ಬೆಂಗಳೂರು | 3ನೇ ಹಂತದ ಮೆಟ್ರೊ ರೈಲು ಯೋಜನೆಗೆ ಹಣಕಾಸು ಇಲಾಖೆ ಅನುಮೋದನೆ

  • ಹೊಸಹಳ್ಳಿ ಮೆಟ್ರೊ ನಿಲ್ದಾಣದಿಂದ ಕಡಬಗೆರೆ ತನಕ 12.82 ಕಿ.ಮೀ ಮಾರ್ಗ
  • ಕೇಂದ್ರದ ಅನುಮೋದನೆ ಬಳಿಕ ಕಾಮಗಾರಿ ಪೂರ್ಣಗೊಳ್ಳಲು 5 ವರ್ಷ

ನಮ್ಮ ಮೆಟ್ರೋದ ಮೂರನೇ ಹಂತದ ಕಾಮಗಾರಿಗೆ ಹಣಕಾಸು ಇಲಾಖೆ ತಾತ್ವಿಕ ಅನುಮೋದನೆ ನೀಡಿದೆ.

ಸಾರ್ವಜನಿಕ ಸಂಚಾರ ಸೇವೆಯಲ್ಲಿ ಮಹತ್ವದ ಹೆಜ್ಜೆಯಾದ ಇದು, ಬೆಂಗಳೂರಿನ ಸಂಚಾರದಟ್ಟಣೆ ಕಡಿತ ಮಾಡುವ ಮೂಲಕ ಜನರಿಗೆ ಸುಲಲಿತ ಸಂಚಾರ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ನಮ್ಮ ಮೆಟ್ರೋ ಜಾಲ ವಿಸ್ತರಣೆಗೆ ದೊಡ್ಡ ಕೊಡುಗೆ ನೀಡಲಿದೆ.

Eedina App

ಮೆಟ್ರೊ 3ನೇ ಹಂತದ(ಎ) ಯೋಜನೆಯು ಪಶ್ಚಿಮದ ಹೊರ ವರ್ತುಲ ರಸ್ತೆಯಲ್ಲಿ ಕೆಂಪಾಪುರದಿಂದ ಜೆ.ಪಿ.ನಗರದ 4ನೇ ಹಂತದ ತನಕ 32.16 ಕಿ.ಮೀ ಹಾಗೂ ಮಾಗಡಿ ರಸ್ತೆಯಲ್ಲಿ ಹೊಸಹಳ್ಳಿ ಮೆಟ್ರೊ ನಿಲ್ದಾಣದಿಂದ ಕಡಬಗೆರೆ ತನಕ 12.82 ಕಿ.ಮೀ ಉದ್ದದ ಎರಡು ಮಾರ್ಗಗಳು ನಿರ್ಮಾಣವಾಗಲಿದೆ.

ಈ ಮೂರನೇ ಹಂತದ ಮೆಟ್ರೋ ಯೋಜನೆಗೆ ಒಟ್ಟಾರೆ ₹16,368 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಕಾಮಗಾರಿಗೆ ಕೇಂದ್ರದ ಅನುಮೋದನೆ ದೊರೆತ ಬಳಿಕ ಇದು ಸಂಪೂರ್ಣವಾಗಿ ಪೂರ್ಣಗೊಳ್ಳಲು ಐದು ವರ್ಷ ಕಾಲಾವಕಾಶ ಬೇಕಾಗಲಿದೆ.

AV Eye Hospital ad

ಪ್ರಸ್ತುತವಾಗಿ ಮೆಟ್ರೋ ಕಾಮಗಾರಿ ಅಸ್ತಿತ್ವದಲ್ಲಿರುವ ಮಾದರಿಯಲ್ಲೇ, ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಶೇ.20ರಷ್ಟು ಹಾಗೂ ಬಾಹ್ಯ ಮೂಲಗಳಿಂದ ಶೇ.60ರಷ್ಟು ಸಾಲ ಪಡೆದು ಹೊಸ ಮಾರ್ಗಗಳಿಗೆ ಹಣಕಾಸಿನ ವ್ಯವಸ್ಥೆ ಮಾಡಿಕೊಳ್ಳಲಾಗುವುದು ಎಂದು ತಿಳಿದು ಬಂದಿದೆ.

"ಪ್ರಸ್ತತ ಮೆಟ್ರೋ ಮೂರನೇ ಹಂತದ ಕಾಮಗಾರಿಗೆ ರಾಜ್ಯ ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆಯಲಾಗಿದೆ. ಈ ಬಗ್ಗೆ ನಗರಾಭಿವೃದ್ಧಿ ಇಲಾಖೆ ಕೂಡ ಒಪ್ಪಿಗೆ ನೀಡಿದೆ. ಕೇಂದ್ರ ಸರ್ಕಾರಕ್ಕೆ ನಗರಾಭಿವೃದ್ಧಿ ಇಲಾಖೆ ಮೂಲಕ ಒಂದು ವಾರದಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವುದು" ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಹೇಳಿದರು.

ಪಶ್ಚಿಮದ ಹೊರ ವರ್ತುಲ ರಸ್ತೆಯಲ್ಲಿ ಕೆಂಪಾಪುರದಿಂದ ಜೆ.ಪಿ.ನಗರದ 4ನೇ ಹಂತದ ತನಕ ಒಟ್ಟು 22 ನಿಲ್ದಾಣಗಳು ಇದ್ದು, ಇಂಟರ್ ಚೇಂಜ್ 6 ನಿಲ್ದಾಣಗಳು ಇರಲಿವೆ. ಮಾಗಡಿ ರಸ್ತೆಯಲ್ಲಿ ಹೊಸಹಳ್ಳಿ ಮೆಟ್ರೊ ನಿಲ್ದಾಣದಿಂದ ಕಡಬಗೆರೆ ಮಾರ್ಗದಲ್ಲಿ ಸುಮನಹಳ್ಳಿ ಬಳಿ ಇಂಟರ್ ಚೇಂಜ್ ನಿಲ್ದಾಣ ಇರಲಿದೆ. ಪೀಣ್ಯದಲ್ಲಿ ಇಂಟರ್ ಚೇಂಜ್ ನಿಲ್ದಾಣ ನಿರ್ಮಿಸುವ ಬಗ್ಗೆ ಪ್ರಸ್ತಾಪ ಇಲ್ಲದಿದ್ದರೂ ಎರಡು ನಿಲ್ದಾಣಗಳ ನಡುವೆ ಪಾದಚಾರಿ ಮೇಲ್ಸೇತುವೆ ನಿರ್ಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬಿಬಿಎಂಪಿ ಇಬ್ಬರು ಮುಖ್ಯ ಎಂಜಿನಿಯರ್‌ಗಳ ವರ್ಗಾವಣೆ

ಸುಂಕದಕಟ್ಟೆ ಬಳಿ 70 ಎಕರೆ ಜಾಗದಲ್ಲಿ 3ನೇ ಹಂತದ ಈ ಹೊಸ ಯೋಜನೆಗಳನ್ನು ನಿರ್ವಹಿಸಲು ಮೆಟ್ರೊ ರೈಲು ಡಿಪೊ ನಿರ್ಮಿಸಲು ಉದ್ದೇಶಿಸಲಾಗಿದೆ. ನಗರದಲ್ಲಿನ ಎರಡನೇ ಅತಿ ದೊಡ್ಡ ಮೆಟ್ರೊ ರೈಲು ಡಿಪೊ ನಿರ್ಮಾಣವಾಗುವ ಸಾಧ್ಯತೆ ಇದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app