
- ಈ ವರ್ಷ ಪಟಾಕಿ ವಹಿವಾಟು ಅಂದಾಜು ₹55 ಕೋಟಿಗಿಂತ ಹೆಚ್ಚಾಗಿದೆ
- 200 ಸ್ಥಳಗಳಲ್ಲಿ ಪಟಾಕಿ ವ್ಯಾಪಾರಕ್ಕೆ ಅನುಮತಿ ನೀಡಿದ್ದ ಬಿಬಿಎಂಪಿ
ದೀಪಾವಳಿ ಹಬ್ಬದ ಪಟಾಕಿ ಕೆಲವರಿಗೆ ಹಾನಿ ಉಂಟುಮಾಡಿದ್ದರೆ ಇನ್ನೂ ಹಲವರ ಬದುಕಿಗೆ ಬೆಳಕು ನೀಡಿದೆ. ಕಳೆದ ಎರಡು ವರ್ಷ ಕೋವಿಡ್ ಕಾರಣದಿಂದ ಲಾಭ ಪಡೆಯದೇ ಬರೀ ನಷ್ಟವನ್ನೇ ಅನುಭವಿಸಿದ್ದ ಪಟಾಕಿ ವರ್ತಕರು ಈ ವರ್ಷ ಕೊಂಚ ಲಾಭ ನೋಡುತ್ತಿದ್ದಾರೆ.
ಬೆಂಗಳೂರಿನಲ್ಲಿ ಈ ವರ್ಷ ಪಟಾಕಿ ವಹಿವಾಟು ಅಂದಾಜು ₹55 ಕೋಟಿಗಿಂತ ಹೆಚ್ಚಾಗಿದೆ. ಹಬ್ಬದ ಆರಂಭದ ದಿನದಲ್ಲಿ ವ್ಯಾಪಾರ ಕುಸಿಯುವ ಆತಂಕದಲ್ಲಿ ಪಟಾಕಿ ವರ್ತಕರು, ಹೆಚ್ಚುವರಿ ರಿಯಾಯಿತಿ ನೀಡಿರುವುದು ಕೂಡ ವಹಿವಾಟು ಹೆಚ್ಚಲು ಕಾರಣವಾಗಿದೆ.
ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳ 200 ಸ್ಥಳಗಳಲ್ಲಿ ಪಟಾಕಿ ವ್ಯಾಪಾರಕ್ಕೆ ಪಾಲಿಕೆ ಅನುಮತಿ ನೀಡಿತ್ತು. ನಗರದ ಸುಮಾರು 565 ಮಳಿಗೆಗಳಲ್ಲಿ ಚಿಲ್ಲರೆ ಪಟಾಕಿ ವ್ಯಾಪಾರ ನಡೆದಿದೆ. ಈ ವರ್ಷ ಸುಮಾರು ₹70 ಕೋಟಿ ವ್ಯಾಪಾರ ನಡೆಯುವ ನಿರೀಕ್ಷೆಯಿತ್ತು. ಆದರೆ, ₹45 ರಿಂದ ₹55 ಕೋಟಿ ವ್ಯಾಪಾರವಾಗಿದೆ ಎಂದು ಪಟಾಕಿ ವರ್ತಕರು ತಿಳಿಸಿದ್ದಾರೆ.
"ದೀಪಾವಳಿ ಹಬ್ಬದ ಮೊದಲ ದಿನ ವ್ಯಾಪಾರ ಕುಸಿಯುವ ಭೀತಿ ಇತ್ತು. ಗ್ರಹಣದ ಸಮಯದಲ್ಲಿ ಅಷ್ಟಾಗಿ ವ್ಯಾಪಾರ ನಡೆದಿಲ್ಲ. ಹಬ್ಬದ ಎರಡನೇ ದಿನ ವ್ಯಾಪಾರದಲ್ಲಿ ಏರಿಕೆ ಕಂಡಿದೆ. ಕೊನೆಯ ದಿನವೂ ಕೂಡಾ ಸಾಧಾರಣ ವ್ಯಾಪಾರವಾಗಿದೆ. ಒಟ್ಟಾರೆ ಎರಡು ದಿನಗಳಲ್ಲಿ ಶೇ.70%ಕ್ಕಿಂತ ಹೆಚ್ಚು ವ್ಯಾಪಾರವಾಗಿದೆ. ವ್ಯಾಪಾರದಲ್ಲಿ ನಷ್ಟವಾಗಿಲ್ಲ" ಎಂದು ಸುವರ್ಣ ಕರ್ನಾಟಕ ಕ್ರ್ಯಾಕರ್ಸ್ ಅಸೋಸಿಯೇಶನ್ ಖಜಾಂಚಿ ಮಂಜುನಾಥ ರೆಡ್ಡಿ ಈ ದಿನ.ಕಾಮ್ಗೆ ತಿಳಿಸಿದರು.
ಪಟಾಕಿ ವ್ಯಾಪಾರದ ಲಾಭ-ನಷ್ಟದ ಬಗ್ಗೆ ಈ ದಿನ.ಕಾಮ್ ಜತೆ ಮಾತನಾಡಿದ ಪಟಾಕಿ ವ್ಯಾಪಾರಿ ಶಿವಾನಂದ, ”ಹಸಿರು ಪಟಾಕಿ ಮಾರಾಟ ಮಾಡಿದ್ದೇವೆ. ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಪಟಾಕಿ ವಹಿವಾಟು ಉತ್ತಮವಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ದೀಪಾವಳಿ | ಪಟಾಕಿ ಅವಘಡ; ಹಿಂದಿನ ವರ್ಷಕ್ಕಿಂತ ಹೆಚ್ಚು ಪ್ರಕರಣ; 100ಕ್ಕೂ ಅಧಿಕ ಮಂದಿಗೆ ಗಾಯ
ಶಿವಕಾಶಿ ಕ್ಯ್ರಾಕರ್ ಬಜಾರ್ ಮಾಲಕಿ ಲಲಿತಾ ಈ ದಿನ.ಕಾಮ್ ಜತೆ ಮಾತನಾಡಿ, “ವ್ಯಾಪಾರಕ್ಕೆ ತಂದ ಪಟಾಕಿ ಎಲ್ಲವೂ ಖಾಲಿಯಾಗಿದೆ. ಈ ವರ್ಷ ವ್ಯಾಪಾರ ಉತ್ತಮವಾಗಿದೆ. ಹಸಿರು ಪಟಾಕಿ ಮಾರಾಟ ಮಾಡಿದ್ದೇವೆ. ಕೋವಿಡ್ ವರ್ಷಕ್ಕೂ ಈ ವರ್ಷಕ್ಕೂ ಹೋಲಿಕೆ ಮಾಡಿದರೆ, ಈ ವರ್ಷ ವ್ಯಾಪಾರ ಉತ್ತಮವಾಗಿದೆ. ಯಾವುದೇ ನಷ್ಟವಾಗಿಲ್ಲ" ಎಂದು ಹೇಳಿದರು.