ಬೆಂಗಳೂರು | ವೀಕೆಂಡ್ ಡಿಜೆ ಪಾರ್ಟಿ ಹೆಸರಲ್ಲಿ ಉಳ್ಳವರ ಚೆಲ್ಲಾಟ; ವಾಹನ ಸವಾರರಿಗೆ ಪ್ರಾಣ ಸಂಕಟ

dj party at tumkur road
  • ಪಾರ್ಟಿಯಿಂದಾಗಿ ತುಮಕೂರು ರಸ್ತೆಯಲ್ಲಿ 10 ಕಿ.ಮೀ. ಸಂಚಾರ ದಟ್ಟಣೆ ಉಂಟಾಗಿತ್ತು
  • 15 ಸಾವಿರಕ್ಕೂ ಹೆಚ್ಚು ಯುವಕ, ಯುವತಿಯರು ಡಿಜೆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು

ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಬಳಿ ಇರುವ ಬಿಐಇಸಿ ಮೈದಾನದಲ್ಲಿ ವಾರಾಂತ್ಯದಲ್ಲಿ ಡಿಜೆ ಸ್ನೇಕ್ ಪಾರ್ಟಿಯಿಂದಾಗಿ ರಾತ್ರಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ವಾಹನ ಸವಾರರು ಗಂಟೆಗಟ್ಟಲೇ ನಿಂತಲ್ಲೇ ನಿಂತು ಪ್ರಾಣ ಸಂಕಟ ಅನುಭವಿಸಿದರು. 

ನೈಸ್ ರಸ್ತೆ ಬಿಐಇಸಿ ಮೈದಾನದಲ್ಲಿ ವೀಕೆಂಡ್ ಡಿಜೆ ಸ್ನೇಕ್ ಪಾರ್ಟಿ ಆಯೋಜಿಸಲಾಗಿತ್ತು. ದೊಡ್ಡ ಸಂಖ್ಯೆಯಲ್ಲಿ ಯುವಕ ಯುವತಿಯರು ಪಾರ್ಟಿಯಲ್ಲಿ ಪಾಲ್ಗೊಂಡು ಕುಣಿದು ಕುಪ್ಪಳಿಸಿದ್ದರು. ಡಿ ಜೆ ಪಾರ್ಟಿಗೆ ಹೋಗಿಬರುವವರ ಕಾರುಗಳು ಮಧ್ಯರಾತ್ರಿವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಲೇ ಇದ್ದವು.    

15 ಸಾವಿರಕ್ಕೂ ಹೆಚ್ಚು ಯುವಕ - ಯುವತಿಯರು ಪಾಲ್ಗೊಂಡಿದ್ದ ಡಿಜೆ ಪಾರ್ಟಿಯಿಂದ ನೆರೆದಿದ್ದ ತುಮಕೂರು ರಸ್ತೆಯಲ್ಲಿ 10 ಕಿಮೀ ನಷ್ಟು ಸಂಚಾರ ದಟ್ಟಣೆ ಉಂಟಾಗಿತ್ತು. ಹೆಚ್ಚೂ ಕಡಿಮೆ ನೆಲಮಂಗಳದಿಂದಲೂ ವಾಹನಗಳು ತೆವಳಿಕೊಂಡು ಸಾಗುತ್ತಿದ್ದವು. ತುಮಕೂರು ಕಡೆ ಹೋಗುತ್ತಿದ್ದ ರಸ್ತೆ ಮತ್ತು ತುಮಕೂರು ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ರಸ್ತೆ.. ಹೀಗೆ ರಸ್ತೆಯ ಎರಡೂ ಕಡೆ ವಾಹನ ದಟ್ಟಣೆ ಉಂಟಾಗಿತ್ತು.

