
- ರೈತರ ಹಿತದೃಷ್ಟಿಯಿಂದ ಹಾಲಿನ ದರ ಏರಿಕೆ ಮಾಡಲಾಗುವುದು
- 16 ಹಾಲು ಒಕ್ಕೂಟಗಳು ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿವೆ
ಕರ್ನಾಟಕ ಹಾಲು ಮಹಾ ಮಂಡಳಿ (ಕೆಎಂಎಫ್) ಶೀಘ್ರದಲ್ಲೇ ಹಾಲಿನ ಮಾರಾಟ ದರವನ್ನು ಲೀಟರ್ಗೆ ಕನಿಷ್ಠ ಮೂರು ರೂ. ಏರಿಸಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಭಾನುವಾರ (ಅ.31) ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಚನ್ನಮ್ಮನ ಕಿತ್ತೂರಿನ ಹೂಲಿಕಟ್ಟಿ ಕ್ರಾಸ್ನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಹೂಲಿಕಟ್ಟಿ ಶೀಥಲೀಕರಣ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿದ ನಂತರ ಹಾಲಿನ ದರ ಏರಿಕೆ ಕುರಿತು ಅವರು ಮಾತನಾಡಿದರು.
ಈ ಸುದ್ದಿ ಓದಿದ್ದೀರಾ?: ರಸ್ತೆ ಬದಿ ತ್ಯಾಜ್ಯ ಬೀಳುವುದನ್ನು ತಪ್ಪಿಸಲು 200 ಕಸದ ತೊಟ್ಟಿ ನಿರ್ಮಾಣಕ್ಕೆ ಮುಂದಾದ ಪಾಲಿಕೆ
ನಂದಿನಿ ಹಾಲಿನ ದರ ಪರಿಷ್ಕರಣೆ ಹಣ ಸಂಪೂರ್ಣವಾಗಿ ರೈತರಿಗೆ ಸಂದಾಯವಾಗಲಿದೆ. ರಾಜ್ಯದ 16 ಜಿಲ್ಲಾ ಹಾಲು ಒಕ್ಕೂಟಗಳು ಹಾಲಿನ ದರ ಪರಿಷ್ಕರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಸ್ತಾವನೆ ಸಲ್ಲಿಸಿವೆ. ರೈತರ ಹಿತದೃಷ್ಟಿಯಿಂದ ಹಾಲಿನ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ. ಹಾಲಿನ ದರ ಪರಿಷ್ಕರಣೆ ಸಂಬಂಧ ಈಗಾಗಲೇ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಈ ಹಿಂದೆಯು ಹಲವಾರು ಬಾರಿ ಹಾಲು ದರ ಏರಿಕೆ ಮಾಡಲು ಒಕ್ಕೂಟಗಳು ಪ್ರತಿಭಟನೆ ಮತ್ತು ಪ್ರಸ್ತಾವನೆ ಸಲ್ಲಿಸಿದ್ದವು. ಇದೀಗ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಹಾಲಿನ ದರ ಏರಿಕೆ ಶೀಘ್ರದಲ್ಲೇ ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.