‌ ಚಂದ್‌ ಮಾಲೀಕತ್ವದ ಮೊದಲ ಮತ್ತು ಎರಡನೇ ಮಹಡಿ ಖಾಲಿಯೇ ಇತ್ತು. ಅಂತಸ್ತಿನ ನೆಲ ಮಹಡಿಯಲ್ಲಿ ಫ್ಯಾನ್ಸಿ ವಸ್ತುಗಳು, ಪ್ಲಾಸ್ಟಿಕ್‌ ಉತ್ಪನ್ನಗಳ ವ್ಯಾಪಾರ ಮಾಡಲಾಗುತ್ತಿತ್ತು. ಆದರೆ, ಮಳೆಯಿಂದ ಮೊದಲೇ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡವು ಏಕಾಏಕಿ ಕುಸಿದು ಬಿದ್ದಿದೆ. ಇದರಿಂದಾಗಿ, ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದ ವಸ್ತುಗಳು ಕಟ್ಟಡದ ಅವಶೇಷಗಳಡಿ ಸಿಲುಕಿ ಸಂಪೂರ್ಣ ಹಾಳಾಗಿವೆ" ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

"ಕಟ್ಟಡ ತೆರವುಗೊಳಿಸುವಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಮೊದಲೇ ನೋಟಿಸ್ ನೀಡಿದ್ದರು. ಆದರೆ, ಕಟ್ಟಡವು 4 ಮಂದಿ ಮಾಲೀಕರ ಒಡೆತನಕ್ಕೆ ಸೇರಿದ್ದು, 4 ಮಂದಿ ಮಾಲೀಕರ ಮನಸ್ತಾಪದಿಂದ ಕಟ್ಟಡ ತೆರವು ಮಾಡದೇ ಹಾಗೆ ಉಳಿದ ಕಾರಣ ಈ ಅವಘಡಕ್ಕೆ ಕಾರಣವಾಗಿದೆ" ಎಂದರು.

ಕುಸಿದ ಕಟ್ಟಡದಿಂದಾಗಿ ಸುತ್ತಮುತ್ತಲಿನ ಮನೆಗಳ ತಳಪಾಯಕ್ಕೆ ಧಕ್ಕೆ ಆಗುವ ಸ್ಥಿತಿ ನಿರ್ಮಾಣವಾಗಿದ್ದು, ಅವರು ಭಯ ಭೀತಾರಾಗಿದ್ದಾರೆ. "ಸಂಬಂಧಪಟ್ಟ ಅಧಿಕಾರಿಗಳು, ಕಟ್ಟದ ಭಗ್ನಾವಶೇಷವನ್ನು ಸ್ಥಳಾಂತರಿಸಿ ಮನೆಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು" ಎಂದು ನಿವಾಸಿಗಳು ಆಗ್ರಹಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್