ಬೆಂಗಳೂರು | ಸ್ವಾತಂತ್ರ್ಯ ದಿನದಂದು ಕೆರೆ ಸ್ವಚ್ಛಗೊಳಿಸಿದ ಪರಿಸರ ಪ್ರಿಯರು

  • ತ್ಯಾಜ್ಯದಿಂದ ಕಪ್ಪುಬಣ್ಣಕ್ಕೆ ತಿರುಗಿದ್ದ ಹೊಸಕೆರೆಹಳ್ಳಿ ಕೆರೆ
  • ಕಾರ್ಖಾನೆಗಳಿಂದ ಹೊರಬರುವ ಕೊಳಚೆ ನೀರು

ರಾಜಧಾನಿಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವೈಭವದಿಂದ ಆಚರಿಸಲಾಗಿದ್ದು, ಇದರ ಅಂಗವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಪರಿಸರ ಪ್ರೇಮಿಗಳು ಹೊಸಕೆರೆಹಳ್ಳಿ ಸಮೀಪದ ಕೆರೆಯನ್ನು ಸ್ವಚ್ಛಗೊಳಿಸುವ ಮೂಲಕ ಅಮೃತ ಮಹೋತ್ಸವವನ್ನು ವಿಭಿನ್ನವಾಗಿ ಆಚರಿಸಿದ್ದಾರೆ.

ಸ್ವಚ್ಛತೆಯ ಅಭಿಯಾನದಲ್ಲಿ ಭಾಗಿಯಾಗಿದ್ದ ರಚನಾ ರವಿಕಿರಣ್ ಮಾತನಾಡಿ, "ರಾಜರಾಜೇಶ್ವರಿ ವಾರ್ಡ್ ವ್ಯಾಪ್ತಿಗೆ ಈ ಕೆರೆ ಸೇರುತ್ತದೆ. ಇಲ್ಲಿನ ನಿವಾಸಿಗಳು ತ್ಯಾಜ್ಯವನ್ನು ಎಸೆಯುವ ಮೂಲಕ ಮಾಲಿನ್ಯ ಮಾಡಿದ್ದಾರೆ. ಕಳೆದ ಕೆಲ ವಾರಗಳಿಂದ ಸುರಿದ ಭಾರೀ ಮಳೆಯಿಂದಾಗಿ ಕೆರೆಯು ದುರ್ನಾತದಿಂದ ಕೂಡಿದೆ. ಪ್ಲಾಸ್ಟಿಕ್ ಚೀಲ, ಬಾಟಲಿ, ಜ್ಯೂಸ್ ಡಬ್ಬಗಳಿಂದ ತುಂಬಿದ್ದು, ಕಪ್ಪು ಬಣ್ಣಕ್ಕೆ ತಿರುಗಿದೆ" ಎಂದು ತಿಳಿಸಿದರು.

ಕಳೆದ ತಿಂಗಳು ನಡೆದ ಕೆರೆ ಸ್ವಚ್ಛತೆಯಲ್ಲಿ ಇಲ್ಲಿನ ನಿವಾಸಿಗಳು ಸಹ ಭಾಗಿಯಾಗಿದ್ದರೆಂದು ತಿಳಿಸಿದ ಬಿಬಿಎಂಪಿ ಅಧಿಕಾರಿಗಳು, ಘನ ತ್ಯಾಜ್ಯವನ್ನು ಕೆರೆಗೆ ಎಸೆಯುವ ನಿವಾಸಿಗಳಿಗೆ ದಂಡ ವಿಧಿಸಲಾಗುವುದು ಎಂದು ಹೇಳಿದರು. ಇದರ ಜೊತೆಗೆ ಸ್ಥಳೀಯ ನಿವಾಸಿಗಳಿಗೆ ಕಸ ವಿಲೇವಾರಿಯ ಕುರಿತು ಜಾಗೃತಿ ಮೂಡಿಸಲಾಗಿದೆ ಎಂದರು. 

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಹೈಕೋರ್ಟ್‌ನಲ್ಲಿ ಬಿಬಿಎಂಪಿ ವಾರ್ಡ್‌ ವಿಂಗಡಣೆ ಕುರಿತ ಅರ್ಜಿ ಇಂದು ವಿಚಾರಣೆ

"ಕೆಲ ಕಾರ್ಖಾನೆಗಳು ಮತ್ತು ಸ್ಥಳೀಯ ನಿವಾಸಿಗಳ ಮನೆಗಳಿಂದ ಹರಿದು ಬರುವ ಕೊಳಚೆ ನೀರು, ಹೋಟೆಲ್ ಮಾಲೀಕರು ಆಹಾರವನ್ನು ಕೆರೆಯ ಸುತ್ತ ಚೆಲ್ಲುವುದು, ಇತ್ಯಾದಿ ತ್ಯಾಜ್ಯಗಳನ್ನು ಕೆರೆಗೆ ಸುರಿಯುವುದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಇತ್ತೀಚೆಗೆ ಕೆರೆಯನ್ನು ಬಿಬಿಎಂಪಿಗೆ ಹಸ್ತಾಂತರಿಸಲಾಗಿತ್ತು" ಎಂದು ವನ್ಯಜೀವಿ ಟ್ರಸ್ಟ್‌ ಸ್ವಯಂ ಸೇವಕ ಮಂಜುನಾಥ್ ಅವರಿಗೆ ಸ್ಥಳೀಯರು ದೂರು ನೀಡಿದರು. 

ಕೆರೆಯ ಸ್ವಚ್ಛತೆ ಕೈಗೊಳ್ಳುವುದಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಭರವಸೆ ನೀಡಿದ್ದು, ಬಹಳ ದಿನಗಳಾದರೂ, ಇನ್ನು ಕೆರೆಯ ದುರಸ್ಥಿ ಪ್ರಾರಂಭವಾಗಿಲ್ಲ ಎಂದು ಸ್ಥಳೀಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್