
- ಐಡಿ ಕಾರ್ಡ್ ಹಂಚಿಕೆ ಮಾಡಿರುವುದು ಧೃಢವಾಗಿದೆ
- ನಾಲ್ಕು ತಂಡಗಳ ತನಿಖಾ ವರದಿ ಬಿಬಿಎಂಪಿ ಕೈಸೇರಿದೆ
ರಾಜಧಾನಿ ಬೆಂಗಳೂರಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ನಾಲ್ಕು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಮತದಾರರ ಪಟ್ಟಿ ಪರಿಷ್ಕರಣೆ ಹಗರಣದಲ್ಲಿ ಬಿಬಿಎಂಪಿಯ ಅಧಿಕಾರಿಗಳು ಶಾಮೀಲಾಗಿದ್ದು, 'ಚಿಲುಮೆ' ಸಂಸ್ಥೆಗೆ 'ಬಿಬಿಎಂಪಿಯ ಬೂತ್ ಮಟ್ಟದ ಅಧಿಕಾರಿಗಳು' (ಬಿಎಲ್ಒ) ಎಂದು ಐಡಿ ಕಾರ್ಡ್ ಹಂಚಿಕೆ ಮಾಡಿರುವುದು ತಿಳಿದುಬಂದಿದೆ.
ಮಹಾದೇವಪುರ ವಿಧಾನಸಭಾ ಕ್ಷೇತ್ರದ ಪ್ರಾದೇಶಿಕ ಅಧಿಕಾರಿ (ಆರ್ಓ) ಚಂದ್ರಶೇಖರ್, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಆರ್ಓ ಭೀಮಾಶಂಕರ್, ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಆರ್ಓ ಸುಹೇಲ್ ಅಹ್ಮದ್ ಅವರನ್ನು ಅಮಾನತು ಮಾಡಲಾಗಿದೆ. ಇನ್ನೂ ಸಾಕಷ್ಟು ಅಧಿಕಾರಿಗಳು ಅಮಾನತ್ತಾಗುವ ಸಾಧ್ಯತೆ ಇದೆ.
ಈ ಪ್ರಕರಣದ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, "ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ಕು ತಂಡಗಳ ತನಿಖಾ ವರದಿ ಬಿಬಿಎಂಪಿ ಕೈಸೇರಿದೆ. ಈ ವರದಿಗಳನ್ನು ಆಧರಿಸಿ ಅಂತಿಮ ವರದಿ ಸಿದ್ಧಪಡಿಸಲಾಗುತ್ತದೆ" ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆ: 'ಬಡವರ ಬಾದಾಮಿ'ಗಾಗಿ ಮುಗಿಬಿದ್ದ ಜನತೆ
"ಪ್ರಕರಣ ಸಂಬಂಧ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿತ್ತು. ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಒಂದು ತಂಡ ರಚನೆ ಮಾಡಿದ್ದೆವು. ಹೆಚ್ಚುವರಿ ಜಿಲ್ಲಾ ಚುಣಾವಣಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆದಿದೆ. ಎಷ್ಟು ಜನರಿಗೆ ಬಿಎಲ್ಒ, ಬಿಎಲ್ಸಿ ಕಾರ್ಡ್ ನೀಡಲಾಗಿದೆ ಹಾಗೂ ವೈಯಕ್ತಿಕ ಮಾಹಿತಿ ಸಂಗ್ರಹ ಮಾಡಿದ್ದಾರಾ ಎಂಬುದರ ಬಗ್ಗೆ ಸಮಗ್ರ ತನಿಖೆಯಾಗಿದೆ. ಈ ವರದಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಸಲ್ಲಿಸಲಾಗುವುದು" ಎಂದು ತಿಳಿಸಿದರು.