
- ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ಮನವಿ
- ನ. 29 ರಂದು ವಿ ವಿ ಪುರಂನ ಸುಬ್ರಹ್ಮಣ್ಯ ಸ್ವಾಮಿ ಜಾತ್ರೆ
ಬೆಂಗಳೂರಿನ ವಿ ವಿ ಪುರಂನಲ್ಲಿ ಸುಬ್ರಹ್ಮಣ್ಯ ಸ್ವಾಮಿ ಜಾತ್ರೆ ನಡೆಯುತ್ತಿದ್ದು, ಈ ಜಾತ್ರೆಯಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ನೀಡಬೇಡಿ ಎಂದು ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ಮನವಿ ಮಾಡಿದೆ.
ಈ ಕುರಿತಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತು ನಗರದ ದಕ್ಷಿಣ ಭಾಗದ ಡಿಸಿಪಿ ಕೃಷ್ಣಕಾಂತ್ ಅವರಿಗೆ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ಮನವಿ ಸಲ್ಲಿಸಿವೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು| ಓಲಾ, ಉಬರ್ ಪ್ರಯಾಣ ದರ ಪರಿಷ್ಕರಣೆಗೆ ಅನುಮೋದನೆ: ಕನಿಷ್ಟ ದರದ ಮೇಲೆ ಶೇ.10ರಷ್ಟು ಹೆಚ್ಚಳ
ನವೆಂಬರ್ 29ರಂದು ವಿ ವಿ ಪುರಂನ ಸುಬ್ರಹ್ಮಣ್ಯ ಸ್ವಾಮಿ ಜಾತ್ರೆಯಲ್ಲಿ ಬೆಳ್ಳಿ ರಥೋತ್ಸವ ನಡೆಯಲಿದೆ. ಈ ಜಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹಿಂದೂಗಳು ಭಾಗಿಯಾಗಲಿದ್ದಾರೆ. ಹೀಗಾಗಿ, ಹಿಂದೂಗಳನ್ನು ಹೊರತುಪಡಿಸಿ, ಬೇರೆ ಯಾವ ಧರ್ಮದವರಿಗೂ ಜಾತ್ರೆಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಬೇಡಿ ಎಂದು ಭಜರಂಗದಳದ ಮುಖಂಡರಾದ ತೇಜಸ್ ಗೌಡ ಮತ್ತು ಶಿವು ಬಿಬಿಎಂಪಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಹಿಂದು ಜಾಗರಣಾ ವೇದಿಕೆ ಬ್ಯಾನರ್
ಕಳೆದ ಕೆಲವು ತಿಂಗಳುಗಳಿಂದ ಹಿಂದೂ ದೇವಾಲಯಗಳು ಹಾಗೂ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಬಾರದೆಂದು ಹಿಂದುತ್ವವಾದಿ ಸಂಘಟನೆಗಳು ಒತ್ತಾಯಿಸುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದಲ್ಲಿ ನ. 29ರಂದು ಚಂಪಾ ಷಷ್ಠಿ ಹಾಗೂ ಬ್ರಹ್ಮರಥೋತ್ಸವ ನಡೆಯಲಿದ್ದು, ಆ ವೇಳೆ, ಹಿಂದುಯೇತರ ವ್ಯಾಪಾರಿಗಳಿಗೆ ಅವಕಾಶವಿಲ್ಲವೆಂದು ಹಿಂದು ಜಾಗರಣಾ ವೇದಿಕೆ ಬ್ಯಾನರ್ ಹಾಕಿದೆ. ಬ್ಯಾನರ್ ಅಳವಡಿಕೆಯನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಸಮರ್ಥಿಸಿಕೊಂಡಿದ್ದಾರೆ.
ಈ ಹಿಂದೆ ಕಾಪು ಮಾರಿಗುಡಿ ದೇವಸ್ಥಾನದಲ್ಲಿಯೂ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದೆಂದು ಬ್ಯಾನರ್ ಅಳವಡಿಸಲಾಗಿತ್ತು. ಈ ವಿಚಾರ ರಾಜ್ಯಾದ್ಯಂತ ಬಾರಿ ಸದ್ದು ಮಾಡಿತ್ತು. ಪರ-ವಿರೋಧ ಚರ್ಚೆಗಳು ನಡೆದ ಬಳಿಕ ‘ಬ್ಯಾನ್ ಬ್ಯಾನರ್’ ವಿಷಯ ತೆರೆಮರೆಗೆ ಸರಿದಿತ್ತು.
ಇದೆಲ್ಲದರ ನಡುವೆ, ಬೆಂಗಳೂರಿನ ಕಡಲೆಕಾಯಿ ಪರಿಷೆಯಲ್ಲಿ ಅನ್ಯ ಧರ್ಮಿಯರು ವ್ಯಾಪಾರ ವಹಿವಾಟುಗಳಲ್ಲಿ ಭಾಗಿಯಾಗಿದ್ದರು. ಈ ಹಿನ್ನೆಲೆಯಲ್ಲಿ, ವಿವಿಪುರಂ ಸುಬ್ರಹ್ಮಣ್ಯ ಜಾತ್ರೆಯಲ್ಲಿ ಮುಸ್ಲಿಮರಿಗೆ ಅವಕಾಶ ನೀಡದಂತೆ ಮನವಿ ಸಲ್ಲಿಸಲಾಗಿದೆ.