ವಾರಾಂತ್ಯಕ್ಕಾಗಿ ತಮ್ಮ ತಮ್ಮ ಊರು, ಮನೆಗಳಿಗೆ ಹೋಗಿದ್ದ ಜನ ಭಾನುವಾರ ರಾತ್ರಿ ಬೆಂಗಳೂರಿಗೆ ವಾಪಸ್ ಬರುವುದರಿಂದ ವೀಕೆಂಡ್‌ನಲ್ಲಿ ಈ ರಸ್ತೆಯಲ್ಲಿ ಮಾಮೂಲಿಗಿಂತ ಕೊಂಚ ಹೆಚ್ಚು ವಾಹನ ದಟ್ಟಣೆ ಇರುತ್ತದೆ. ಆದರೆ, ನಿನ್ನೆ ಡಿಜೆ ಪಾರ್ಟಿಯ ಜನಜಂಗುಳಿಯೂ ಸೇರಿ ಕಾರು, ಬೈಕ್, ಬಸ್ಸುಗಳು ನಿಂತಲ್ಲೇ ಗಂಟೆಗಟ್ಟಲೇ ನಿಂತು ಜನ ನರಕ ಅನುಭವಿಸಿದರು.

ಈ ಸುದ್ದಿ ಓದಿದ್ದೀರಾ?:ಬೆಂಗಳೂರು | ಫೆ.13 ರಿಂದ 'ಏರೋ ಇಂಡಿಯಾ ವೈಮಾನಿಕ ಪ್ರದರ್ಶನ-2023' ಆರಂಭ

ಇಂತಹ ಡಿಜೆ ಪಾರ್ಟಿ ಅಥವಾ ಇನ್ನಿತರ ಸಮಾರಂಭಗಳ ವೇಳೆ ಪದೇ ಪದೇ ನಾಗರಿಕರಿಗೆ ರಸ್ತೆಯಲ್ಲಿ ಸಂಚರಿಸಲು ತೊಡಕುಂಟಾಗುತ್ತಿದೆ. ಇದರ ಬಗ್ಗೆ ಬೆಂಗಳೂರು ಸಂಚಾರ ಪೊಲೀಸರು ಗಂಭೀರವಾಗಿ ಚಿಂತಿಸಿ, ಇಂತಹ ಸಮಯದಲ್ಲಿ ಪರ್ಯಾಯ ಮಾರ್ಗಗಳನ್ನು ಬಳಸುವ ಯೋಜನೆ ರೂಪಿಸಬೇಕು ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ಬಸವೇಶ್ವರ ನಗರ ನಿವಾಸಿ ಜಗದೀಶ್, "ಡಿಜೆ ಪಾರ್ಟಿಯಿಂದಾಗಿ ರಾತ್ರಿ 8 ಗಂಟೆಗೆ ಮನೆ ಮುಟ್ಟಬೇಕಾಗಿದ್ದ ನಾನು ಮಧ್ಯರಾತ್ರಿ 1 ಗಂಟೆಗೆ ಮನೆಗೆ ಹೋದೆ. ಅಷ್ಟು ಹೊತ್ತು ಕಾರಿನಲ್ಲೇ ನಿಧಾನಕ್ಕೆ ತೆವಳುತ್ತಾ ಸಾಗುವಾಗಿನ ನಮ್ಮ ನೋವು, ಸಂಕಟಕ್ಕೆ ಹೊಣೆ ಯಾರು? ಇಂಥ ಟ್ರಾಫಿಕ್‌ನಲ್ಲಿ ಹತ್ತಾರು ಸಲ ಓಡಾಡಿದರೆ, ನಮಗೆ ಬಿಪಿ, ಶುಗರ್ ಎಲ್ಲ ಬಂದು ನಾವು ಅರ್ಧ ವಯಸ್ಸಿಗೇ ಸಾಯುವುದು ನಿಶ್ಚಿತ. ಉಳ್ಳವರ ಮೋಜು ಮಸ್ತಿಗೆ ಅನುಮತಿ ಕೊಡುವ ಮೂಲಕ ಜನರನ್ನು ಇಂಥ ಸಂಕಟಕ್ಕೆ ದೂಡುವ ಸರ್ಕಾರ, ಅಧಿಕಾರಿಗಳನ್ನು ನ್ಯಾಯಾಲಯಗಳು ಕಠಿಣವಾಗಿ ಶಿಕ್ಷಿಸಬೇಕು" ಎಂದು ಆಕ್ರೋಶ ವ್ಯಕ್ತಪಡಿಸಿದರು.    

ನಿಮಗೆ ಏನು ಅನ್ನಿಸ್ತು?
0 ವೋಟ್
eedina app