ಬೆಂಗಳೂರು| ಅನಧಿಕೃತವಾಗಿ ಫ್ಲೆಕ್ಸ್‌ ಮತ್ತು ಬ್ಯಾನರ್ ಅಳವಡಿಸಿದವರ ವಿರುದ್ಧ ಎಫ್‌ಐಆರ್ ದಾಖಲು

  • ಜುಲೈ 26ರಿಂದ ಇಲ್ಲಿಯವರೆಗೆ ಒಟ್ಟು 2,519 ಫ್ಲೆಕ್ಸ್‌ಗಳ ತೆರವು
  • ಈದ್ಗಾ ಮೈದಾನ ವಿವಾದ ಶೀಘ್ರ ಇತ್ಯರ್ಥವಾಗಲಿದೆ

ಬೆಂಗಳೂರಿನಲ್ಲಿ ಅನಧಿಕೃತವಾಗಿ ಫ್ಲೆಕ್ಸ್‌ ಮತ್ತು ಬ್ಯಾನರ್ ಅಳವಡಿಸಿದ್ದ ಒಟ್ಟು 28 ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.

“ನಗರದಲ್ಲಿ ಎಲ್ಲೆಂದರಲ್ಲಿ ಅಳವಡಿಸುವ ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳ ತೆರವು ಕಾರ್ಯಚರಣೆ ಚುರುಕುಗೊಳಿಸಲಾಗಿದೆ. ಜುಲೈ 26ರಿಂದ ಇಲ್ಲಿಯವರೆಗೆ ಒಟ್ಟು 2,519 ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗಿದೆ” ಎಂದರು.

“ಈ ಕುರಿತು ಬಿಬಿಎಂಪಿ ಹಲವು ಬಾರಿ ಎಚ್ಚರಿಕೆ ನೀಡಿದರೂ, ಫ್ಲೆಕ್ಸ್‌ ಮತ್ತು ಬ್ಯಾನರ್ ಅಳವಡಿಸುವುದು ಹೆಚ್ಚಾಗುತ್ತಿದೆ. ಇವುಗಳನ್ನು ತೆರವುಗೊಳಿಸುವುದೇ ಕೆಲಸವಾಗಿದೆ. ಇನ್ನು ಮುಂದೆ ನಿಯಮ ಉಲ್ಲಂಘಿಸಿದರೆ, ದಂಡ ಹಾಕುವ ಜತೆಗೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ. ಬ್ಯಾನರ್ ಹಾಗೂ ಫ್ಲೆಕ್ಸ್‌ ತೆರವಿಗೆ ತಗಲುವ ವೆಚ್ಚವನ್ನು ಅವರಿಂದಲೇ ವಸೂಲಿ ಮಾಡಬೇಕಾಗುತ್ತದೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಒಂದು ನಿಮಿಷದ ಓದು | ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ

ಈದ್ಗಾ ಮೈದಾನ ವಿವಾದ

"ಈದ್ಗಾ ಮೈದಾನ ವಿವಾದ ಶೀಘ್ರ ಇತ್ಯರ್ಥವಾಗಲಿದೆ. ವಕ್ಫ್ ಮಂಡಳಿ ಖಾತೆ ಬದಲಾವಣೆ ಕೋರಿ ಅರ್ಜಿ ಸಲ್ಲಿಸಿದೆ. ಈ ಕುರಿತಂತೆ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತರು ನಿರ್ಧಾರ ಕೈಗೊಳ್ಳಲಿದ್ದಾರೆ" ಎಂದು ಅವರು ಮಾಹಿತಿ ನೀಡಿದರು.

"ಸುಪ್ರೀಂ ಕೋರ್ಟ್ ಮೈದಾನದ ಒಡೆತನಕ್ಕೆ ಸಂಬಂಧಿಸಿದಂತೆ ಪಾಲಿಕೆಗೆ ನಿರ್ಬಂಧ ವಿಧಿಸಿದೆ. ಹಾಗಾಗಿ, ಪಾಲಿಕೆಗೆ ಯಾವುದೇ ಸಭೆ, ಕಾರ್ಯಕ್ರಮಗಳಿಗೆ ಅನುಮತಿ ನೀಡುವ ಅಧಿಕಾರವಿಲ್ಲ. ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರಿಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಬಹುದು. ಧ್ವಜಾರೋಹಣಕ್ಕೆ ಯಾವುದೇ ನಿರ್ಬಂಧ ಇಲ್ಲ" ಎಂದರು.

ನಿಮಗೆ ಏನು ಅನ್ನಿಸ್ತು?
0 ವೋಟ್